ಪಾರಿಜಾತ ಕಲಾವಿದ ಹೊಳಬಸಯ್ಯ ಸಂಬಾಳದ ಇನ್ನಿಲ್ಲ

Advertisement

ಲೋಕಾಪುರ: ಗ್ರಾಮೀಣ ಸೊಗಡಿನ ಪಾರಿಜಾತ ಕಥಾ ಮೂಲಕ ರಾಜ್ಯ ಮತ್ತು ಹೊರ ರಾಜ್ಯದಲ್ಲೇ ಮನೆಮಾತಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಳಬಸಯ್ಯ ಸಂಬಾಳದ ತಮ್ಮ 85ನೇ ವಯಸ್ಸಿನಲ್ಲಿ ಹಾಡು ನಿಲ್ಲಿಸಿದ್ದಾರೆ. ಆ ಮೂಲಕ ನಾಡಿನ ಜನಪದ ಲೋಕ ಹಿರಿಯ ಪ್ರತಿಭಾವಂತ ಕಲಾವಿದರೊಬ್ಬರನ್ನು ಕಳೆದುಕೊಂಡು ಬಡವಾಗಿದೆ.
ಡಿಸೆಂಬರ್‌ 10, 1939ರಲ್ಲಿ ಅತೀ ಕಡು ಬಡತನವಿರುವ ಮನೆಯಲ್ಲಿ ಜನಿಸಿದ ಹೊಳಬಸಯ್ಯ ಆರ್ಥಿಕ ಪರಿಸ್ಥಿತಿ ಕಾರಣದಿಂದ ಶಿಕ್ಷಣ ಪಡೆಯಲಾಗದೇ ಇದ್ದ ತಮ್ಮ ಸ್ವಲ್ಪ ಜಮೀನಿನ ಸುಧಾರಣೆ ಕೈಗೊಂಡರು. ಇವರ ಮನೆತನಕ್ಕೆ ಹಿಂದಿನಿಂದಲೂ ಸಂಬಾಳದ ಕರಡಿವಾದನದ ಜೊತೆಗೆ ಗ್ರಾಮದೇವರಾದ ಶ್ರೀ ವೀರಭದ್ರೇಶ್ವರ ದೇವರ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಹೊಳಬಸಯ್ಯ ತಮ್ಮ ೧೦ನೇ ವಯಸ್ಸಿನಿಂದಲೇ ಭಜನೆ, ಕೈವಲ್ಯ ಪದಗಳನ್ನು ಸರಾಗವಾಗಿ ತಾಳ-ಮೇಳದೊಂದಿಗೆ ಹಾಡಲಾರಂಭಿಸಿದನು. ಬಾಲಕನ ಪ್ರತಿಭೆಗೆ ಮನಸೋತ ಜನರು ಭೇಷ್ ಎಂದರು. ಇವರು ತಮ್ಮ ೧೯ನೇ ವಯಸ್ಸಿನಲ್ಲಿಯೇ ತಂದೆ-ತಾಯಿಯ ವಿರೋಧದ ನಡುವೆಯೂ ದಿ.ಕೃಷ್ಣಾಜಿ ದೇಶಪಾಂಡೆ (ಸಾಲಾಪಟ್ಟಿ) ಇವರ ಶ್ರೀ ಕೃಷ್ಣ ಪಾರಿಜಾತ ತಂಡದಲ್ಲಿ ಶ್ರೀ ಕೃಷ್ಣನ ಪಾತ್ರವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸಿ ಜನರಿಂದ ಹೊಗಳಿಸಿಕೊಂಡರು. ಸುಮಾರು ೩೦ ವರ್ಷ ಶ್ರೀ ಕೃಷ್ಣನಾಗಿ ನಂತರ ೨೦ ವರ್ಷ ಬೇರೆ ಬೇರೆ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.