ರಾಜ್ಯದಿಂದ ಶುರುವಾಗಿ ಇಂದು ದೇಶಾದ್ಯಂತ ಹರಡಿದೆ ಚಂದ್ರಶೇಖರ್‌ರ ಎಸ್‌ಆರ್‌ಸಿ ಟ್ರಾವೆಲ್ಸ್ ಪಯಣ | 10000 ಜನರಿಗೆ ಕೆಲಸ ಕೊಡುವ ಗುರಿ
ಪ್ರಯಾಣ ಅನ್ನುವುದು ಇಂದು ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿ ಹೋಗಿದೆ. ಹಾಗಾಗಿ ಪ್ರಸ್ತುತ ದಿನಗಳಲ್ಲಿ ಪ್ರವಾಸೋದ್ಯಮವು ಪ್ರಪಂಚದಾದ್ಯಂತ ಬಹಳ ದೊಡ್ಡ ಉದ್ಯಮವಾಗಿ ಬೆಳೆದಿದೆ. ತತ್ಪರಿಣಾಮ ಪ್ರವಾಸದ ಈ ಉದ್ಯಮದಲ್ಲಿ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ಈ ಸ್ಪರ್ಧೆಯ ಯುಗದಲ್ಲಿ, ಕೋಲಾರದ ಕೂಳೂರು ಎಂಬ ಸಣ್ಣ ಹಳ್ಳಿಯಿಂದ ಬಂದ ಚಂದ್ರಶೇಖರ್ ಬಾಬು ಕೆ.ಎಂ. ಅವರು ತಮ್ಮ ಕೆಲಸದ ದಕ್ಷತೆಯಿಂದ ಎಸ್‌ಆರ್‌ಸಿ ಟ್ರಾವೆಲ್ಸ್ ಎಂಬ ಕಂಪನಿಯನ್ನು ಕಟ್ಟಿ ನಿಲ್ಲಿಸಿದ್ದಾರೆ.
ಚಂದ್ರಶೇಖರ್ ತಮ್ಮ ಹಳ್ಳಿಯಲ್ಲಿ ಶಿಕ್ಷಣ ಮುಗಿಸಿ ಬೆಂಗಳೂರಿಗೆ ಬಂದು ಕೆಲಸ ಪಡೆದರು. ಆರಂಭದಲ್ಲಿ, ಅವರು ಸುರಕ್ಷತಾ ಸೀಟ್ ಬೆಲ್ಟ್‌ಗಳನ್ನು ತಯಾರಿಸುವ ಕಂಪನಿಯಲ್ಲಿ ಸೇರಿಕೊಂಡರು. ಮೊದಲಿನಿಂದಲೂ ಅವರಿಗೆ ಪ್ರಯಾಣ ಮಾಡುವುದು ತುಂಬಾ ಇಷ್ಟವಾಗಿದ್ದ ಕಾರಣ, ನಂತರ ಅವರನ್ನು ಎಸ್‌ಆರ್‌ಎಸ್ ಟ್ರಾವೆಲ್‌ನಲ್ಲಿ ಕಾರ್ಯನಿರ್ವಾಹಕರಾಗಿ ಸೇರಿಸಲಾಯಿತು.
ಅವರು ಪ್ರತಿಷ್ಠಿತ ಎಸ್‌ಆರ್‌ಎಸ್ ಟ್ರಾವೆಲ್‌ನಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದರು ಹಾಗೂ ಟ್ರಾವೆಲ್ಸ್ ಉದ್ಯಮದ ಸೂಕ್ಷ್ಮತೆಯನ್ನು ಚೆನ್ನಾಗಿ ಕಲಿತರು. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಹೊಂದಿದ್ದ ಚಂದ್ರಶೇಖರ್ ಅವರು, 2014ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಎಸ್‌ಆರ್‌ಸಿ ಟ್ರಾವೆಲ್ಸ್ ಎಂಬ ಸ್ವಂತ ಕಂಪನಿಯನ್ನೇ ಶುರು ಮಾಡಿದರು.
ಆರಂಭದಲ್ಲಿ 10 ಗುತ್ತಿಗೆ ಪಡೆದ ವಾಹನದಿಂದ ಶುರುವಾದ ಈ ಕಂಪನಿ ಮೂರೇ ತಿಂಗಳಲ್ಲಿ 40ಕ್ಕೇರಿತು. ತಮ್ಮ ಪರಿಶ್ರಮದ ಕೆಲಸದ ಪರಿಣಾಮ ಒಂದೇ ವರ್ಷದಲ್ಲಿ 250 ವಾಹನಗಳ ಮೂಲಕ ತಮ್ಮ ಕೆಲಸವನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಿದರು. ಎಸ್‌ಆರ್‌ಸಿ ಟ್ರಾವೆಲ್ಸ್ ಇಂದು ತನ್ನ ಪ್ಯಾನ್ ಇಂಡಿಯಾ ವ್ಯಾಪ್ತಿಯಲ್ಲಿ ಬೆಳೆದು ನಿಂತಿದ್ದು, ಇದರ ಶಾಖಾ ಕಚೇರಿಗಳು ಬೆಂಗಳೂರು, ಚೆನೈ, ಹೈದರಾಬಾದ್, ವೆಲ್ಲೂರ್ ಹಾಗೂ ಹೊಸೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಜತೆಗೆ ಮುಂಬೈ, ದೆಹಲಿ, ಕೋಲ್ಕತಾ, ಕೊಚ್ಚಿನ್ ಮತ್ತು ಗೋವಾದಲ್ಲೂ ತಮ್ಮ ಕಚೇರಿಗಳನ್ನು ತೆರೆಯಲು ಎಸ್‌ಆರ್‌ಸಿ ಟ್ರಾವಲ್ಸ್ನ ಚಂದ್ರಶೇಖರ್ ಅವರು ಮುಂದಾಗಿದ್ದಾರೆ.
