ಮಲೆನಾಡಲ್ಲಿ ಬಳಸುವ ಸುಮಾರು 50 ರೀತಿಯ ತಂಬುಳಿ ಬೆಂಗಳೂರಿಗರಿಗೆ ಲಭ್ಯ | ಜಾಗತಿಕ ಬ್ರಾಂಡ್ ಆಗಿ ರೂಪಿಸಬೇಕೆನ್ನುವುದು ಇವರ ಚಿಂತನೆ
ಕರ್ನಾಟಕದಲ್ಲಿ ಭಾಷೆ, ವೇಷ, ಊಟ ಎಲ್ಲವೂ ಒಂದೊಣದು ಪ್ರದೇಶದಲ್ಲೂ ಭಿನ್ನ. ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಮತ್ತು ಬಯಲುಸೀಮೆ ಊಟ ವೈಶಿಷ್ಟ್ಯಗಳು ಬೇರೆ ಬೇರೆ. ಅಂಥ ವಿಶೇಷಗಳ ಪೈಕಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ತುಂಬ ಬಳಸುವ ತಂಬುಳಿಯೂ ಒಂದು. ಇದನ್ನು ಪಾನೀಯದಂತೆ ಕುಡಿಯಬಹುದು. ಸ್ವಲ್ಪ ಗಟ್ಟಿ ಮಾಡಿದರೆ, ಅನ್ನಕ್ಕೆ ಕಲಿಸಿಕೊಳ್ಳಬಹುದು. ಹಸಿ ತರಕಾರಿ, ಸೊಪ್ಪು, ಗೆಡ್ಡೆಗಳಿಂದ ಮಾಡುವ ಇದು ತುಂಬ ಆರೋಗ್ಯಕರ.
ಕನ್ನಡ ಸಾಧಕರ ಬಗ್ಗೆ ಹೇಳಬೇಕಾದ ಕಾಲಂನಲ್ಲಿ ತಂಬುಳಿ ಬಗ್ಗೆ ಹೇಳಲು ಹೊರಟಿಲ್ಲ. ತಂಬುಳಿ ಸ್ವಾದವನ್ನು ಉದ್ಯಮವಾಗಿ ಬೆಳೆಸಿದ ಹುಡುಗರ ಕತೆ ಇಲ್ಲಿದೆ.
ಬೆಂಗಳೂರಿನಲ್ಲಿ ಅಲ್ಲಲ್ಲಿ ತಂಬುಳಿ ಮನೆ ಎನ್ನುವ ಔಟ್‌ಲೆಟ್‌ಗಳನ್ನು ನೋಡಿರಬಹುದು. ಇದರ ಹಿಂದೆ ಒಂದು ಕತೆ ಇದೆ. ಇದನ್ನು ಶುರು ಮಾಡಿದವರು ಕಾರ್ತಿಕ್, ಅನುಷಾ ಮತ್ತು ಪ್ರಶಾಂತ್ ಎನ್ನುವ ತ್ರಿಮೂರ್ತಿಗಳು. ಕಾರ್ತಿಕ್ ಮತ್ತು ಅನುಷಾ ದಂಪತಿಗಳು. ಇಬ್ಬರೂ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಬಂತಲ್ಲ, ಆಗ ಅವರು ತಮ್ಮ ಊರಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಂಸಗಾರುಗೆ ಹೋಗಬೇಕಾಗಿ ಬಂದಿತು.
ಜೋಗ್‌ಫಾಲ್ಸ್‌ನಿಂದ ಕೇವಲ 30 ಕಿ.ಮೀ. ದೂರ ಇರುವ ಹಂಸಗಾರುವಿನಿಂದಲೇ ವರ್ಕ್ ಫ್ರಂ ಹೋಂ ಕೆಲಸ ಶುರು ಮಾಡಿಕೊಂಡರು. ಆದರೆ ಒಂದು ಬದಲಾವಣೆ ಅವರಿಗೆ ಕಂಡುಬಂದಿತು. ಬೆಂಗಳೂರಲ್ಲಿದ್ದಾಗ, ಆಗಾಗ ಹೋಟೆಲಿಗೆ ಹೋಗಿ ಏನಾದರೂ ತಿಂದು ಬಂದಲ್ಲಿ ಹೊಟ್ಟೆ ಭಾರ ಎನ್ನಿಸುತ್ತಿತ್ತು. ಆದರೆ ತಮ್ಮೂರಲ್ಲಿ ಪ್ರತಿನಿತ್ಯ ಮನೆ ಊಟದಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿಲ್ಲ. ಸಾಮಾನ್ಯವಾಗಿ ಕರಾವಳಿ, ಮಲೆನಾಡು ಭಾಗದಲ್ಲಿ ಪ್ರತಿನಿತ್ಯ ಊಟದಲ್ಲಿ ತಂಬುಳಿಯೂ ಇರುತ್ತದೆ.
