ವಿಧಾನಸೌಧ ಮತ್ತೊಮ್ಮೆ ಜನ ಕಲ್ಯಾಣ ಸೌಧ

Advertisement

ಬೆಂಗಳೂರು: ಉಳ್ಳವರ ಸೌಧವಾಗಿದ್ದ ವಿಧಾನಸೌಧವನ್ನು ನಮ್ಮ ಸರ್ಕಾರವು ಈಗ ಮತ್ತೊಮ್ಮೆ ಜನ ಕಲ್ಯಾಣ ಸೌಧವನ್ನಾಗಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ನಾನು ಅನೇಕ ಬಾರಿ ಹೇಳಿರುವಂತೆ ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ. ಜನರ ಸಂಕಷ್ಟಗಳನ್ನು ಆಲಿಸಿ ಪ್ರಾಮಾಣಿಕವಾಗಿ ಸ್ಪಂದಿಸುವ ಸರ್ಕಾರ. ಕನ್ನಡಿಗರ ಹಿತಾಸಕ್ತಿ ಕಾಪಾಡಲು ಸರ್ವ ರೀತಿಯಲ್ಲೂ ಶ್ರಮಿಸುತ್ತಿರುವ ಸಾರ್ಥಕ ಸರ್ಕಾರ.

ನಿನ್ನೆಯಷ್ಟೆ ದೆಹಲಿಯಲ್ಲಿ ಒಕ್ಕೂಟ ಸರ್ಕಾರದ ಆರ್ಥಿಕ ಅನ್ಯಾಯಗಳ ವಿರುದ್ಧ ಘರ್ಜಿಸಿದ್ದ ನಿಮ್ಮ ಸರ್ಕಾರ, ಇಂದು ವಿಧಾನ ಸೌಧದಲ್ಲಿ ಐತಿಹಾಸಿಕ “ಜನಸ್ಪಂದನ” ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ರಾಜ್ಯದ ಜನರ ಸಂಕಷ್ಟಗಳಿಗೆ ನೆರವಾಗಲು ಸಮರೋಪಾಧಿಯಾಗಿ ಕೆಲಸ ಮಾಡುತ್ತಿದೆ.

ವಿಧಾನಸೌಧದ ಮುಂಭಾಗ ಕಲ್ಲುಗಳಲ್ಲಿ ಕೆತ್ತಿರುವ “ಸರ್ಕಾರದ ಕೆಲಸ ದೇವರ ಕೆಲಸ” ಎಂಬ ಪದಗಳನ್ನು ಹಾಗೂ ಜಗಜ್ಯೋತಿ ಗುರು ಬಸವಣ್ಣನವರ “ಕಾಯಕವೇ ಕೈಲಾಸ” ತತ್ವವನ್ನು ಅಕ್ಷರಶಃ ಕಾರ್ಯರೂಪಕ್ಕಿಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

ಇಂದು 12:00 ಗಂಟೆವರೆಗೆ ಬರೊಬ್ಬರಿ 8,000 ಜನ “ಜನಸ್ಪಂದನ” ಕಾರ್ಯಕ್ರದಲ್ಲಿ ಹಾಜರಾಗಿ ನೊಂದಾಯಿಸಿಕೊಂಡಿದ್ದಾರೆ. ಜನರಿದ್ದಲ್ಲಿಯೇ ಅವರ ಸಮಸ್ಯೆ ಆಲಿಸುವ, ಬಂದಿರುವ ಎಲ್ಲರ ಸಮಸ್ಯೆಗಳನ್ನು ಸಮರ್ಥ ರೀತಿಯಲ್ಲಿ ಆಲಿಸಲು ವೈಜ್ಞಾನಿಕವಾಗಿ ವ್ಯವಸ್ಥೆ ಒದಗಿಸಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೇವಲ ಉಳ್ಳವರ ಸೌಧವಾಗಿದ್ದ ವಿಧಾನಸೌಧವನ್ನು ನಮ್ಮ ಸರ್ಕಾರವು ಈಗ ಮತ್ತೊಮ್ಮೆ ಜನ ಕಲ್ಯಾಣ ಸೌಧವನ್ನಾಗಿಸಿದೆ ಎಂದಿದ್ದಾರೆ.