Home ವಿಶೇಷ ಸುದ್ದಿ 18000 ಕೋಟಿ ಉದ್ಯಮವಾಗಿ ಬೆಳೆದ ರಾಮೇಶ್ವರಂ ಕೆಫೆ ಕಥೆ

18000 ಕೋಟಿ ಉದ್ಯಮವಾಗಿ ಬೆಳೆದ ರಾಮೇಶ್ವರಂ ಕೆಫೆ ಕಥೆ

0
ನವೆಂಬರ್ 27ರಂದು ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕನ್ನಡ ನಾಡಿನ ಚಿನ್ನದ ಸಾಧಕರು ಅಡಿ ಪ್ರಕಟವಾದ ಲೇಖನ

ನಟನಾಗಬೇಕೆನ್ನುವ ಹುಚ್ಚಿದ್ದು ಇಂಜಿನಿಯರ್ ಆಗಿ ಉದ್ಯಮಿಯಾದ ರಾಘವೇಂದ್ರ ರಾವ್ | ತಿಂಗಳಿಗೆ 50 ಕೋಟಿಗೂ ಹೆಚ್ಚು ವಹಿವಾಟು

ಬೆಂಗಳೂರಿನ ರಾಮೇಶ್ವರಂ ಕೆಫೆ ಭಾರಿ ಸುದ್ದಿಗೆ ಬಂದಿದ್ದು ಒಂದು ಸ್ಫೋಟದಿಂದಾಗಿ. ಆದರೆ ಅದಕ್ಕೂ ಮೊದಲೇ ಈ ಸಸ್ಯಾಹಾರಿ ಹೋಟೆಲ್‌ಗೆ ಜನ ಮುತ್ತಿಕೊಂಡಿದ್ದು, ಅದರ ರುಚಿ ಶುಚಿಯಾದ ಆಹಾರಕ್ಕಾಗಿ. ಇವತ್ತು ರಾಮೇಶ್ವರಂ ಕೆಫೆ ಗೊತ್ತಿಲ್ಲದ ಬೆಂಗಳೂರಿನ ಜನ ಕಡಿಮೆ.
ಈ ಹೋಟೆಲ್ ಶುರುವಾಗಿದ್ದು 2021ರಲ್ಲಿ ಕೇವಲ ನಾಲ್ಕು ವರ್ಷಗಳಲ್ಲಿ ಅದು ಯಾವ ಮಟ್ಟಿಗೆ ಬೆಳೆದಿದೆಯೆಂದರೆ, ಅದರ ಮೌಲ್ಯ 18,800 ಕೋಟಿ ರೂ.ಗೆ ಏರಿದೆ. ತಿಂಗಳಿಗೆ 50 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಅಂದಾಜಿನ ಪ್ರಕಾರ ದಿನವೊಂದಕ್ಕೆ 7500 ಬಿಲ್‌ಗಳು ಜನರೇಟ್ ಆಗುತ್ತಿವೆ. 700 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.

ಅಂದಹಾಗೆ ಇದರ ಸ್ಥಾಪಕರು ರಾಘವೇಂದ್ರ ರಾವ್ ಮತ್ತು ದಿವ್ಯಾ ದಂಪತಿಗಳು. ರಾಘವೇಂದ್ರರಾವ್ ಸಿಇಒ ಆದರೆ, ದಿವ್ಯಾ ಸಂಸ್ಥೆಯ ಎಂಡಿ ಆಗಿದ್ದಾರೆ. ರಾಘವೇಂದ್ರ ರಾವ್ ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್, ದಿವ್ಯಾ ಐಐಎಂ ಅಹಮದಾಬಾದ್‌ನಲ್ಲಿ ಸ್ನಾತಕೋತ್ತರ ಪದವೀಧರೆ. ಇದಕ್ಕಿಂತ ಇನ್ನೂ ಕುತೂಹಲಕರ ಸಂಗತಿ ಇದೆ. ರಾಘವೇಂದ್ರ ರಾವ್‌ಗೆ ಇಂಜಿನಿಯರ್ ಆಗಬೇಕು ಎನ್ನುವ ಆಸೆಯೂ ಇರಲಿಲ್ಲ. ಹೋಟೆಲ್ ಬಗ್ಗೆ ವಿಚಾರವನ್ನೇ ಮಾಡಿರಲಿಲ್ಲ. ಅವರ ಮನಸ್ಸು ತುಂಬ ತುಂಬಿಕೊಂಡಿದ್ದು ನಟನಾಗಬೇಕೆನ್ನುವ ಹುಚ್ಚು.

