ಮೃಣಾಲ ಹೆಬ್ಬಾಳಕರ್ ಅವರನ್ನು ಬೆಂಬಲಿಸಲು ನಿರಂಜನ ಹಿರೇಮಠ ಮನವಿ

Advertisement

ಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ ಮಾಡಿಸಿಕೊಟ್ಟಿರುವುದಕ್ಕಾಗಿ ನೇಹಾ ಹಿರೇಮಠ ಅವರ ತಂದೆ-ತಾಯಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬೆಳಗಾವಿಯ ಮನೆಗೆ ಬಂದು ಕೃತಜ್ಞತೆ ಸಲ್ಲಿಸಿದರು.
ಗುರುವಾರ ಸಂಜೆ ಆಗಮಿಸಿದ ನಿರಂಜನ ಹಿರೇಮಠ ದಂಪತಿ, ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಧನ್ಯವಾದ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ ಬೆಳಗಾವಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಮೃಣಾಲ ಹೆಬ್ಬಾಳಕರ್ ಅವರಿಗೆ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು. ನಮ್ಮ ಕಷ್ಟಕಾಲದಲ್ಲಿ ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಲಕ್ಷ್ಮೀ ಹೆಬ್ಬಾಳಕರ್ ಅವರು ಸುರಿಯುತ್ತಿದ್ದ ಮಳೆಯ ಮಧ್ಯೆಯೂ ನಮ್ಮ ಮನೆಗೆ ಬಂದು ನಮ್ಮ ದುಃಖದಲ್ಲಿ ಭಾಗಿಯಾದರು. ಜೊತೆಗೆ ನಮಗೆ ಭದ್ರತೆ ಒದಗಿಸುವ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಮತ್ತು ಪ್ರಕರಣದ ತನಿಖೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ ಮಾಡುವ ಕೆಲಸ ಮಾಡಿದರು. ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕೆಂದು ನಾವು ಇಲ್ಲಿಯವರೆಗೂ ಬಂದಿದ್ದೇವೆ ಎಂದು ತಿಳಿಸಿದರು.