ಸಂಯುಕ್ತ ಕರ್ನಾಟಕ ಪತ್ರಿಕೆ ಇಂದಿನ ಸಂಪಾದಕೀಯ: ಬೀದಿ ನಾಯಿಗೆ ಬಾಡೂಟ, ಹೆಚ್ಚಿಸಲಿದೆ ನಾಯಿ ಕಾಟ

0
19

ಬೆಂಗಳೂರು ನಗರ ಹೇಗೆ ಐಟಿ ಬಿಟಿ ಸಿಟಿ ಎಂದು ಹೆಸರುಗಳಿಸಿದೆಯೋ ಹಾಗೆ ಬೀದಿನಾಯಿಗಳಿಗೂ ತವರೂರಾಗಿದೆ. ಒಂದು ಅಂದಾಜಿನ ಪ್ರಕಾರ 2.80 ಲಕ್ಷ ಬೀದಿನಾಯಿಗಳಿವೆ. ಬೆಂಗಳೂರು ನಗರದ ಹವಾಮಾನ ಅದಕ್ಕೆ ಅನುಕೂಲವಾಗಿದೆ. ಒಂದು ಹೆಣ್ಣುನಾಯಿ ೬ ವರ್ಷಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಮರಿ ಹಾಕಬಲ್ಲುದು ಎಂದು ಪಶುವೈದ್ಯರು ಹೇಳುತ್ತಾರೆ. ಅಂದರೆ ಇದು ಸಂಖ್ಯೆ ಬಹಳ ವೇಗದಲ್ಲಿ ಬೆಳೆಯುತ್ತದೆ.

ಹಿಂದೆ ಬಿಬಿಎಂಪಿ ನಾಯಿಗಳನ್ನು ಹಿಡಿದು ಕೊಲ್ಲುವ ಕೆಲಸ ಕೈಗೊಳ್ಳುತ್ತಿತ್ತು. ಪ್ರಾಣಿ ದಯಾಸಂಘದ ಹೋರಾಟದ ಫಲ ಈಗ ನಾಯಿಯನ್ನು ಕೊಲ್ಲುವಂತಿಲ್ಲ. ನಾಯಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಬಹುದು. ಈ ಕೆಲಸವನ್ನು ಮಾಡಲು ಬಿಬಿಎಂಪಿ ಸ್ವಯಂಸೇವಾ ಸಂಸ್ಥೆಗಳ ನೆರವು ಪಡೆದುಕೊಳ್ಳುತ್ತಿವೆ. ಇದರಲ್ಲಿ ಕೆಲವು ಸಂಸ್ಥೆಗಳು ಉತ್ತಮ ಸೇವೆ ಸಲ್ಲಿಸುತ್ತಿವೆ. ಬಹುತೇಕ ಸಂಸ್ಥೆಗಳು ಹಣ ಲೂಟಿ ಮಾಡುವ ಕೇಂದ್ರಗಳಾಗಿವೆ.

ಈಗ ಬೀದಿನಾಯಿಗಳಿಗೆ ಬಾಡೂಟ ಹಾಕಲು ಬಿಬಿಎಂಪಿ ಹೊರಟಿದೆ. ಇದಕ್ಕಾಗಿ 2.88 ಕೋಟಿ ರೂ. ವೆಚ್ಚ ಮಾಡಲು ಟೆಂಡರ್ ಕರೆದಿದೆ. ಇದು ಅಂದಾಜು ಪ್ರತಿದಿನ 5 ಸಾವಿರ ನಾಯಿಗಳಿಗೆ ಊಟ ಕೊಡೋದು. ಉಳಿದ ಬೀದಿನಾಯಿಗಳ ಕತೆ ಏನು ಎಂಬುದು ತಿಳಿಯದು. ಈಗ ಎಲ್ಲ ಕಡೆ ಉಚಿತ ಗ್ಯಾರಂಟಿಗಳದೇ ಮಾತುಕತೆ. ಎಲ್ಲ ಗ್ಯಾರಂಟಿಗಳು ಹಣಕಾಸಿನ ಕೊರತೆ ಬಂದ ಕೂಡಲೇ ನಿಂತು ಹೋಗುತ್ತವೆ. ಬೀದಿ ನಾಯಿಗಳಿಗೆ ಬಾಡೂಟ ನಿಲ್ಲಿಸಲು ಬರುವುದಿಲ್ಲ.