ಅದಕ್ಕಾಗಿಯೇ ಇಂಜಿನಿಯರಿಂಗ್ ಬಿಟ್ಟು ಅದರ ಹಿಂದೆ ಬಿದ್ದರು. ಆ ಸಮಯದಲ್ಲಿ ಅವರೆಲ್ಲಿದ್ದರು ಎನ್ನುವುದು ಯಾರಿಗೂ ಗೊತ್ತಿಲ್ಲ. ಎಷ್ಟೋ ದಿನ ಬಸ್‌ಸ್ಟ್ಯಾಂಡ್‌ನಲ್ಲೂ ಮಲಗಿದ್ದಾರಂತೆ. ಯಾವುದೋ ಸ್ಲಮ್‌ನಲ್ಲಿದ್ದುಕೊಂಡು ಜೀವನ ಮಾಡಿಕೊಂಡಿದ್ದಾರೆ. ಕಡೆಗೆ ಆ ಕನಸು ಕೈಗೂಡದೇ ಇದ್ದಾಗ, ಮನೆಗೆ ವಾಪಸ್ ಬಂದಿದ್ದಾರೆ.

ಆನಂತರ ಮತ್ತೆ ಇಂಜಿನಿಯರಿಂಗ್ ಮುಂದುವರಿಸಿದ್ದಾರೆ. ಹೀಗೆ ಇಂಜಿನಿಯರಿಂಗ್ ಮುಗಿಸಲು 10 ವರ್ಷ ತೆಗೆದುಕೊಂಡರಂತೆ. ಅದಾದ ಮೇಲೆ ಲಿ ಮೆರಿಡಿಯನ್ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಆಗ ಅವರಿಗೆ ಹೋಟೆಲ್ ಉದ್ಯಮದ ಗಂಧಗಾಳಿ ಸೋಕಿತು.
ದಿವ್ಯಾ ಚಾರ್ಟರ್ಡ್ ಅಕೌಂಟೆಂಟ್. ಆದರೆ ಆ ಕೆಲಸವನ್ನು ಬಿಟ್ಟು ರಾಘವೇಂದ್ರ ಜೊತೆ ಹೋಟೆಲ್ ಉದ್ಯಮ ಆರಂಭಿಸಲು ಮುಂದಾದರು. ಅದು ದಿವ್ಯಾ ಪೋಷಕರ ಪಾಲಿಗೆ ರಾಂಗ್ ಡಿಸಿಷನ್. ಆದರೆ ನಂತರ ಅದೊಂದು ಒಳ್ಳೆಯ ನಿರ್ಧಾರ ಅಂತ ದಿವ್ಯಾ ಸಾಬೀತು ಪಡಿಸಿದರು.

ಮೊದಲು ಬೆಂಗಳೂರಿನ ಇಂದಿರಾನಗರದಲ್ಲಿ ಆರಂಭವಾದ ಹೋಟೆಲ್ ನಾನಾ ಸವಾಲುಗಳನ್ನು ಎದುರಿಸಿತು. ಆದರೆ ಅವೆಲ್ಲವನ್ನೂ ದಾಟಿಕೊಂಡು ಮುಂದೆ ಸಾಗಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಯಶಸ್ಸಿಗೆ ಮುಖ್ಯ ಕಾರಣ ರುಚಿಯಲ್ಲಿ ಎಂದೂ ರಾಜಿಯಾಗದೆ ಇರುವುದು. ಅಡುಗೆ ತಯಾರಿಸಲು ಗುಣಮಟ್ಟದ ಪದಾರ್ಥಗಳನ್ನೇ ಬಳಸುವ ಕಡೆಗೆ ಇರುವ ಬದ್ಧತೆ. ರುಚಿ ಹೆಚ್ಚಿಸಲು ರಾಸಾಯನಿಕಗಳನ್ನು ಬಳಸುವುದಿಲ್ಲ.

