ಮುಂಬೈ: ಮಹಾರಾಷ್ಟ್ರ ರಾಜ್ಯದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸುಮಾರು 20 ವರ್ಷಗಳ ನಂತರ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಒಂದಾಗಿದ್ದಾರೆ. 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಉದ್ಧವ್ ಠಾಕ್ರೆ ಮತ್ತೆ ಒಂದಾಗುವ ಕುರಿತು ಮಾತನಾಡಿದ್ದರು.
ಶನಿವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ತಮ್ಮ ಪುತ್ರ ಜೊತೆ ಒಟ್ಟಿಗೆ ಕಾಣಿಸಿಕೊಂಡರು. “ನಮ್ಮ ಶಕ್ತಿಯೇ ನಮ್ಮಲ್ಲಿನ ಒಗ್ಗಟ್ಟು, ಯಾವಾಗ ಸವಾಲಿನ ಪರಿಸ್ಥಿತಿ ಬರುತ್ತದೆಯೋ ಆಗ ನಾವೆಲ್ಲರೂ ಒಟ್ಟಾಗುತ್ತೇವೆ” ಎಂದು ಉದ್ಧವ್ ಠಾಕ್ರೆ ಹೇಳಿದರು.
“ನಾವು ಸವಾಲಿನ ಸಮಯಗಳನ್ನು ಎದುರಿಸಿದ್ದೇವೆ. ನಾವು ವೈಯಕ್ತಿಕ ಹಿತಾಸಕ್ತಿಯ ಹಿಂದೆ ಹೋಗುತ್ತೇವೆ. ಆದರೆ ಈ ಬಾರಿ ಅದು ಆಗುವುದಿಲ್ಲ. ನಾವು ಒಗ್ಗಟ್ಟಾಗಿ ಇರುವುದಕ್ಕಾಗಿಯೇ ಒಂದಾಗಿ ಬಂದಿದ್ದೇವೆ” ಎಂದು ಉದ್ಧವ್ ಠಾಕ್ರೆ ಘೋಷಣೆ ಮಾಡಿದರು.
ಕೆಲವು ದಿನಗಳ ಹಿಂದೆ ರಾಜ್ ಠಾಕ್ರೆ ಸಹ ಉದ್ಧವ್ ಠಾಕ್ರೆ ಜೊತೆ ಒಂದಾಗಿ ಮುಂದುವರೆಯುವ ಕುರಿತು ಮಾತನಾಡಿದ್ದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಉದ್ಧವ್ ಠಾಕ್ರೆ ಕಾಂಗ್ರೆಸ್ ಪಕ್ಷದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಚಟುವಟಿಕೆಯಿಂದ ದೂರವಾಗಿದ್ದಾರೆ.
ಚುನಾವಣೆಯ ಬಳಿಕ ಎಂವಿಎ ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಬಣದ ನಡುವೆ ಸಂಬಂಧ ಹಳಸಿದೆ. ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಸಹ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿತ್ತು.
2005ರಲ್ಲಿ ರಾಜ್ ಠಾಕ್ರ ಎಂಎನ್‌ಎಸ್ ಆರಂಭಿಸುವ ಮೂಲಕ ಹೊಸ ಪಕ್ಷವನ್ನು ಘೋಷಣೆ ಮಾಡಿದರು. ಆಗ ಠಾಕ್ರೆ ಕುಟುಂಬ ಎರಡು ಭಾಗವಾಯಿತು. ಉದ್ಧವ್ ಠಾಕ್ರೆ ಶಿವಸೇನೆ ಮೂಲಕ ಒಮ್ಮೆ ಕಾಂಗ್ರೆಸ್ ನೆರವಿನಿಂದ ಸರ್ಕಾರವನ್ನು ರಚನೆ ಮಾಡಿ ಮುಖ್ಯಮಂತ್ರಿಯೂ ಆದರು. ಆದರೆ ಏಕನಾಥ್ ಶಿಂಧೆ ಶಾಸಕರ ಜೊತೆ ಪಕ್ಷದಿಂದ ಹೊರಹೋಗಿ ಬಿಜೆಪಿ ಬೆಂಬಲಿಸಿದ ಕಾರಣ ಉದ್ಧವ್ ಠಾಕ್ರೆ ಸರ್ಕಾರ ಪತನಗೊಂಡಿತ್ತು.
ರಾಜ್ ಮತ್ತು ಉದ್ಧವ್ ಠಾಕ್ರೆ ಬೇರೆ ಬೇರೆಯಾದ ಬಳಿಕ ರಾಜಕೀಯ ಯಶಸ್ಸುಗಳಿಸಿದ್ದು ಕಡಿಮೆ. ಆದ್ದರಿಂದ ಮರಾಠಿ ಸಂಸ್ಕೃತಿ, ಅಸ್ಮಿತೆಯನ್ನು ಉಳಿಸಲು ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಇಬ್ಬರು ಒಂದಾಗಬೇಕು ಎಂಬ ಒತ್ತಾಯ ಕೇಳಿ ಬರುತ್ತಲೇ ಇತ್ತು. ಕೆಲವು ದಿನಗಳ ಹಿಂದೆ ರಾಜ್ ಠಾಕ್ರೆ,”ಮಹಾರಾಷ್ಟ್ರದ ಹಿತಾಸಕ್ತಿಗೆ ಉದ್ಧವ್ ಠಾಕ್ರೆ ಮತ್ತು ನನ್ನ ನಡುವಿನ ಭಿನ್ನಾಭಿಪ್ರಾಯ ಧಕ್ಕೆ ಉಂಟು ಮಾಡಿದೆ” ಎಂದು ಹೇಳಿದ್ದರು.
“ಉದ್ಧವ್ ಮತ್ತು ನನ್ನ ನಡುವೆ ಸಣ್ಣಪುಟ್ಟ ಜಗಳವಿದೆ, ವಿವಾದವಾಗಿದೆ. ಆದರೆ ಮಹಾರಾಷ್ಟ್ರ ಇದೆಲ್ಲಕ್ಕಿಂತ ದೊಡ್ಡದು. ಈ ಭಿನ್ನಾಭಿಪ್ರಾಯ ಮಹಾರಾಷ್ಟ್ರಹಾಗೂ ಮರಾಠಿ ಜನತೆಯ ಅಸ್ತಿತ್ವಕ್ಕೆ ದುಬಾರಿಯಾಗಿದೆ. ಇಬ್ಬರು ಒಗ್ಗೂಡುವುದು ಕಷ್ಟವೇನಲ್ಲ” ಎಂದು ರಾಜ್ ಠಾಕ್ರೆ ಹೇಳದ್ದರು. ಆ ಮೂಲಕ ಇಬ್ಬರು ಒಂದಾಗುವ ಸುಳಿವು ನೀಡಿದ್ದರು.