Home ವಿಶೇಷ ಸುದ್ದಿ ಕಂಪನಿಗಳ ಕೆಲಸ ಸುಲಭವಾಗಿಸುವುದೇ ಈ ಕನ್ನಡಿಗನ ಕಂಪನಿಯ ಕೆಲಸ!

ಕಂಪನಿಗಳ ಕೆಲಸ ಸುಲಭವಾಗಿಸುವುದೇ ಈ ಕನ್ನಡಿಗನ ಕಂಪನಿಯ ಕೆಲಸ!

0
ನವೆಂಬರ್ 18ರಂದು ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕನ್ನಡ ನಾಡಿನ ಚಿನ್ನದ ಸಾಧಕರು ಅಡಿ ಪ್ರಕಟವಾದ ಲೇಖನ

ತಾನು ಆರಂಭಿಸಿದ ಸ್ಟಾರ್ಟಪ್ ಕಂಪನಿಯ ಕಷ್ಟಗಳನ್ನೇ ಬಂಡವಾಳ ಮಾಡಿಕೊಂಡು `ಸ್ಟಾರ್ಟಪ್ ಜೋನ್’ ಆರಂಭಿಸಿದ ಶ್ಯಾಮಸುಂದರ್

ಅವರೊಬ್ಬ ನವೋದ್ಯಮಿ. ತಮ್ಮದೇ ಆದ ಕಂಪನಿ ತೆರೆದು, ಉತ್ಸಾಹದಲ್ಲಿ ಕೆಲಸ ಶುರು ಮಾಡಿದ್ದರು. ಅನೇಕ ಎಡರು ತೊಡರುಗಳನ್ನೆದುರಿಸಿ ಸಾಗುತ್ತಿದ್ದರು. ಆದರೆ ನಿಜವಾದ ಸಮಸ್ಯೆ ಎದುರಾಗಿದ್ದು ತೆರಿಗೆ ತುಂಬಲು ಅದಕ್ಕೆ ಬೇಕಾದ ಪೇಪರ್ ವರ್ಕ್ ಮಾಡಲು ಕುಳಿತಾಗ. ತೆರಿಗೆ ನೋಂದಣಿ, ಕಂಪನಿಯಿಂದ ಕಾರ್ಪೊರೇಷನ್‌ವರೆಗೆ ಪ್ರತಿಯೊಂದು ಹಂತದಲ್ಲೂ ಕಿರಿಕಿರಿ. ನವೋದ್ಯಮಿಗಳಿಗೆ ಇದೆಲ್ಲ ನಿಜವಾದ ಸವಾಲೇ ಸರಿ.

ಆದರೆ ಇದನ್ನು ಸಮಸ್ಯೆ ಎಂದು ಅಂದುಕೊಳ್ಳದೇ ಇದನ್ನೂ ಒಂದು ಅವಕಾಶ ಎಂದು ಪರಿಗಣಿಸಿದರು ಅವರು. ಕಂಪನಿ ಅನುಸರಣೆಗಳನ್ನು ಇನ್ನಷ್ಟು ಸರಳಗೊಳಿಸುವುದು ಹೇಗೆ ಎಂದು ಯೋಚಿಸಿದರು. ಅದು ಈಗ ಸಾವಿರಾರು ನವೋದ್ಯಮಿಗಳಿಗೆ ಅನುಕೂಲವಾಗಿದೆ. ಅಂದಹಾಗೆ ಆ ನವೋದ್ಯಮಿ ಹೆಸರು ಶರತ್ ಶ್ಯಾಮಸುಂದರ್.

