ಬೆಂಗಳೂರು: ಜರ್ಮನಿಯ ಲಿಂಡೌ ನೊಬೆಲ್ ಸಭೆಗೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಸಾಯನಶಾಸ್ತ್ರ ವಿಭಾಗದ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಧರ್ಮಪತ್ನಿ ಅರುಣಾ ಲಕ್ಷ್ಮೀ ರೆಡ್ಡಿ ಅವರು ಆಹ್ವಾನಿಸಿ ಆತ್ಮೀಯವಾಗಿ ಸನ್ಮಾನಿಸಿ ಶುಭ ಹಾರೈಸಿದ್ದಾರೆ. ಈ ಕುರಿತಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಜರ್ಮನಿಯ ಲಿಂಡೌನಲ್ಲಿ ಜೂನ್ 29 ರಿಂದ ಜುಲೈ 4ರ ವರೆಗೆ ಜರುಗಲಿರುವ ಪ್ರತಿಷ್ಠಿತ ಅಂತರಾಷ್ಟ್ರೀಯ ಲಿಂಡೌ ನೋಬೆಲ್ ಪುರಸ್ಕೃತರ ಸಭೆಗೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಾದ ಗೌತಮಿ ಪಾಟೀಲ್ ಮತ್ತು ಡಾ.ನಸೀಮ್ ಕೌಸರ್ ಆಯ್ಕೆಯಾಗಿದ್ದಾರೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಡಿಎಸ್ಟಿ ದೇಶವ್ಯಾಪಿ ಆಯ್ಕೆ ಮಾಡಿರುವ ಒಟ್ಟು 29 ಯುವ ವಿಜ್ಞಾನಿಗಳ ಪೈಕಿ ಬಳ್ಳಾರಿ ನಗರದ ಗೌತಮಿ ಪಾಟೀಲ್ ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿಯವರಾದ ಡಾ.ನಸೀಮ್ ಕೌಸರ್ ಇಬ್ಬರು ವಿದ್ಯಾರ್ಥಿಗಳು ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ಪ್ರತಿವರ್ಷ ಜರುಗುವ ವಿಶ್ವದ ಆಯ್ದ 600 ಯುವ ವಿಜ್ಞಾನಿಗಳನ್ನು ಆಹ್ವಾನಿಸಿ ನೋಬೆಲ್ ಪ್ರಶಸ್ತಿ ಪುರಸ್ಕೃತ ದಿಗ್ಗಜರೊಂದಿಗೆ ಚರ್ಚಾಕೂಟ, ದುಂಡು ಮೇಜಿನ ಪರಿಷತ್ತುಗಳನ್ನು ನಡೆಸಲಾಗುತ್ತದೆ ಎಂದಿದ್ದಾರೆ