ಬೆಂಗಳೂರಲ್ಲಿ ಹೋಟೆಲುಗಳಲ್ಲಿ ಇಂಥ ಊಟ ಏಕೆ ಸಿಗೋದಿಲ್ಲ ಎನ್ನುವ ಪ್ರಶ್ನೆ ಮೂಡಿತು. ಆ ಪ್ರಶ್ನೆಯೇ ಇವತ್ತು ಬೆಂಗಳೂರಲ್ಲಿ ತಂಬುಳಿ ಮನೆಗಳು ತಲೆ ಎತ್ತಲು ಕಾರಣವಾಗಿದೆ. ಕಾರ್ತಿಕ್ ಮತ್ತು ಅನುಷಾ ಜೊತೆಗೆ ಪ್ರಶಾಂತ್ ಕೂಡ ಇದಕ್ಕೆ ಜೋಡಿಸಿಕೊಂಡರು. ಕಾರ್ತಿಕ್ ಸಿಇಒ ಆದರೆ, ಪ್ರಶಾಂತ್ ಸಿಒಒ ಆಗಿ, ಅನುಷಾ ಸಿಕ್ಯುಒ ಆಗಿ ತಂಬುಳಿ ಮನೆಯ ಸ್ಥಾಪಕರಾಗಿದ್ದಾರೆ.
ತಂಬುಳಿ ಮನೆ ಏಕೆ ಜನಪ್ರಿಯ: ಇಲ್ಲಿ ರಿಫೈನ್ಡ್ ಆಯಿಲ್ ಬಳಸಲ್ಲ. ಕಡಲೆಕಾಯಿ ಅಥವಾ ಕೊಬ್ಬರಿ ಎಣ್ಣೆಯಾಗಲಿ, ಗಾಣದ ಎಣ್ಣೆಯನ್ನೇ ಬಳಸಲಾಗುತ್ತದೆ. ತುಂಬಾ ಪಾಲಿಶ್ ಆಗಿರುವ ಅಕ್ಕಿ ಉಪಯೋಗಿಸುವುದಿಲ್ಲ. ಮಲೆನಾಡು ಭಾಗದಲ್ಲಿ ಬೆಳೆಯುವ ಮೆದೆಮುಗಿಲು ಅಕ್ಕಿಯನ್ನೇ ಬಳಸಲಾಗುತ್ತದೆ. ಹಸಿ ಮೆಣಸಿನಕಾಯಿ ಬದಲಾಗಿ ಒಣಮೆಣಸಿನಕಾಯಿ ಅಥವಾ ಗಾಂಧಾರಿ ಮೆಣಸನ್ನು ಉಪಯೋಗಿಸಲಾಗುತ್ತದೆ.
ಹಣ್ಣು, ತರಕಾರಿಯನ್ನು ಕೂಡ ಆ ಭಾಗದಿಂದಲೇ ಬೆಂಗಳೂರಿಗೆ ಪ್ರತಿನಿತ್ಯ ತರಿಸಿಕೊಳ್ಳಲಾಗುತ್ತದೆ. ಪ್ರತಿನಿತ್ಯ 6-8 ತಂಬುಳಿ ಸಿಕ್ಕೇ ಸಿಗುತ್ತದೆ. ವಾಯುವಿಳಂಗ, ಶ್ರೀಗಂಧ, ಒಂದೆಲಗ ಮುಂತಾದ ಈ ಭಾಗದಲ್ಲಿ ಅಪರೂಪವೆನ್ನಿಸುವ ಆ ಕಡೆ ಕಾಲಕಾಲಕ್ಕೆ ಬಳಸುವ ಸುಮಾರು 50 ರೀತಿಯ ತಂಬುಳಿ ಈಗ ಬೆಂಗಳೂರಿಗರಿಗೂ ಸಿಗುವಂತಾಗಿದೆ. ಇದೊಂದು ತಂಬುಳಿಯ ಸಾಗರ. ತಿಂಡಿಯೂ ಸಿಗುತ್ತದೆ. ಆದರೆ ಎಣ್ಣೆಯಲ್ಲಿ ಕರಿಯುವ ಯಾವ ಪದಾರ್ಥವನ್ನೂ ಮಾಡುವುದಿಲ್ಲ. ಇಡ್ಲಿ ಸಿಗುತ್ತದೆ, ವಡೆ ಇಲ್ಲ.
ಕೆಲವೊಂದು ಔಟ್‌ಲೆಟ್‌ನಲ್ಲಿ ಫುಲ್‌ಮೀಲ್ಸ್ ಕೂಡ ಇದೆ. ಊಟಕ್ಕೆ ಹಪ್ಪಳವೂ ಇದೆ, ಆದರೆ ಬೆಂಕಿಯಲ್ಲಿ ಸುಡುವ ಹಪ್ಪಳ ಮಾತ್ರ ಬಳಸಲಾಗುತ್ತದೆ. ಎಣ್ಣೆಯಲ್ಲಿ ಕರಿಯುವುದಿಲ್ಲ. ಹೀಗೆ ರುಚಿಯಲ್ಲಿ ವೈಶಿಷ್ಟ್ಯತೆಯನ್ನು ಕಾಪಾಡಿಕೊಳ್ಳಲು ಮಾಡಿರುವ ಸರ್ಕಸ್ ಅಷ್ಟಿಷ್ಟಲ್ಲ. ರೆಸಿಪಿ ಮತ್ತು ರುಚಿಯ ಭಾಗವನ್ನು ನೋಡಿಕೊಳ್ಳುತ್ತಿರುವುದು ಸಿಕ್ಯುಒ ಅನುಷಾ. ಅದಕ್ಕೆ ಬೇಕಾದ ವಸ್ತುಗಳ ಪೂರೈಕೆ ಮುಂತಾದವೆಲ್ಲ ಸಿಒಒ.