ಬೆಂಗಳೂರಿನವರಾದ ಶರತ್ ಎಂಬಿಎ ಮಾಡಿ, ನವೋದ್ಯಮ ಆರಂಭಿಸಿದ್ದರು. ತಮ್ಮ ಮೊದಲ ಉದ್ಯಮ ಮುಚ್ಚಿದ ನಂತರ ಕಾನೂನಿಗೆ ಸಂಬಂಧಪಟ್ಟ ಸ್ಟಾರ್ಟಪ್ ವಕೀಲ್ ಸರ್ಚ್‌ನಲ್ಲಿ ಮಾರಾಟ ಮತ್ತು ಪಾಲುದಾರಿಕೆ ವಿಭಾಗದ ಮುಖ್ಯಸ್ಥರಾಗಿ ಕೆಲಸಕ್ಕೆ ಸೇರಿಕೊಂಡರು. ಹೇಗೆ ನವೋದ್ಯಮಿಗಳು ತೆರಿಗೆ ಅನುಸರಣೆ ಮಾಡಲು ಸಮಯ ಮತ್ತು ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರಿಗೇ ಸ್ವತಃ ಅನುಭವವಾಗಿತ್ತು.

ವಕೀಲ್ ಸರ್ಚ್‌ನಲ್ಲಿ ಅದರ ಇನ್ನಷ್ಟು ಮುಖಗಳು ಗೊತ್ತಾದವು. ಗೊತ್ತಿಲ್ಲದೆ ಆಗುವ ಸಣ್ಣ ತಪ್ಪೂ ಭಾರಿ ಬೆಲೆ ತೆರಬೇಕಾಗುತ್ತದೆ ಎನ್ನುವುದು ಅರಿವಾಯಿತು. ಇದು ನವೋದ್ಯಮಗಳಿಗೆ ಕಾಸ್ಟ್‌ಲಿ ಎನ್ನುವುದು ಶರತ್ ಅವರಿಗೆ ಗೊತ್ತಾಯಿತು. ನಂತರ ಪೇಯುಗೆ ಸೇರಿಕೊಂಡರು. ಅಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿಯೂ ಪೇಪರ್‌ವರ್ಕ್ ತಾಪತ್ರಯಗಳು ಕಂಡುಬಂದವು. ಇವೆಲ್ಲ ಕೊರತೆಗಳಿಗೆ ಪರಿಹಾರ ಹುಡುಕಿ, ಅದನ್ನು ಸರಳಗೊಳಿಸುವುದನ್ನು ತಮ್ಮ ಜೀವನದ ಉದ್ದೇಶವನ್ನಾಗಿ ಮಾಡಿಕೊಂಡರು ಶರತ್. ಅದರ ಪರಿಣಾಮವೇ `ಸ್ಟಾರ್ಟಪ್ ಜೋನ್’ನ ಹುಟ್ಟು.

ಚಾರ್ಟರ್ಡ್ ಅಕೌಂಟೆಂಟ್‌ಗಳು, ಕಾನೂನು ತಜ್ಞರು, ಕಂಪನಿ ಸೆಕ್ರೆಟೇರಿಯಲ್ ಎಲ್ಲ ಸೇವೆಗಳನ್ನೂ ಒಂದೇ ವೇದಿಕೆಯಡಿ ತರುವುದು ಮುಖ್ಯ ಉದ್ದೇಶ. ನವೋದ್ಯಮಿಗಳು ಮತ್ತು ಸಣ್ಣ ಉದ್ದಿಮೆದಾರರು ಒಂದೊಂದಕ್ಕೆ ಒಂದೊಂದು ಕಡೆ ಅಲೆಯುತ್ತಾ ಸಮಯ ಕಳೆಯಬಾರದು ಎನ್ನುವುದು ಇದರ ಉದ್ದೇಶ. ಪ್ರಾರಂಭದಲ್ಲಿ ಕೇವಲ 2-3 ಲಕ್ಷ ರೂ. ಬಂಡವಾಳ ಹೂಡಿ ಮನೆಯಿಂದಲೇ ಕೆಲಸ ಆರಂಭಿಸಿದರು.

ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ಇದಕ್ಕಾಗಿ ಉದ್ಯಮಿಗಳನ್ನು ಹುಡುಕಿದರು. ಪ್ರಾರಂಭದಲ್ಲಿ ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಖರೀದಿಸಿ ಬೇಸಿಕ್ ವೆಬ್‌ಸೈಟ್ ರೂಪಿಸಿದರು. ಗೂಗಲ್ ಆ್ಯಡ್ಸ್ ಮೂಲಕ ಜಾಹೀರಾತು ನೀಡಿದರು. ವ್ಯಾಟ್ಸ್ ಮತ್ತು ಸರ್ವೀಸ್ ಟ್ಯಾಕ್ಸ್ ರಿಜಿಸ್ಟ್ರೆಷನ್ಸ್ ಮಾಡಿಕೊಡುವುದಾಗಿ ಹೇಳಿಕೊಂಡರು. ಪ್ರತಿವರ್ಷ ಹೊಸ ಹೊಸ ಸೇವೆಗಳನ್ನು ಅದಕ್ಕೆ ಸೇರಿಸುತ್ತಾ ಹೋದರು.

ಕಂಪನಿ ಸಂಯೋಜನೆ, ಪಾರ್ಟ್‌ರ್‌ಶಿಪ್ ರಿಜಿಸ್ಟ್ರೇಷನ್ ಶೇ. 100ರಷ್ಟು ಡಿಜಿಟಲ್, ಸಂಯೋಜನೆ ನಂತರ ಜಿಎಸ್‌ಟಿ, ಆದಾಯ ತೆರಿಗೆ ರಿಟರ್ನ್ಸ್, ಬೌದ್ಧಿಕ ಆಸ್ತಿ ಹಕ್ಕುಗಳು, ಹೊಸ ಬ್ರ್ಯಾಂಡ್‌ಗಳಿಗೆ ಟ್ರೇಡ್ ಮಾರ್ಕ್ ಮತ್ತು ಐಪಿ ರಿಜಿಸ್ಟ್ರೇಷನ್, ಹೂಡಿಕೆ ಸಲಹೆ ಎಲ್ಲವೂ ಈಗ ಅವರ ಬಳಿ ಲಭ್ಯವಿದೆ.

ಜಿಎಸ್‌ಟಿ ಮೊದಲ ದಿನವೇ 100 ಕರೆಗಳು ಬಂದವು ಎನ್ನುವುದು ಹೇಗೆ ಆ ಕಂಪನಿ ಜನರಲ್ಲಿ ವಿಶ್ವಾಸ ಮೂಡಿಸಿಕೊಂಡಿತು ಎನ್ನುವುದಕ್ಕೆ ಸಾಕ್ಷಿ. ಮೊದಲ ವರ್ಷ 5 ಲಕ್ಷ ಗಳಿಸಿದ ಸ್ಟಾರ್ಟಪ್ ಜೋನ್, ಎರಡನೇ ವರ್ಷಕ್ಕೆ ತನ್ನ ಆದಾಯವನ್ನು 12 ಲಕ್ಷಕ್ಕೆ ಏರಿಸಿಕೊಂಡಿತು. ಮೂರನೇ ವರ್ಷಕ್ಕೆ 19 ಲಕ್ಷಕ್ಕೇರಿತು. ಜಿಎಸ್‌ಟಿ ಜಾರಿಗೆ ಬಂದಾಗ 45 ಲಕ್ಷಕ್ಕೆ ಆದಾಯವನ್ನು ವೃದ್ಧಿಸಿಕೊಂಡಿತು. ಕ್ರಮೇಣ ಇದು ಏರಿಕೆಯ ಹಾದಿಯಲ್ಲೇ ಸಾಗಿ 2023-24ರಲ್ಲಿ 2.2 ಕೋಟಿಗೆ ವೃದ್ಧಿಯಾಗಿದೆ ಎನ್ನುವುದು ಇದರ ಯಶಸ್ಸಿನ ಕತೆ.

ಕಡೇಗೊಂದ್ಮಾತು: ಕಷ್ಟ ಮತ್ತು ಸವಾಲುಗಳು ಜೊತೆಗೆ ಅವಕಾಶವನ್ನೂ ತಂದಿರುತ್ತದೆ. ಅದನ್ನು ಗುರುತಿಸಿ ಬಳಸಿಕೊಳ್ಳುವುದರಲ್ಲಿ ಜಾಣತನ ಇದೆ.

NO COMMENTS

LEAVE A REPLY

Please enter your comment!
Please enter your name here

Exit mobile version