ಸೋಡಾ ಕೂಡ ಉಪಯೋಗಿಸುವುದಿಲ್ಲ. ಶುದ್ಧ ತುಪ್ಪ ಬಳಸಲಾಗುತ್ತದೆ. ರೆಫ್ರಿಜಿರೇಟರ್‌ನಲ್ಲಿಟ್ಟ ಪದಾರ್ಥಗಳನ್ನು ಸರ್ವ್ ಮಾಡುವುದಿಲ್ಲ. ಚಟ್ನಿಯನ್ನೂ ಕೂಡ ದಿನಕ್ಕೆ 2-3 ಬಾರಿ ತಯಾರಿಸಲಾಗುತ್ತದೆ. ಗುಣಮಟ್ಟ ಮತ್ತು ರುಚಿ ಎರಡನ್ನೂ ಕಾಪಾಡಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎನ್ನುವುದಕ್ಕೆ ಇವು ಕೆಲವು ಉದಾಹರಣೆ ಮಾತ್ರ. ಜೆನ್ ಝೀಗೆ ಬೇಕಾದಂಥ ರೀತಿಯಲ್ಲೇ ಸಾಂಪ್ರದಾಯಿಕ ಆಹಾರಗಳೂ ದೊರೆಯುವುದು. ಜೊತೆಗೆ ಇಡೀ ಕುಟುಂಬ ಹೋಗಿ ಊಟವನ್ನು ಸವಿಯುವ ವಾತಾವರಣ ನಿರ್ಮಿಸಿರುವುದು ಎಲ್ಲವೂ ಕೂಡಿದೆ. ಸರಿಯಾದ ಸ್ಥಳದಲ್ಲಿಯೇ ಹೋಟೆಲ್ ಸ್ಥಾಪಿಸುವುದು ಕೂಡ ಪ್ರಗತಿಗೆ ಪೂರಕವಾಗಿದೆ.

ಇದೀಗ ಬೆಂಗಳೂರಿನಲ್ಲಿ ಇದೀಗ ಜೆಪಿ ನಗರ, ವಿಮಾನ ನಿಲ್ದಾಣದ ಟರ್ಮಿನಲ್ 1, ಬ್ರೂಕ್‌ಫೀಲ್ಡ್, ರಾಜಾಜಿ ನಗರ, ಇಂದಿರಾ ನಗರಗಳಲ್ಲಿ ಹೋಟೆಲುಗಳು ಆರಂಭವಾಗಿದೆ. ಇದಲ್ಲದೆ ಹೈದರಾಬಾದ್‌ಗೂ ಕೂಡ ಅದು ವಿಸ್ತಾರಗೊಂಡಿದೆ. ಮುಂಬೈ, ಪುಣೆ, ದೆಹಲಿಗೂ ಕಾಲಿಡಲು ಪ್ರಯತ್ನಗಳು ನಡೆದಿವೆ.

ಅಂಬಾನಿ ಮದುವೆಯಲ್ಲೂ ರಾಮೇಶ್ವರಂ ಕೆಫೆ ರುಚಿ : ಬೆಂಗಳೂರಿನ ಹೋಟೆಲ್ ಜನಪ್ರಿಯತೆ ಎಷ್ಟಿದೆಯೆಂದರೆ, ಕಳೆದ ವರ್ಷ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲೂ ಅತಿಥಿಗಳಿಗೆ ಉಣಬಡಿಸುವ ಅವಕಾಶ ರಾಮೇಶ್ವರಂ ಕೆಫೆಗೆ ದೊರೆತಿತ್ತು. ಯೂರೋಪ್‌ನಲ್ಲಿ ನಡೆದ ವಿವಾಹಪೂರ್ವ ಕಾರ್ಯಕ್ರಮದಲ್ಲೂ ಸೆಲೆಬ್ರಿಟಿ ಅಸೆಂಟ್ ಕ್ರೂö್ಯಸ್‌ನಲ್ಲಿ, ಮುಂಬೈನ ಅಂಬಾನಿ ನಿವಾಸದಲ್ಲಿ ನಡೆದ ಮೆಹೆಂದಿ ಮತ್ತು ಹಳದೀ ಕಾರ್ಯಕ್ರಮ ಹಾಗೂ ಮುಖ್ಯ ಮದುವೆ ಸಮಾರಂಭಗಳಲ್ಲಿ ಹೈ ಪ್ರೊಫೈಲ್ ಅತಿಥಿಗಳಿಗೆ ರಾಮೇಶ್ವರಂ ಕೆಫೆಯ ಇಡ್ಲಿ, ದೋಸೆ ಪೂರೈಕೆಯಾಗಿದೆ.

ಕಡೇಗೊಂದ್ಮಾತು: ಸ್ಪಷ್ಟ ದೃಷ್ಟಿಕೋನ, ಶಿಸ್ತುಬದ್ಧ ಅನುಷ್ಠಾನ, ಆರ್ಥಿಕ ಶಿಸ್ತು ಮತ್ತು ಪರಿಶ್ರಮ ಯಶಸ್ಸಿನ ಆರಂಭಿಕ ಸೂತ್ರಗಳು.

NO COMMENTS

LEAVE A REPLY

Please enter your comment!
Please enter your name here

Exit mobile version