ಎಸ್‌ಆರ್‌ಸಿ ಟ್ರಾವೆಲ್ಸ್ ಇಂದು ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ವ್ಯವಹಾರ ನಡೆಸುತ್ತಿದೆ ಮತ್ತು 99% ರಿಂದ 100% ವರೆಗಿನ ಗ್ರಾಹಕ ತೃಪ್ತಿ ರೇಟಿಂಗ್‌ಗಳನ್ನು ಸಾಧಿಸಿದೆ. 5 ಪ್ರಮುಖ ಕ್ಷೇತ್ರಗಳಲ್ಲಿ ಎಸ್‌ಆರ್‌ಸಿ ಕಾರ್ಯನಿರ್ವಹಿಸುತ್ತಿದೆ. 1. ಕಾರ್ಪೊರೇಟ್, 2. ಏರ್‌ಲೈನ್ಸ್ ಕ್ಯಾಬಿನ್ ಸಿಬ್ಬಂದಿ ಸೇವೆ, 3. ಲಾಜಿಸ್ಟಿಕ್ಸ್, 4. ಪ್ರವಾಸಗಳು ಹಾಗೂ 5. ಈವೆಂಟ್‌ಗಳು, ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳ ಬುಕಿಂಗ್.
ಸಹೋದ್ಯೋಗಿಗಳ ಜತೆ ಒಳ್ಳೆಯ ಸಂಬಂಧ: ಎಸ್‌ಆರ್‌ಸಿ ಟ್ರಾವೆಲ್ಸ್ ಈ ಬೆಳವಣಿಗೆಗೆ ಮತ್ತೊಂದು ಕಾರಣವೆಂದರೆ ಸಂಸ್ಥೆಯಲ್ಲಿರುವ ಶ್ರಮಶೀಲ ನೌಕರರು. ಚಂದ್ರಶೇಖರ್ ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಸಮಯಕ್ಕೆ ಸರಿಯಾಗಿ ಅವರಿಗೆಲ್ಲ ಸಂಬಳದ ಜತೆಗೆ ಬೋನಸ್‌ನ್ನೂ ಕೊಡುತ್ತ ಬಂದಿದ್ದಾರೆ. ಅಷ್ಟೇ ಅಲ್ಲದೆ, ಯಾರೇ ಸಹೋದ್ಯೋಗಿ ಕಷ್ಟ ಎಂದು ಬಂದರೆ ಚಂದ್ರಶೇಖರ್ ತಕ್ಷಣವೇ ಸ್ಪಂದಿಸಿ ಕೈಲಾದ ಸಹಾಯವನ್ನು ಮಾಡುತ್ತಾರೆ.
ಇನ್ನು ತಮ್ಮ ಬಿಡುವಿನ ವೇಳೆಯಲ್ಲಿ ಚಂದ್ರಶೇಖರ್ ಅವರು ಸಮಾಜ ಸೇವೆಗಳಲ್ಲೂ ತೊಡಗಿಸಿಕೊಳ್ಳುತ್ತಾರೆ. ಅವರು ಅನಾಥಾಶ್ರಮಗಳಿಗೆ ಆರ್ಥಿಕವಾಗಿ ಸಹಾಯ ಮಾಡುವುದು ಹಾಗೂ ಅನ್ನದಾನ ಮಾಡುವುದು ಸೇರಿದಂತೆ ಇನ್ನೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ.
ಶುರುವಾಗಿದ್ದು 10ರಿಂದ, ಈಗಿರೋದು 1200 ವಾಹನ: ಕೇವಲ 10 ವಾಹನಗಳಿಂದ ಆರಂಭವಾದ ಎಸ್‌ಆರ್‌ಸಿ ಟ್ರಾವೆಲ್ಸ್ ಇಂದು 400 ಸ್ವಂತ ಫ್ಲೀಟ್‌ಗಳನ್ನು ಹೊಂದಿರುವ ಕಂಪನಿಯಾಗಿದ್ದು, 800 ಫ್ಲೀಟ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಂಡಿದೆ. ಅಂದರೆ ಒಟ್ಟಾರೆ 1200 ವಾಹನಗಳನ್ನು ಚಂದ್ರಶೇಖರ್ ಅವರ ಕಂಪನಿ ಈಗ ನಿರ್ವಹಿಸುತ್ತಿದೆ.
10000 ಜನರಿಗೆ ಕೆಲಸ ಕೊಡುವ ಗುರಿ: ದೇಶಾದ್ಯಂತ ತಮ್ಮ ಶಾಖಾ ಕಚೇರಿಗಳನ್ನು ತೆರೆದು ಸುಮಾರು 5-10 ಸಾವಿರ ಜನರಿಗೆ ಕೆಲಸ ಕೊಡಬೇಕು ಎನ್ನುವುದು ಚಂದ್ರಶೇಖರ್ ಅವರ ಮುಂದಿರುವ ಮುಂದಿನ ಮಹತ್ವದ ಗುರಿ.
