ಜ್ವರಕ್ಕೆ ಊರಿಗೂರೇ ಆಸ್ಪತ್ರೆಯಾಗಿ ಮಾರ್ಪಾಡು

Advertisement

ಕುಷ್ಟಗಿ: ತಾಲೂಕಿನ ನೆರಬೆಂಚಿ ಗ್ರಾಮದ ಜನರು ಹೈರಾಣಾಗಿದ್ದಾರೆ. ಸಾಂಕ್ರಾಮಿಕ ಜ್ವರದಿಂದ ತತ್ತರಿಸಿರುವ ಗ್ರಾಮಸ್ಥರಿಗೆ, ಗ್ರಾಮದ ಬೀರಲಿಂಗಶ್ವರ ದೇವಸ್ಥಾನ ಸೇರಿದಂತೆ ಎಲ್ಲಿ ಬೇಕೆಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಡೀ ಗ್ರಾಮದಲ್ಲಿ ಎಲ್ಲರಿಗೂ ಜ್ವರ ಕಾಣಿಸಿಕೊಂಡಿದ್ದು, ಮೈ, ಕೈ ನೋವಿನಿಂದ ಹಾಸಿಗೆ ಹಿಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆರಬೆಂಚಿ ಗ್ರಾಮದಲ್ಲಿ ಸುಮಾರು ೧,೨೦೦ಕ್ಕೂ ಹೆಚ್ಚು ಜನಸಂಖ್ಯೆ ಇದೆ. ೧೫ ದಿನಗಳಿಂದ ಜನರು ಜ್ವರದಿಂದ ಬಳಲುತ್ತಿದ್ದಾರೆ.
ಗ್ರಾಮದಲ್ಲಿ ಹೆಚ್ಚಾಗಿರುವ ವೈರಲ್ ಫೀವರ್ ಕುರಿತು ಟಿಎಚ್‌ಓ ಅವರಿಂದ ಮಾಹಿತಿ ಪಡೆದರು. ಇದೇ ವೇಳೆ ತಹಶೀಲ್ದಾರ್ ರವಿ ಅಂಗಡಿ ಎದುರು ಗ್ರಾಮಸ್ಥರು ಗ್ರಾಮದ ನೈರ್ಮಲ್ಯ, ನೀರಿನ ಸಮಸ್ಯೆ ಕುರಿತು ಅಳಲು ತೋಡಿಕೊಂಡರು. ನಂತರ ಗ್ರಾಮದಲ್ಲಿರುವ ರೋಗಿಗಳನ್ನು ತಾಲೂಕಾಸ್ಪತ್ರೆಗೆ ಸಾಗಿಸುವಂತೆ ತಹಶೀಲ್ದಾರ್ ಸೂಚನೆ ನೀಡಿದರು.
ನೆರೆಬೆಂಚಿ ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಿಂಗರಾಜು ಭೇಟಿ ನೀಡಿ ಪರಿಶೀಲಿಸಿದ್ದು, ಜ್ವರ ಪೀಡಿತರಲ್ಲಿ ಕೆಲವರನ್ನು ಕುಷ್ಟಗಿ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಇಲ್ಲಿಯವರೆಗೂ ೧೧೨ ಜನರಲ್ಲಿ ಜ್ವರ ಕಾಣಿಸಿಕೊಂಡಿದೆ. ಜ್ವರ ಪೀಡಿತರ ರಕ್ತ ಪರೀಕ್ಷೆಯಲ್ಲಿ ಒಬ್ಬರಿಗೆ ಚಿಕ್ಯೂನ್ ಗುನ್ಯಾ ಇರುವುದು ದೃಢವಾಗಿದೆ ಎಂದು ಮಾಹಿತಿ ನೀಡಿದರು.
ಕೈ-ಕಾಲು, ಕೀಲು ನೋವಿನಿಂದ ನೆಲಬಿಟ್ಟು ಏಳಂಗಾಗೇತಿ, ಬಹಿರ್ದೆಸೆಗೆ ಹೋಗಲೂ ಆಗುತ್ತಿಲ್ಲ. ವಿಪರೀತ ಜ್ವರ ಕಾಡಾಕತ್ಯಾವ. ಪರಿಹಾರ ನೀಡುತ್ತಿಲ್ಲ ಎಂದು ಗ್ರಾಮಸ್ಥರಾದ ಮೌನೇಶ ಮೇಟಿ, ಶರಣಪ್ಪ ಹಿರೇಬಂಡಿಹಾಳ, ಅಜ್ಜಪ್ಪ ಕನಕೊಪ್ಪ ತಿಳಿಸಿದರು.
ದೇವಸ್ಥಾನದ ಒಳ-ಹೊರ ಆವರಣ ರೋಗಿಗಳಿಂದ ಭರ್ತಿಯಾಗಿದ್ದು, ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಬಗಳಿಗೆ ದಾರ ಕಟ್ಟಿ ಅದಕ್ಕೆ ಇಳಿ ಬಿಟ್ಟ ಸಲಾಯಿನ್ ಬಾಟಲಿಗಳ ಡ್ರಿಪ್ ಮೂಲಕ ಔಷಧಿ ನೀಡುತ್ತಿರುವುದು ಕಂಡುಬಂದಿತು. ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು ಈ ಕುರಿತಂತೆ ಆರೋಗ್ಯ ಅಧಿಕಾರಿ ಆನಂದ್ ಗೋಟರು ಅವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ರವಿ ಎಸ್. ಅಂಗಡಿ ತಿಳಿಸಿದರು.
ಆರೋಗ್ಯ ಅಧಿಕಾರಿ ಆನಂದ ಗೋಟರು, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಪ್ರಕಾಶ ಗುತ್ತಿದ್ದಾರ ಸೇರಿದಂತೆ ಅನೇಕರು ಇದ್ದರು.