ಅವುಗಳ ಬೀದಿಯಲ್ಲಿ ಹೋಗುವ ಜನರ ಮೇಲೆ ಬೀಳುವುದಂತೂ ಗ್ಯಾರಂಟಿ. ನಮ್ಮ ಶಾಸಕರು, ಸಚಿವರು ಕಾರಿನಲ್ಲಿ ಓಡಾಡುತ್ತಾರೆ. ಅವರಿಗೆ ಬೀದಿನಾಯಿಗಳ ಕಾಟದ ಅನುಭವ ಇರುವುದಿಲ್ಲ. ಮಧ್ಯರಾತ್ರಿ ನಡೆದು ಬಂದರೆ ತಿಳಿಯುತ್ತದೆ. ಬೀದಿನಾಯಿಗಳು ಗುಂಪುಗುಂಪಾಗಿ ಮಧ್ಯರಸ್ತೆಯಲ್ಲಿ ಮಲಗಿರುತ್ತದೆ. ಅವುಗಳಿಗೆ ತಿಳಿಯದಂತೆ ಸದ್ದಿಲ್ಲದೆ ರಸ್ತೆಯ ಮೂಲೆಯಲ್ಲಿ ನಡೆದು ಪಾರಾಗಬೇಕು. ಒಂದುವೇಳೆ ನೀವು ಓಡಿದರೆ ಅವುಗಳು ಬಿಡುವುದೇ ಇಲ್ಲ. ಮಧ್ಯರಾತ್ರಿ ನಿಮ್ಮ ರಕ್ಷಣೆಗೆ ಯಾರೂ ಇರುವುದಿಲ್ಲ. ಅದರಲ್ಲೂ ದ್ವಿಚಕ್ರವಾಹನದಲ್ಲಿ ಹೋಗುವವರಿಗೆ ಬಹಳ ತೊಂದರೆ ಎಂಜಿನ್ ಆಫ್ ಮಾಡಿ ಸದ್ದಿಲ್ಲದೆ ಹೋಗಬೇಕು. ಇಲ್ಲದಿದ್ದಲ್ಲಿ ಬೈಕ್‌ಸಮೇತ ನೀವು ಬೀಳುವುದು ಖಂಡಿತ.

ಕೆಲವು ಬಡಾವಣೆಗಳಲ್ಲಿ ಅಲ್ಲಿಯ ನಿವಾಸಿಗಳು ಬಹಳ ಪ್ರೀತಿಯಿಂದ ಸಾಕುತ್ತಾರೆ. ಅವುಗಳಿಗೆ ತಮ್ಮ ಮನೆ ಊಟ ಕೊಡುತ್ತಾರೆ. ಹೀಗಾಗಿ ಅವರನ್ನು ಗುರುತು ಹಿಡಿಯುತ್ತವೆ. ಬೇರೆಯವರು ಆ ರಸ್ತೆಯಲ್ಲಿ ಓಡಾಡುವುದೇ ಕಷ್ಟ. ಅದರಲ್ಲೂ ಮಕ್ಕಳು ಮತ್ತು ವೃದ್ಧರಿಗೆ ನಾಯಿ ಕಾಟ ಕಟ್ಟಿಟ್ಟಬುತ್ತಿ. ಬಿಬಿಎಂಪಿ ಊಟ ಒಂದು ದಿನ ನಿಂತರೆ ಅದರ ಪರಿಣಾಮ ಬೀದಿಯಲ್ಲಿ ನಡೆದು ಹೋಗುವವರ ಮೇಲೆ ಆಗುತ್ತದೆ.

ಈಗ ಪ್ರತಿವರ್ಷ 15 ಸಾವಿರಕ್ಕೂ ಹೆಚ್ಚು ಜನ ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಾರೆ. ನಾಯಿಗಳ ಸಂತಾನಶಕ್ತಿ ಹರಣಕ್ಕೂ ಹಣ ಬೇಕು. ಅವುಗಳನ್ನು ಹಿಡಿದು 5 ರೋಗಗಳಿಗೆ ಒಂದೇ ಚುಚ್ಚುಮದ್ದು ಕೊಟ್ಟು ಅದು ಎಲ್ಲಿತ್ತೊ ಅಲ್ಲೇ ಬಿಡಬೇಕು. ಬೇರೆ ನಾಯಿಗಳು ಅವುಗಳನ್ನು ಸೇರಿಸಿಕೊಳ್ಳುವುದಿಲ್ಲ. ಈಗ ನಾಯಿ ಹಿಡಿದು ಮೈಕ್ರೋಚಿಪ್ ಅಳವಡಿಸುವ ಕೆಲಸ ನಡೆಯುತ್ತಿದೆ. ಇದರಿಂದ ನಾಯಿ ಎಲ್ಲಿದೆ ಎಂಬುದು ತಿಳಿಯುತ್ತದೆ. ನಾಯಿ ಮರಿಗಳನ್ನು ಹೆಚ್ಚು ಹುಟ್ಟಿಸಿದರೂ ಶೇ. 30 ರಷ್ಟು ಮಾತ್ರ ಉಳಿಯುತ್ತವೆ. ಎಲ್ಲ ಪ್ರಮುಖ ನಗರಗಳಲ್ಲೂ ಬೀದಿನಾಯಿ ಕಾಟ ಇದ್ದೇ ಇದೆ. ಇವುಗಳಿಗೆ ಒಂದೇ ಔಷಧ ಸಂತಾನಶಕ್ತಿ ಹರಣ. ಅದನ್ನು ಸಮರ್ಪಕವಾಗಿ ಮಾಡಿದರೆ ಜನರಿಗೆ ನೆಮ್ಮದಿ ಸಿಗುತ್ತದೆ.

