‘ಆಶಾಕಿರಣ’ ಸರ್ಕಾರದ ಮತ್ತೊಂದು ಗ್ಯಾರಂಟಿ

ಬೆಂಗಳೂರು: ನಮ್ಮ ಆಚಾರ- ವಿಚಾರಗಳು ಪ್ರಚಾರವಾದರೆ ಜನರಿಗೆ ಸೌಲಭ್ಯ ಸಿಗುತ್ತದೆ. ನಮ್ಮ ರಾಜ್ಯದಲ್ಲಿ 70ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ನಮ್ಮಲ್ಲಿರುವಷ್ಟು ಪ್ರತಿಭಾವಂತ ವೈದ್ಯರುಗಳು ಎಲ್ಲೂ ಇಲ್ಲ. ದೇಶ- ವಿದೇಶಗಳಲ್ಲಿ ಅವರೆಲ್ಲ ಕಾರ್ಯನಿರ್ವಹಿಸುತ್ತಿದ್ದಾರೆನ್ನುವುದು ನಮ್ಮ ಹೆಮ್ಮೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಗೋವಿಂದರಾಜನಗರದ ಪರಮಪೂಜ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟಿಸಿ ಮಾತನಾಡಿ ಶ್ರೀಯುತ ಎಸ್.ಎಂ.ಕೃಷ್ಣ ಅವರು ಅಧಿಕಾರದಲ್ಲಿದ್ದಾಗ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದರು. ಅದರಿಂದ ಬಡಜನತೆಗೆ ಹೆಚ್ಚಿನ ಅನುಕೂಲವಾಗಿತ್ತು. ಕೇಂದ್ರ ಸರ್ಕಾರವೂ ತನ್ನ ಆರೋಗ್ಯ ಯೋಜನೆಗಳಿಗೆ ಅದೇ ಮಾದರಿಯನ್ನು ಅಳವಡಿಸಿಕೊಂಡಿತ್ತು. ದಿನೇಶ್ ಗುಂಡೂರಾವ್ ಅವರು ಆರೋಗ್ಯ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ‘ಆಶಾಕಿರಣ’ ಯೋಜನೆಯ ಮೂಲಕ ನಮ್ಮ ಸರ್ಕಾರದ ಮತ್ತೊಂದು ಗ್ಯಾರಂಟಿಯನ್ನು ಜನರಿಗೆ ತಲುಪಿಸುತ್ತಿದ್ದಾರೆ.

ಈಗಾಗಲೇ 8 ಜಿಲ್ಲೆಗಳಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಇಂದಿನಿಂದ ಏಕಕಾಲದಲ್ಲಿ 393 ಕಡೆಗಳಲ್ಲಿ ಈ ದೃಷ್ಟಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ಈ ಕೇಂದ್ರಗಳ ಸದುಪಯೋಗ ಪಡೆದುಕೊಂಡು, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ.

ಕೋವಿಡ್ ನಂತರ ಹೃದಯಾಘಾತ ಹೆಚ್ಚಾಗುತ್ತಿರುವ ಕುರಿತು ಚರ್ಚೆಗಳಾಗುತ್ತಿದೆ. ಈ ಬಗ್ಗೆ ದಿನೇಶ್ ಗುಂಡೂರಾವ್ ಅವರು ಅಧ್ಯಯನಕ್ಕೆ ತಜ್ಞರಿಗೆ ಆದೇಶಿಸಿದ್ದಾರೆ. ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನಮ್ಮ ಸರ್ಕಾರ ಬದ್ಧವಿದೆ.

ವಿಜಯನಗರ- ಗೋವಿಂದರಾಜನಗರ ಕ್ಷೇತ್ರದ ಜನ ನೆಮ್ಮದಿಯಿಂದಿದ್ದಾರೆ. ನನಗೆ ಬೇರೆಲ್ಲಾ ಕ್ಷೇತ್ರಗಳಿಂದ ಬರುವಂತೆ ಇಲ್ಲಿ ಯಾವ ದೂರುಗಳೂ ಇಲ್ಲ. ಅದಕ್ಕಾಗಿ ಇಲ್ಲಿನ ಶಾಸಕರುಗಳಿಗೆ ಧನ್ಯವಾದ ತಿಳಿಸುತ್ತೇನೆ. ಗುಣಮಟ್ಟದ ಸೇವೆ ನೀಡುತ್ತಾ, ಸರ್ವರನ್ನು ಸಮಾನತೆಯಿಂದ ಕಾಣುತ್ತಿರುವ ಈ ಕ್ಷೇತ್ರದ ಶಾಸಕರುಗಳ ಕಾರ್ಯ ಹೀಗೆ ಮುಂದುವರಿಯಲಿ ಎಂದು ಆಶಿಸುವೆ ಎಂದಿದ್ದಾರೆ.