ಮೊದಲು ಇದನ್ನು ಶುರು ಮಾಡುವ ಯೋಚನೆಯನ್ನು ಸ್ನೇಹಿತರ ಮುಂದಿಟ್ಟಾಗ, ಕೆಲವರು ಹೆದರಿಸಿದರೆ, ಇನ್ನು ಕೆಲವರು ನಿರಾಶೆಯ ಮಾತುಗಳನ್ನೂ ಆಡಿದರು. ಆದರೂ ಮೊದಲು ಕೇವಲ 30 ಲಕ್ಷ ರೂ. ಬಂಡವಾಳ ಹಾಕಿ ಶುರು ಮಾಡಿದಾಗ, ಒಳ್ಳೆಯ ಸ್ಪಂದನೆ ದೊರೆಯಿತು. ಸಣ್ಣದಾಗಿ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಪ್ರಾರಂಭದಲ್ಲಿ ಒಬ್ಬರು ಸಾವಿರಗಟ್ಟಲೆ ತಂಬುಳಿಗೆ ಆರ್ಡರ್ ನೀಡಿದಾಗ, ಅಷ್ಟು ತಂಬುಳಿ ತಯಾರಿಸುವುದು ಹೇಗೆ ಎನ್ನುವ ಪ್ರಶ್ನೆ ಬಂದಿತು. ನೂರಾರು ಲೀಟರ್ ಕಡೆದು ಮಜ್ಜಿಗೆ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ.
ಅದಕ್ಕೆ ಬೇಕಾದ ಯಂತ್ರವೂ ಇರಲಿಲ್ಲ, ಪಾತ್ರೆಗಳೂ ಇರಲಿಲ್ಲ. ಪ್ರತ್ಯೇಕ ಅಡುಗೆಮನೆಯೂ ಇರಲಿಲ್ಲ. ಹೀಗಾಗಿ ಎಲ್ಲವನ್ನೂ ಒಂದೊಂದಾಗಿ ಮಾಡಿಕೊಳ್ಳಲು ನಿರ್ಧರಿಸಿದರು. ಇದೀಗ ಬೆಂಗಳೂರಲ್ಲಿ ಹನ್ನೊಂದು ಔಟ್‌ಲೆಟ್‌ಗಳಿವೆ. ಎಲ್ಲದಕ್ಕೂ ಒಂದು ಕಿಚನ್ ಇದೆ. ಎಷ್ಟೇ ಆರ್ಡರ್ ಬಂದರೂ ತೆಗೆದುಕೊಳ್ಳುವ ಧೈರ್ಯವೂ ಇದೆ, ಸೌಲಭ್ಯವನ್ನೂ ಮಾಡಿಕೊಂಡಿದ್ದಾರೆ. ಈಗ ಮೈಸೂರಿನಲ್ಲೂ ಪೂರ್ಣಪ್ರಮಾಣದ ತಂಬುಳಿ ಹೋಟೆಲ್ ಆರಂಭಿಸಲಾಗಿದೆ.
ತಂಬುಳಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸಬೇಕೆನ್ನುವುದು ಸದ್ಯದ ಅವರ ಚಿಂತನೆ. ಯಾವುದೇ ಎಸೆನ್ಸ್ ಇಲ್ಲದ, ಕೃತಕ ಬಣ್ಣವಿಲ್ಲದ, ಕೆಮಿಕಲ್ಸ್ ಉಪಯೋಗಿಸದ ತಂಬುಳಿ ಜಗತ್ತಿನೆಲ್ಲೆಡೆ ಸಿಗುವಂತೆ ಮಾಡಲು ತ್ರಿಮೂರ್ತಿಗಳು ಪ್ರಯತ್ನಪಡುತ್ತಿದ್ದಾರೆ. ಪ್ರಯತ್ನವಿದ್ದಲ್ಲಿ ಪರಮೇಶ್ವರನ ಸಹಾಯವಿದ್ದೇ ಇದೆ.
ಕಡೇಗೊಂದ್ಮಾತು: ಜನರಿಗೆ ಬೇಕಾಗಿರುವ ಯಾವ ವಸ್ತು ಮಾರ್ಕೆಟ್‌ನಲ್ಲಿ ಇಲ್ಲ ಎಂದು ಗುರುತಿಸುವುದೇ ಯಶಸ್ವಿ ಉದ್ಯಮಿಯ ಮೊದಲ ಹೆಜ್ಜೆಯಾಗಿರುತ್ತದೆ.
