ಭಕ್ತರ ಸಂಖ್ಯೆ ಕಡಿಮೆ, ಒಂದೇ ದಿನ ತಿರುಪತಿ ದೇವಾಲಯದಲ್ಲಿ 5 ಕೋಟಿ ಕಾಣಿಕೆ ಸಂಗ್ರಹ!

ಅಮರಾವತಿ: ಆಂಧ್ರ ಪ್ರದೇಶದಲ್ಲಿರುವ ಪುರಾಣ ಪ್ರಸಿದ್ಧ ತಿರುಪತಿ ತಿರುಮಲ ದೇವಾಲಯ ಹುಂಡಿ ಕಾಣಿಕೆಯಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಯಾವುದೇ ರಜೆ ದಿನ ಇಲ್ಲದಿದ್ದರೂ ಜೂನ್ 30ರ ಸೋಮವಾರ ದೇವಾಲಯದಲ್ಲಿ ಒಂದೇ ದಿನ 5.3 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.

ಹೆಚ್ಚು ಭಕ್ತರು ಭೇಟಿ ನೀಡದಿದ್ದರೂ ಸಹ ಕಳೆದ ಒಂದು ವರ್ಷದಲ್ಲಿ ದೇವಾಲಯಕ್ಕೆ ಒಂದೇ ದಿನ ಬಂದ ಅತಿ ಹೆಚ್ಚಿನ ಆದಾಯ ಇದಾಗಿದೆ. ದೇವಾಲಯಕ್ಕೆ ಸೋಮವಾರ 78,730 ಭಕ್ತರು ಭೇಟಿ ನೀಡಿದ್ದಾರೆ. ಸರ್ಕಾರಿ ರಜೆ ದಿನಗಳು, ಹಬ್ಬಗಳಿಗೆ ಹೋಲಿಕೆ ಮಾಡಿದರೆ ಭಕ್ತರ ಸಂಖ್ಯೆ ಕಡಿಮೆಯೇ ಆಗಿದೆ.

ಸಾಮಾನ್ಯ ದಿನವಾಗಿದ್ದರೂ ಸಹ ದೇವಾಲಯದ ಹುಂಡಿಗೆ 5.3 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. 2023ರ ಜನವರಿ 2ರಂದು ದೇವಾಲಯದಲ್ಲಿ ಒಂದೇ ದಿನ 6 ಕೋಟಿ ರೂ. ಕಾಣಿಕೆ ಸಂಗ್ರಹವಾಗಿತ್ತು.

6 ಕೋಟಿ ಕಾಣಿಕೆ ಸಂಗ್ರಹವಾದ ದಿನಗಳು ಹಲವು ಇದೆ. ಆದರೆ ಸಾಮಾನ್ಯ ದಿನದಲ್ಲಿ ಭಕ್ತರ ಸಂಖ್ಯೆ ಸಾಮಾನ್ಯವಾಗಿದ್ದರೂ ಸಹ ಇಷ್ಟು ಮೊತ್ತದ ಕಾಣಿಕೆ ಸಂಗ್ರಹವಾಗಿರುವುದು ದಾಖಲೆಯಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.

ಬೇಸಿಗೆ ರಜೆ ಮುಕ್ತಾಯವಾಗುತ್ತಾ ಬಂದಾಗ ತಿರುಪತಿಗೆ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಆಗಲೂ ಕಾಣಿಕೆ ಸಂಗ್ರಹ ಹೆಚ್ಚಾಗಿಯೇ ಇತ್ತು. ವಾರಾಂತ್ಯವಲ್ಲದಿದ್ದರೂ ಸಹ ಸೋಮವಾರ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.

ಮಾಹಿತಿಗಳ ಪ್ರಕಾರ ತಿರುಪತಿ ದೇವಾಲಯಕ್ಕೆ ಕಾಣಿಕೆ ಹುಂಡಿಯಿಂದ ಪ್ರತಿ ತಿಂಗಳು ಸುಮಾರು 100 ಕೋಟಿಗೂ ಅಧಿಕ ಆದಾಯ ಬರುತ್ತದೆ. ಚಿನ್ನ, ಬೆಳ್ಳಿಯಿಂದ ಬರುವ ಆದಾಯ ಬೇರೆಯಾಗಿದೆ.