30 ರೂ.ನಿಂದ ಶುರು ಮಾಡಿದವನೀಗ 300 ಕೋಟಿ ಒಡೆಯ | ಕೆಲಸಕ್ಕೆಂದು ಬೆಂಗ್ಳೂರಿಗೆ ಬಂದ ಹಳ್ಳಿ ಹುಡುಗನ ಸಾಹಸಗಾಥೆ
ಬದುಕಿನಲ್ಲಿ ಕೆಲವು ಅನಿರೀಕ್ಷಿತ ತಿರುವುಗಳಿರುತ್ತವೆ. ಅದರಲ್ಲೂ ನೀವು ನಿಮ್ಮ ಕನಸಿನ ಬೆನ್ನೇರಿ ಹೋಗುವಾಗ ಎದುರಾಗುವ ಅನೀರಿಕ್ಷಿತ ಘಟನೆಗಳು ಅದೆಷ್ಟೋ..? ರಾಜೇಶ್ ಗೌಡ ಅವರ ಕಥೆ ಕೂಡ ಇದಕ್ಕೆ ಹೊರತಲ್ಲ. ಕುಣಿಗಲ್ ತಾಲೂಕಿನ ಆಲಕೇರಿಹೊಸಳ್ಳಿ ಎಂಬ ಪುಟ್ಟ ಗ್ರಾಮದ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗ ಪಿಯುಸಿ ಫೇಲ್ ಆಗಿ ಉದ್ಯೋಗವನ್ನರಸಿ ಬೆಂಗಳೂರಿಗೆ ಬರ್ತಾರೆ. ಆಗ ಅವರ ಕೈಯಲ್ಲಿದ್ದಿದ್ದು ಕೇವಲ 30 ರೂ. ಮಾತ್ರ.
ರೇಷ್ಮೆ ಕೃಷಿ ಮಾಡುತ್ತಿದ್ದ ತಂದೆಗೆ ಮಗ ಉನ್ನತ ಶಿಕ್ಷಣ ಪಡೆದು ಸರ್ಕಾರಿ ನೌಕರಿ ಪಡೆಯಲಿ ಎಂಬುದು ಮಹದಾಸೆ. ಕುಟುಂಬದಲ್ಲಿ ಅದೇನೆ ಕಷ್ಟ ಬಂದರೂ ಸರಿ ಸಾಲ ಮಾಡಿಯಾದರೂ ಮಗನನ್ನು ಓದಿಸಬೇಕೆಂದು ಕುಣಿಗಲ್‌ನಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿರುವ ಹೈಸ್ಕೂಲ್‌ಗೆ ಕಳುಹಿಸ್ತಾರೆ. ಹತ್ತನೇ ಕ್ಲಾಸ್ ಪಾಸಾದ ರಾಜೇಶ್ ಅವರಿಗೆ ಅದಾಗಲೇ ಶಿಕ್ಷಣದೆಡೆಗೆ ಆಸಕ್ತಿ ಕಡಿಮೆಯಾಗಿತ್ತು. ಆದರೂ ತಂದೆಯ ಒತ್ತಾಸೆಗೆ ಹುಟ್ಟೂರಿನಲ್ಲೇ ಪಿಯುಸಿಗೆ ಸೇರಿದರಾದರೂ ಸಹ ವಿದ್ಯೆ ತಲೆಗೆ ಹತ್ತದ ಕಾರಣ ಅರ್ಧಕ್ಕೆ ಕಾಲೇಜು ತೊರೆದರು.
ಮಗ ಓದಿ ಸರ್ಕಾರಿ ನೌಕರಿ ಹಿಡಿಯಲಿ ಎಂದು ತಂದೆ ಕಂಡಿದ್ದ ಕನಸೆಲ್ಲಾ ನುಚ್ಚುನೂರಾಗಿತ್ತು. ಸರಿಯಾಗಿ ಓದಲಿಲ್ಲ ಎಂಬ ಕಾರಣಕ್ಕೇ ತಂದೆ ಜತೆ ಮನಸ್ತಾಪ ಉಂಟಾಗಿ ತಾಯಿ ಕೊಟ್ಟ 30 ರೂ. ಕೈಯಲ್ಲಿ ಹಿಡಿದು ಬೆಂಗಳೂರಿಗೆ ಬಂದ ಹುಡುಗ ಸೇರಿದ್ದು 300 ರೂ. ಸಂಬಳದ ಕೆಲಸಕ್ಕೆ. ಅದಾದ ಮೇಲೆ ಸ್ವತಃ ತಂದೆಯೇ ಕಣ್ಣರಳಿಸಿ ನೋಡುವಂಥ ಸಾಧನೆ.
ಸಾಧಿಸುವ ಛಲವಿತ್ತು: ಮನೆ ಬಿಟ್ಟು ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ರಾಜೇಶ್ ಕೊರಿಯರ್ ಡಿಲಿವರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಇಡೀ ಬೆಂಗಳೂರಿನ ತುಂಬ ಬರುವ ಪಾರ್ಸಲ್‌ಗಳನ್ನೆಲ್ಲಾ ಸೈಕಲ್ಲಿನಲ್ಲೇ ಮನೆಮನೆಗೆ ತಲುಪಿಸುತ್ತಿದ್ದರು. ಹೀಗೆ ಸತತ 3 ವರ್ಷಗಳ ಕಾಲ ಕೊರಿಯರ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದವರು ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂದು ಹಠಕ್ಕೆ ಬಿದ್ದರು.
