ಅತ್ತಾವರ ವಿರುದ್ಧ ವಾಮಾಚಾರ ಪ್ರಕರಣ ದಾಖಲು

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಸೈಟ್‌ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುಗೆ ಇನ್ನಷ್ಟು ಶಕ್ತಿ ತುಂಬಲು ಪ್ರಾಣಿ ರಕ್ತ ಬಲಿ ನೀಡಿ ವಾಮಾಚಾರ ಮಾಡಿದ್ದಾರೆ ಎಂದು ಪ್ರಸಾದ್‌ ಅತ್ತಾವರ ವಿರುದ್ಧ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸು ದಾಖಲಿಸಲಾಗಿದೆ.
ಮಂಗಳೂರಿನಲ್ಲಿ ಜ. 23ರಂದು ನಡೆದ ಮಸಾಜ್ ಪಾರ್ಲರ್‌ ದಾಳಿಯಲ್ಲಿ ಪ್ರಸಾದ್‌ ಅತ್ತಾವರ ಮತ್ತು ಇತರೆ 13 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಪ್ರಸಾದ್‌ ಅತ್ತಾವರ ಬಳಿ ಇದ್ದ ಎರಡು ಮೊಬೈಲ್‌ ಫೋನ್‌ಗಳ ಮೆಸೇಜ್‌ಗಳನ್ನು ಪರಿಶೀಲಿಸಿದಾಗ ವಾಮಾಚಾರ ನಡೆಸಿರುವುದು ಪೊಲೀಸರಿಗೆ ಗೊತ್ತಾಗಿದೆ.
ವಾಮಾಚಾರ ಮೂಲಕ ಶಕ್ತಿ ತುಂಬಿದರೇ?:
ಸಿಎಂ ಸಿದ್ದರಾಮಯ್ಯ ವಿರುದ್ಧ ಮೂಡಾ ಕೇಸಿನಲ್ಲಿ ದೂರು ನೀಡಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ವಾಮಾಚಾರ ಮೂಲಕ ಶಕ್ತಿ ತುಂಬುವ ಕೆಲಸವನ್ನು ಪ್ರಸಾದ್‌ ಅತ್ತಾವರ ಮಾಡಿದ್ದಾರೆ ಎಂದು ಶಂಕೆ ಮೂಡುವಂತಹ ಸಾಕ್ಷ್ಯ ಪೊಲೀಸರಿಗೆ ಲಭ್ಯವಾಗಿದೆ.
ಪಾರ್ಲರ್‌ ದಾಳಿ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಸಾದ್‌ ಅತ್ತಾವರನ ಮೊಬೈಲ್‌ನಲ್ಲಿ ಸೆನ್‌ ಠಾಣೆಯಲ್ಲಿ ರಿಟ್ರೀಟ್‌ಗೆ ಒಳಪಡಿಸಿದ್ದರು. ಆಗ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಪರವಾಗಿ ಅತಿಮಾನುಷ ಶಕ್ತಿಯನ್ನು ಆಹ್ವಾನಿಸಿ ಅವರಿಗೆ ಮತ್ತಷ್ಟು ಶಕ್ತಿ ನೀಡಲು ಪ್ರಯತ್ನಿಸಿರುವ ಅಂಶ ಪತ್ತೆಯಾಗಿದೆ.
ಪ್ರಸಾದ್‌ ಅತ್ತಾವರ ಮತ್ತು ಅನಂತ ಭಟ್‌ ಎಂಬವರ ನಡುವೆ ಹಲವು ವಿಚಾರಗಳ ಸಂವಹನ ನಡೆದಿದೆ. ಅಲ್ಲದೆ ವಾಮಾಚಾರದ ವಿಡಿಯೋಗಳು ಕೂಡ ಪರಸ್ಪರ ರವಾನೆಯಾಗಿದೆ. ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗಳನ್ನು ಮುಂದಿರಿಸಿ ಐದು ಕುರಿಗಳನ್ನು ಬಲಿ ಕೊಡಲಾಗಿದೆ. ಇವರ ಫೋಟೋಗಳಿಗೆ ರಕ್ತತರ್ಪಣ ಮಾಡಿ ಮತ್ತಷ್ಟು ಶಕ್ತಿ ತುಂಬುವ ಪ್ರಯತ್ನ ಮಾಡಿರುವ ರೀತಿಯ ವಿಡಿಯೋಗಳು ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಕಮಿಷನರ್‌ ಅನುಪಮ ಅಗರ್‌ವಾಲ್‌ ಸೂಚನೆ ಮೇರೆಗೆ ಬರ್ಕೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದ್ದಾರೆ.