ಪಾಂಡ್ಯ ಬ್ರದರ್ಸ್‌ಗೆ ಮೋಸ ಸೋದರನ ಬಂಧನ

Advertisement

ಮುಂಬೈ: ಕ್ರಿಕೆಟರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರಿಗೆ ಸೋದರ ಸಂಬಂಧಿಯೇ ಬರೋಬ್ಬರಿ ೪.೩ ಕೋಟಿ ರೂಪಾಯಿ ಮೋಸ ಎಸಗಿದ್ದು, ಆರೋಪಿ ವೈಭವ್ ಪಾಂಡ್ಯರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವ್ಯವಹಾರದಲ್ಲಿ ವೈಭವ್ ಪಾಂಡ್ಯ, ಹಾರ್ದಿಕ್, ಕೃನಾಲ್‌ರನ್ನು ವಂಚಿಸಿರುವ ವಿಚಾರ ಬಹಿರಂಗವಾಗುತ್ತಲೇ ಪಾಂಡ್ಯ ಬ್ರದರ್ಸ್ ಪೊಲೀಸರ ಮೊರೆ ಹೋಗಿದ್ದಾರೆ. ಇದರಿಂದ ಮುಂಬೈ ಪೊಲೀಸರು ಈ ಕ್ರಮ ಜರುಗಿಸಿದ್ದಾರೆ.
೩ ವರ್ಷಗಳ ಹಿಂದೆ ೩೭ ವರ್ಷದ ವೈಭವ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಜೊತೆಗೂಡಿ ಪಾಲಿಮರ್ ಸಂಸ್ಥೆಯೊಂದನ್ನು ಆರಂಭಿಸಿದ್ದರು. ಈ ಸಂಸ್ಥೆಯಲ್ಲಿ ಮೊದಲು ವೈಭವ್ ಪಾಂಡ್ಯ ಶೇಕಡ ೨೦ರಷ್ಟು ಬಂಡವಾಳ ಹೂಡಿಕೆ ಮಾಡಿದ್ದರೆ, ಉಳಿದ ಶೇಕಡ ೮೦ರಷ್ಟು ಹಣವನ್ನು ಪಾಂಡ್ಯ ಬ್ರದರ್ಸ್ ಹೂಡಿಕೆ ಮಾಡಿದ್ದರು. ಸಂಸ್ಥೆಯ ಆರಂಭದಲ್ಲಿ ಬಂದ ಲಾಭವನ್ನು ಕೂಡ ಹೂಡಿಕೆ ಆಧಾರದ ಮೇಲೆ ಹಂಚಿಕೊಳ್ಳಲಾಗುತ್ತಿತ್ತು. ಆದರೆ, ಸಂಸ್ಥೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ ವೈಭವ್ ಕಾಲಕ್ರಮೇಣ, ಇದೇ ಸಂಸ್ಥೆಗೆ ಪ್ರತಿಯಾಗಿ ಮತ್ತೊಂದು ಸಂಸ್ಥೆ ಆರಂಭಿಸಿದ್ದು, ಪಾಂಡ್ಯ ಬ್ರದರ್ಸ್ ಹೂಡಿಕೆ ಮಾಡಿದ್ದ ಸಂಸ್ಥೆಯಲ್ಲೇ ವೈಭವ್ ತನ್ನ ಹೂಡಿಕೆ ಪ್ರಮಾಣವನ್ನು ಶೇಕಡ ೩೩ಕ್ಕೆ ಏರಿಸಿಕೊಂಡಿದ್ದರು. ಇದರಿಂದ ಹಾರ್ದಿಕ್ ಹಾಗೂ ಕೃನಾಲ್ ಪಾಂಡ್ಯ ಅವರ ವ್ಯವಹಾರ ನಷ್ಟದತ್ತ ಸಾಗಿದೆ. ಇದನ್ನು ಕೂಲಂಕುಶವಾಗಿ ಗಮನಿಸಿದ ಪಾಂಡ್ಯ ಬ್ರದರ್ಸ್ ವೈಭವ್ ಬಳಿ ಚರ್ಚಿಸಲು ಕೂಡ ಮುಂದಾಗಿದ್ದಾರೆ. ಆದರೆ ವೈಭವ್ ಸಹಕರಿಸದ ಹಿನ್ನೆಲೆಯಲ್ಲಿ ಹಾರ್ದಿಕ್ ಹಾಗೂ ಕೃನಾಲ್ ದೂರು ಸಲ್ಲಿಸಿದ್ದಾರೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಮುಂಬೈ ಪೊಲೀಸರು ವೈಭವ್ ಪಾಂಡ್ಯರನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.