ಆಗ ಅಲ್ಲಿಯೇ ಜತೆಗೆ ಕೆಲಸ ಮಾಡಿಕೊಂಡಿದ್ದ ಇಬ್ಬರು ಗೆಳೆಯರೊಟ್ಟಿಗೆ ಇದ್ದ ಕೆಲಸ ಬಿಟ್ಟು ಸ್ವಂತ ಕೊರಿಯರ್ ಕಂಪನಿಯನ್ನೇ ಕಟ್ಟಿ ಬೆಳೆಸಿದರು. ಮೂವರು ಕೊರಿಯರ್ ಹುಡುಗರು ಸೇರಿ ಕಂಡ ಕನಸು ಕಂಪನಿ ಕಟ್ಟುವಂತೆ ಪ್ರೇರೇಪಿಸಿತು. ಯಾವುದೇ ಅಡೆತಡೆಗಳಿಲ್ಲದೆ ಸುಮಾರು 2 ವರ್ಷಗಳ ಕಾಲ ಕಂಪನಿಯೂ ಸುಗಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದ್ದಕ್ಕಿದ್ದಂತೆ ಅಲ್ಲಿಯೂ ಮನಸ್ತಾಪ ಕಂಪನಿಯ ಅವನತಿಗೆ ಕಾರಣವಾಯಿತು.
ಇದ್ದ ಇಬ್ಬರೂ ಗೆಳೆಯರೂ ಒಬ್ಬ ಚೆನ್ನೈ, ಇನ್ನೊಬ್ಬ ಮತ್ತಾವುದೋ ಕೆಲಸ ಎಂದು ದೂರವಾದರು. ಆದರೂ ಸಹ ಧೃತಿಗೆಡದೆ ರಾಜೇಶ್ ಒಬ್ಬರೇ ಕಂಪನಿ ಕಟ್ಟುವ ಶಪಥ ಮಾಡಿದರು. ಆಗ ಶುರುವಾಗಿದ್ದೇ ಎಲ್.ಆರ್. ಇಂಟರ್ ನ್ಯಾಷನಲ್.
ಕೊರಿಯರ್ ಕ್ಷೇತ್ರದಲ್ಲಿ ಕ್ರಾಂತಿ: ಮೂರ್ನಾಲ್ಕು ಹುಡುಗರನ್ನು ಕೆಲಸಕ್ಕಿಟ್ಟುಕೊಂಡು ಆರಂಭಿಸಿದ ಸಂಸ್ಥೆ ಎಲ್.ಆರ್.ಇಂಟರ್ ನ್ಯಾಷನಲ್. ಸುಮಾರು 1 ವರ್ಷಗಳ ಕಾಲ ಇದೇ ಹೆಸರಿನಲ್ಲಿ ಸಂಸ್ಥೆ ನಡೆಸಿದ ರಾಜೇಶ್ ಅವರು ಕೊರಿಯರ್, ಲಾಜಿಸ್ಟಿಕ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ ಬ್ಲೂಡಾರ್ಟ್‌ನಂತಹ ಸಂಸ್ಥೆಗಳ ಜತೆ ಟೈಅಪ್ ಮಾಡಿಕೊಂಡರು. ಆಗ ಎಲ್‌ಆರ್‌ಇ ಹೆಸರಿನ ಸಂಸ್ಥೆಯನ್ನು ಎಸ್‌ಎಮ್‌ಇ ಎಕ್ಸ್ಪ್ರೆಸ್ ಎಂಬ ಹೆಸರಿನಲ್ಲಿ ಉದ್ಯಮ ಆರಂಭಿಸುತ್ತಾರೆ.
ಪತ್ನಿಯ ಬಂಗಾರ ಮಾರಾಟ: ಆರಂಭದಲ್ಲಿ ಮಾಡಿ 1 ಲಕ್ಷ ರೂ. ಠೇವಣಿ ಮೂಲಕ ಬ್ಲೂಡಾರ್ಟ್ ಏಜೆನ್ಸಿ ಪಡೆದ ರಾಜೇಶ್ ಇದೀಗ ಕೊರಿಯರ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬೆಂಗಳೂರು, ಮುಂಬೈ, ನೋಯ್ಡಾ ಸೇರಿ ದೇಶದ 30ಕ್ಕೂ ಹೆಚ್ಚು ಕಡೆ ತಮ್ಮ ಕಂಪನಿಯ ವೇರ್‌ಹೌಸ್ ಹೊಂದಿರುವ ರಾಜೇಶ್ 400ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದಾರೆ. ವಿದ್ಯೆ ತಲೆಗೆ ಹೋಗಲಿಲ್ಲ ಎಂದು ಬರೀ 30 ರೂ. ಕೈಯಲ್ಲಿಟ್ಟುಕೊಂಡು ಬೆಂಗಳೂರಿಗೆ ಬಂದ ಹುಡುಗ ಈಗ 300 ಕೋಟಿ ರೂ. ಒಡೆಯ.
ಕಡೇಗೊಂದ್ಮಾತು: ಓದು ಬಹಳ ಮುಖ್ಯ. ಆದರೆ ಕಾರಣಾಂತರದಿಂದ ಓದಲು ಆಗದಿದ್ದವರು ಜೀವನದಲ್ಲಿ ಫೇಲ್ ಆಗೇ ಬಿಡ್ತಾರೆ ಎಂದೇನಿಲ್ಲ. ಯಾವ ಹಂತದಿಂದ ಬೇಕಾದರೂ ಮೇಲೆದ್ದು ಜೀವನದಲ್ಲಿ ಗೆಲುವು ಸಾಧಿಸಬಹುದು.