ಅದನ್ನು ಬಿಟ್ಟು ಬೀದಿನಾಯಿಗೆ ಊಟ ಹಾಕಿದರೆ ಜನರ ಕಷ್ಟ ಇನ್ನೂ ಅಧಿಕಗೊಳ್ಳುತ್ತದೆ. ಅಲ್ಲದೆ ಬೀದಿ ನಾಯಿಗಳಿಗೆ ಊಟ ಹಾಕುವವರು ಬಹಳ ಜನ ಇದ್ದಾರೆ. ಅವರು ಸ್ವಪ್ರೇರಣೆಯಿಂದ ತಮ್ಮ ಹಣದಲ್ಲಿ ಊಟ ಕೊಡುತ್ತ ಬಂದಿದ್ದಾರೆ. ಬಸವನಗುಡಿಯಲ್ಲಿ ಸೋಮನಾಥ್ ಎಂಬುವರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 30 ಬೀದಿನಾಯಿಗಳಿಗೆ ಊಟ ಹಾಕುತ್ತಾರೆ. ಅವರಿಗೆ ಬಿಬಿಎಂಪಿ ಸಹಾಯ ಮಾಡಿದ್ದರೆ ಹೆಚ್ಚು ವೆಚ್ಚವಿಲ್ಲದೆ ನಡೆಯುತ್ತಿತ್ತು.

ಈಗ ಬೇರೆಯವರಿಗೆ ಟೆಂಡರ್ ಕೊಟ್ಟಿದ್ದಾರೆ. ಈಗ ಸೋಮನಾಥ್ ಅವರಿಗೆ ಗೊಂದಲ. ಯಾರು ಊಟ ಹಾಕುತ್ತಾರೆ, ಎಲ್ಲಿ ಹಾಕುತ್ತಾರೆ ಎಂಬುದು ತಿಳಿಯದು. ತಾನು ಇಷ್ಟು ವರ್ಷ ನಡೆಸಿಕೊಂಡು ಬಂದಿರುವ ಊಟ ಹಾಕುವ ಪದ್ಧತಿ ಕೈಬಿಡಬೇಕೇ. ಬೀದಿ ನಾಯಿಗಳು ಇವುಗಳನ್ನು ನೋಡಿದ ಕೂಡಲೇ ಓಡಿ ಬರುತ್ತವೆ. ಊಟ ಹಾಕಿದರೆ ಬಿಬಿಎಂಪಿ ಪ್ರಕಾರ ಅಪರಾಧ. ಹಾಕದಿದ್ದರೆ ಮೂಕಪ್ರಾಣಿಗಳ ವೇದನೆಗೆ ಏನು ಮಾಡಬೇಕು? ಈ ರೀತಿ ಎಲ್ಲ ಬಡಾವಣೆಗಳಲ್ಲಿ ಅನ್ನದಾತರು ಇದ್ದಾರೆ. ಅವರು ತಮ್ಮ ಹಣ ವೆಚ್ಚ ಮಾಡಿ ನಾಯಿಗಳಿಗೆ ಊಟ ಕೊಡುತ್ತ ಬಂದಿದ್ದಾರೆ. ಅವರಿಗೆ ಈಗ ಮಾನಸಿಕ ಹಿಂಸೆ.ಬಿಬಿಎಂಪಿ ಅವಾಸ್ತವಿಕ ದುಡ್ಡು ಹೊಡೆಯುವ ಯೋಜನೆಯಿಂದ ಬೀದಿನಾಯಿ ಮತ್ತು ಅನ್ನದಾತ ಇಬ್ಬರಿಗೂ ಕಷ್ಟ.

Previous articleGST: ಬೇಕರಿ, ಚಿಕ್ಕಪುಟ್ಟ ಅಂಗಡಿಗಳಿಗೆ ಜಿಎಸ್‌ಟಿ ನೋಟಿಸ್, ಸ್ಪಷ್ಟನೆಗಳು
Next articleಗೋಕರ್ಣದಲ್ಲಿ ಕಾಡಿನ ಗುಹೆಯೊಳಗಿದ್ದ ರಷ್ಯಾನ್ ಮಹಿಳೆ, ಮಕ್ಕಳು!