KantaraChapter-1: ಕಾಂತಾರಾ ಚಾಪ್ಟರ್-1 ಬಿಡುಗಡೆ ದಿನಾಂಕ ಘೋಷಣೆ

ಬೆಂಗಳೂರು: ಇಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಜನ್ಮದಿನ. ಕಾಂತಾರಾ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆದಿರುವ ರಿಷಬ್ ಶೆಟ್ಟಿಗೆ ಹೊಂಬಾಳೆ ಫಿಲ್ಮ್ಸ್ ಭರ್ಜರಿ ಉಡುಗೊರೆ ನೀಡಿದೆ. ಈ ಸುದ್ದಿ ಕೇಳಿ ಕಾಂತಾರಾ ಬಿಡುಗಡೆಗಾಗಿ ಕಾದು ಕುಳಿತಿರುವ ಜನರು ಸಹ ಸಂತಸಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಹೊಂಬಾಳೆ ಫಿಲ್ಮ್ಸ್’ದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ’ ಎಂದು ಹೇಳಿದೆ. ಈ ಮೂಲಕ ಕಾಂತಾರಾ ಚಾಪ್ಟರ್-1 ಬಿಡುಗಡೆಯ ದಿನಾಂಕದ ಕುರಿತು ಮಾಹಿತಿ ನೀಡಿದೆ.

ಕಾಂತಾರಾ ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದೆ. ಕಾಂತಾರಾ ಚಾಪ್ಟರ್-1 ಯಾವಾಗ ಬಿಡುಗಡೆ? ಎಂದು ಸಿನಿಮಾ ಪ್ರೇಮಿಗಳು ಕಾದು ಕುಳಿತಿದ್ದರು.

ಹೊಂಬಾಳೆ ಫಿಲ್ಮ್ಸ್ ತನ್ನ ಟ್ವೀಟ್‌ನಲ್ಲಿ ಅಕ್ಟೋಬರ್ 2ರಂದು ಕಾಂತಾರ ಚಾಪ್ಟರ್-1 ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದೆ. ಪೋಸ್ಟ್‌ನಲ್ಲಿ ‘The much-awaited prequel to the divine cinematic phenomenon… #KantaraChapter1 roars into cinemas worldwide on October 2nd, 2025’ ಎಂದು ಹೇಳಿದೆ.

ಅಕ್ಟೋಬರ್ 2ರ ಗುರುವಾರ ಗಾಂಧಿ ಜಯಂತಿಯಂದು ಸರ್ಕಾರಿ ರಜೆ ಇರುತ್ತದೆ. ಅಕ್ಟೋಬರ್ 3 ಶುಕ್ರವಾರ, ಅಕ್ಟೋಬರ್ 4 ಶನಿವಾರ, ಅಕ್ಟೋಬರ್ 5ರ ಭಾನುವಾರ ಲಾಂಗ್ ವೀಕೆಂಡ್ ಎದುರು ಬರುತ್ತದೆ. ಆದ್ದರಿಂದ ಕಾಂತಾರಾ ಚಾಪ್ಟರ್ -1 ಬಿಡುಗಡೆಗೆ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ ಎಂಬುದು ಲೆಕ್ಕಾಚಾರವಾಗಿದೆ.

ಕಾಂತಾರಾ ಚಾಪ್ಟರ್-1 ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಹಲವು ದುರಂತಗಳ ಕಾರಣ ಕಾಂತಾರಾ ಚಾಪ್ಟರ್-1 ಚಿತ್ರ ಭಾರೀ ಸುದ್ದಿ ಮಾಡಿತ್ತು. ಚಿತ್ರ ರಿಲೀಸ್ ಆಗುವುದು ತಡವಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಕಾಂತಾರಾ ಸಿನಿಮಾ ಬಿಡುಗಡೆ ಬಳಿಕ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ವಿವಿಧ ಭಾಷೆಗಳಲ್ಲಿಯೂ ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಆದ್ದರಿಂದ ಕಾಂತಾರಾ ಚಾಪ್ಟರ್-1 ಮೇಲೆ ಅಪಾರವಾದ ನಿರೀಕ್ಷೆ ಇದೆ.

ದೈವದ ಆರಾಧನೆ, ಸಂಗೀತ, ಚಿತ್ರಕತೆ ಹೀಗೆ ವಿವಿಧ ಕಾರಣಕ್ಕೆ ಕಾಂತಾರಾ ಜನರ ಮೆಚ್ಚುಗೆಗಳಿಸಿತ್ತು. ತಳುನಾಡಿನ ದೈವದ ಆರಾಧನೆಯ ಚಿತ್ರಣವನ್ನು ದೇಶಾದ್ಯಂತ ಈ ಸಿನಿಮಾ ಪರಿಚಯ ಮಾಡಿಸಿತ್ತು.

ಜುಲೈ 7ರ ಸೋಮವಾರ ‘ಕಾಂತಾರಾ’ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹುಟ್ಟುಹಬ್ಬ. ಹಲವು ಗಣ್ಯರು, ಚಿತ್ರರಂಗದವರು ಅವರಿಗೆ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.

ಮಾಜಿ ಸಂಸದ ಪ್ರತಾಪ್ ಸಿಂಹ ‘ಕನ್ನಡ ಚಿತ್ರರಂಗದ ಗೌರವವನ್ನು ಎತ್ತಿಹಿಡಿಯುತ್ತಿರುವ ಖ್ಯಾತ ನಟರು ಮತ್ತು ಸ್ನೇಹಿತರಾದ ರಿಷಬ್ ಶೆಟ್ಟರಿಗೆ ಹುಟ್ಟುಹಬ್ಬದ ಶುಭಾಶಯಗಳು. ಕಾಂತಾರ ಮೂಲಕ ತಾಯಿ ಚಾಮುಂಡೇಶ್ವರಿ ನಿಮ್ಮನ್ನು ಭಾನೆತ್ತರಕ್ಕೆ ಬೆಳೆಸಲಿ ಎಂದು ಪ್ರಾರ್ಥಿಸುವೆ’ ಎಂದು ಶುಭಾಶಯಗಳನ್ನು ಕೋರಿದ್ದಾರೆ.

ಕಾಂತಾರಾ ಚಿತ್ರ ಬಿಡುಗಡೆಯಾದ ಮೇಲೆ ಇದರ ಪಾರ್ಟ್‌-2 ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆಗ ನಿರ್ದೇಶಕ ರಿಷಬ್ ಶೆಟ್ಟಿ ಈಗ ಬಿಡುಗಡೆ ಆಗಿರುವುದೇ ಪಾರ್ಟ್‌-2, ಕಾಂತಾರಾ ಚಾಪ್ಟರ್-1 ಸಿನಿಮಾ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದರು.