ಸಂ.ಕ. ಸಮಾಚಾರ, ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಸಂಪರ್ಕಿಸುವ ನಾಲ್ಕು ಪ್ರಮುಖ ದ್ವಾರಗಳಿಗೆ ದೇಶದ ಶ್ರೇಷ್ಠ ದಾರ್ಶನಿಕರ ಹೆಸರನ್ನು ಇಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಪ್ರತಿಪಾದಕ ಆಚಾರ್ಯತ್ರಯರು ಹಾಗೂ ರಾಮಾನಂದ ಪಂಥದ ದೃಷ್ಟಾರರ ಹೆಸರು ಇಡಲಾಗಿದೆ.
ಅದರಂತೆ ಜಗದ್ಗುರು ಶ್ರೀ ಶಂಕರಾಚಾರ್ಯ ದ್ವಾರ, ಜಗದ್ಗುರು ಶ್ರೀ ರಾಮಾನುಜಾಚಾರ್ಯ ದ್ವಾರ, ಜಗದ್ಗುರು ಶ್ರೀ ಮಧ್ವಾಚಾರ್ಯ ದ್ವಾರ ಹಾಗೂ ಆಚಾರ್ಯ ಶ್ರೀ ರಾಮಾನಂದಾಚಾರ್ಯ ದ್ವಾರ ಎಂಬ ಹೆಸರಿಡಲಾಗಿದೆ.
ದ್ವಾರಗಳ ನಿರ್ಮಾಣ ಇನ್ನೂ ಪೂರ್ಣವಾಗಿಲ್ಲ. ಮಂದಿರ ಪ್ರವೇಶ ದ್ವಾರಗಳಿಗೆ ಈ ಹೆಸರುಗಳನ್ನು ಇಡಬೇಕು ಎಂಬ ಸಲಹೆ ಬಂದಿರುವ ಹಿನ್ನೆಲೆಯಲ್ಲಿ ತೀರ್ಥಕ್ಷೇತ್ರ ಟ್ರಸ್ಟ್ ಅದನ್ನು ಒಪ್ಪಿ ನಿರ್ಧಾರ ತೆಗೆದುಕೊಂಡಿದೆ ಎಂದು ಟ್ರಸ್ಟಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.