ಬೆಂಗಳೂರು: ಬೆಂಗಳೂರು ನಗರದ ಉತ್ತರಹಳ್ಳಿ–ಕೆಂಗೇರಿ ರಸ್ತೆಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ಅಭಿಮಾನಿಗಳ ಪಾಲಿನ ಸಾಹಸ ಸಿಂಹ, ನಟ ದಿ. ವಿಷ್ಣುವರ್ಧನ್ ಸಮಾಧಿಯನ್ನು ತೆರವು ಈಗ ಚರ್ಚೆಯ ವಿಚಾರ. ಈ ಕುರಿತು ಹಲವಾರು ನಟರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಕೇಂದ್ರ ಸಚಿವೆ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ.
ಸಚಿವರು ತಮ್ಮ ಪೋಸ್ಟ್‌ನಲ್ಲಿ, ‘ಕನ್ನಡ ಚಲನಚಿತ್ರರಂಗಕ್ಕೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕೊಡುಗೆಯ ಬಗ್ಗೆ ಇಡೀ ಕರುನಾಡಿನ ಮನೆಮನಗಳೂ ಮಾತನಾಡುತ್ತವೆ. ಎಲ್ಲರ ಮನೆಮಾತಾದ ಅಂತಹ ಅದ್ಭುತ ನಟಶ್ರೇಷ್ಠರಿಗೆ ಸೂಕ್ತ ಗೌರವ ನೀಡಲಾಗದ, ಅವರ ಸಮಾಧಿಸ್ಥಳವನ್ನು ಉಳಿಸಿಕೊಳ್ಳಲಾಗದ ಸ್ಥಿತಿಗೆ ನಾವು ತಲುಪಿದ್ದೇವೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿ’ ಎಂದು ಹೇಳಿದ್ದಾರೆ.
‘ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಅಭಿಮಾನ್ ಸ್ಟುಡಿಯೋ ಭಾಗವನ್ನು ರಾತ್ರೋರಾತ್ರಿ ಕೆಡವಿ, ಅಸಂಖ್ಯಾತ ಅಭಿಮಾನಿಗಳಿಗೂ ಹಾಗೂ ಅವರ ಅಪೂರ್ವ ಸಾಧನೆಗಳಿಗೂ ಅನ್ಯಾಯ ಮಾಡಿರುವುದು ಅತ್ಯಂತ ನೋವುಂಟುಮಾಡಿದೆ’ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
‘ಆ ನಿಟ್ಟಿನಲ್ಲಿ ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಭೂಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡಲೇ ಜಾಗದ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು, ಅವರಿಗೂ ಸರ್ಕಾರಿ ನಿಯಮಾನುಸಾರ ಪರಿಹಾರ ನ್ಯಾಯಸಮ್ಮತ ನೀಡುವುದಲ್ಲದೇ, ಸ್ಮಾರಕವನ್ನು ಕಾಪಾಡುವುದಲ್ಲದೇ, ಅದನ್ನು ರಾಷ್ಟ್ರಮಟ್ಟದ ಪ್ರವಾಸಿ ಕೇಂದ್ರವಾಗಿ, ಕಲೆ-ಸಂಸ್ಕೃತಿಯ ಪ್ರತೀಕವಾಗಿ ಕಲಾಗ್ರಾಮವಾಗಿ ಅಭಿವೃದ್ಧಿಪಡಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಒತ್ತಾಯಿಸಿದ್ದೇನೆ’ ಎಂದು ಪೋಸ್ಟ್ ಹಾಕಿದ್ದಾರೆ.
‘ಕನ್ನಡ ನಾಡಿನ ಕಲೆ, ಸಂಸ್ಕ್ರತಿಗಳ ಉಳಿವಿಗೆ ಕೊಡುಗೆ ನೀಡಿದ ಪ್ರತಿಯೊಬ್ಬ ಕಲಾವಿದನ ಘನತೆ-ಗೌರವ ಕಾಪಾಡುವುದು ಕನ್ನಡಿಗರ ಕರ್ತವ್ಯ. ಜನಪ್ರತಿನಿಧಿಯಾಗಿ ಸದಾ ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ.
ಸಚಿವರ ಪತ್ರದ ವಿವರ
ಮಾನ್ಯರೇ,
ಕರ್ನಾಟಕದ ಚಲನಚಿತ್ರ ಲೋಕದಲ್ಲಿ ‘ಸಾಹಸಸಿಂಹ’ ಎಂದು ಹೆಸರಾಂತ, ಜನಮನಗಳನ್ನು ಗೆದ್ದ, ಶ್ರೇಷ್ಠ ನಟ, ಪದ್ಮಭೂಷಣ ಪುರಸ್ಕೃತ, ಸಂಸ್ಕೃತಿ ಪ್ರೇಮಿ ಡಾ. ವಿಷ್ಣುವರ್ಧನ್ ಅವರ ಸೇವೆ ಮತ್ತು ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಮತ್ತು ಕರ್ನಾಟಕದ ಹೆಸರನ್ನು ದೇಶದಾದ್ಯಂತ ಪರಿಚಯಿಸಿದ ಮಹಾನ್ ವ್ಯಕ್ತಿಯಾಗಿದ್ದರು.
ಬೆಂಗಳೂರಿನ ಆಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ. ವಿಷ್ಣುವರ್ಧನ್ ರವರ ಸ್ಮಾರಕ, ಕನ್ನಡಾಭಿಮಾನಿಗಳ ಹೃದಯದಲ್ಲಿ ಭಾವನಾತ್ಮಕ ಪ್ರೇರಣೆಯ ಕೇಂದ್ರವಾಗಿದೆ. ಆದರೆ ಇತ್ತೀಚೆಗೆ, ಸ್ಥಾರಕ ಇರುವ ಜಾಗವನ್ನು ಕೆಲವರು ತಮ್ಮ ಹಕ್ಕು ಭೂಮಿಯೆಂದು ಹೇಳಿಕೊಂಡು ರಾತ್ರೋರಾತ್ರಿ ಧ್ವಂಸ ಮಾಡಿರುವುದು ನಮ್ಮೆಲ್ಲರಿಗೂ ಭಾರೀ ನೋವು ತಂದಿದೆ.
ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಶಾಶ್ವತವಾಗಿ ಕಾಪಾಡಿ, ಅದನ್ನು ರಾಷ್ಟ್ರೀಯ ಮಟ್ಟದ ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿ, ಕಲೆಯ ಪ್ರದರ್ಶನ ಮತ್ತು ತರಬೇತಿಯ ಕಲಾ ಗ್ರಾಮವಾಗಿ ಹಾಗೂ ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಅಭಿವೃದ್ಧಿಪಡಿಸುವಂತೆ ಕೋರುತ್ತೇನೆ.
ಈ ಹಿನ್ನೆಲೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸದರಿ ಭೂಮಿಯನ್ನು ತಕ್ಷಣವೇ ಭೂಸ್ವಾಧೀನಪಡಿಸಿಕೊಳ್ಳಬೇಕು ಹಾಗು ಭೂ ಮಾಲೀಕರಿಗೆ ಸರ್ಕಾರದ ನಿಯಮಾನುಸಾರ ನ್ಯಾಯಸಮ್ಮತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ.