ಒಂದು ಬಸ್ಸಿಂದ ಶುರು ಮಾಡಿದ್ದ ಕುಕ್ಕೆಶ್ರೀ ಟ್ರಾವೆಲ್ಸ್ ಇಂದು ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿವೆ
ದೇವರಾಜು ಅವರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಇಂದು ಕುಕ್ಕೆಶ್ರೀ ಎಂಬ ಕರ್ನಾಟಕದಲ್ಲಿ ಪ್ರಸಿದ್ಧಿಗಳಿಸಿರುವ ಟ್ರಾವೆಲ್ ಕಂಪನಿಯೊಂದನ್ನು ಶುರು ಮಾಡುತ್ತಾರೆ. ಇವರ ಬಸ್‌ಗಳಲ್ಲಿಂದು ನಿತ್ಯವೂ ಸಾವಿರಾರು ಜನ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ.
ಮಂಡ್ಯದ ಮದ್ದೂರಿನವರಾದ ದೇವರಾಜು ಅವರು ತಮ್ಮ ಶಿಕ್ಷಣ ಮುಗಿಸಿ, 1997ರಲ್ಲಿ ಬೆಂಗಳೂರಿಗೆ ಬರುತ್ತಾರೆ. ಪದ್ಮಾ ಟ್ರಾವೆಲ್ಸ್ ಎಂಬ ಪ್ರಯಾಣ ಏಜೆನ್ಸಿಯಲ್ಲಿ ಮೂರು ವರ್ಷಗಳ ಕಾಲ ಬುಕಿಂಗ್ ಏಜೆಂಟ್ ಕೆಲಸ ಮಾಡಿದರು. ಇಲ್ಲಿ ತಿಂಗಳಿಗೆ 1000 ರೂಪಾಯಿ ಸಂಬಳವನ್ನು ಅವರು ಪಡೆಯುತ್ತಿದ್ದರು.
ಹೀಗೆ ಒಮ್ಮೆ ಸ್ನೇಹಿತರೊಬ್ಬರ ಮದುವೆಗೆ ಹೋಗಿದ್ದಾಗ ಅಲ್ಲಿನ ಕೆಲವು ಜನರೊಂದಿಗೆ ನಡೆದ ಮಾತುಕತೆ ದೇವರಾಜು ಅವರಲ್ಲಿ ತಮ್ಮದೇ ಕಂಪನಿಯೊಂದನ್ನು ಶುರು ಮಾಡುವ ವಿಚಾರಕ್ಕೆ ಬುನಾದಿಯಾಯಿತು. ಆಗ ಅವರು ಒಂದು ಬಸ್ ಅನ್ನು ಗುತ್ತಿಗೆಗೆ ತೆಗೆದುಕೊಂಡು ಜನರನ್ನು ವಿವಿಧ ಪ್ರಸಿದ್ಧ ಸ್ಥಳಗಳಿಗೆ, ವಿಶೇಷವಾಗಿ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಪ್ರವಾಸಿಗಳನ್ನು ಕರೆದೊಯ್ಯುತ್ತಿದ್ದರು.
ಇದು ಕೆಲವೇ ಸಮಯದಲ್ಲಿ ಭಾರಿ ಯಶಸ್ಸನ್ನು ಕಂಡಿತು ಹಾಗೂ ಲಾಭವನ್ನು ತಂದುಕೊಟ್ಟದ್ದಷ್ಟೇ ಅಲ್ಲದೆ, ಪ್ರಯಾಣಿಕರಿಗೆ ತೃಪ್ತಿದಾಯಕವಾದ ಅನುಭವವನ್ನೂ ನೀಡಿತು. 2005ರವರೆಗೆ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದ ದೇವರಾಜು ಅವರು 2006ರಲ್ಲಿ ಕುಕ್ಕೆಶ್ರೀ ಟ್ರಾವೆಲ್ಸ್ ಅನ್ನು ಶುರು ಮಾಡಿದರು. ಮೊದಲಿಗೆ 7 ಲಕ್ಷ ರೂಪಾಯಿ ಕೊಟ್ಟು ಒಂದು ಬಸ್ ಖರೀದಿ ಮಾಡಿ ಅದನ್ನು ಧರ್ಮಸ್ಥಳ ಓಡಾಟಕ್ಕೆ ಬಿಟ್ಟರು. ಎರಡನೇ ವರ್ಷದ ವೇಳೆಗೆ ನಾಲ್ಕು ಬಸ್‌ಗಳಿಗೆ ಈ ಸೇವೆ ವಿಸ್ತರಣೆಯಾಯಿತು.
ಸದ್ಯ 50ಕ್ಕೂ ಹೆಚ್ಚು ಬಸ್‌ಗಳು ಕುಕ್ಕೆಶ್ರೀ ಹೆಸರಿನಡಿ ರಾಜ್ಯಾದ್ಯಂತ ಓಡಾಡುತ್ತಿವೆ. ಈ ಎಲ್ಲಾ ಬಸ್‌ಗಳನ್ನು ದೇವರಾಜು ಅವರು ಸ್ವತಂತ್ರವಾಗಿಯೇ ಖರೀದಿಸಿದ್ದಾರೆಯೇ ವಿನಾ ಯಾವುದನ್ನೂ ಗುತ್ತಿಗೆ ಮೇಲೆ ತೆಗೆದುಕೊಂಡಿಲ್ಲ. ಕುಕ್ಕೆಶ್ರೀ ಟ್ರಾವೆಲ್ಸ್ ತನ್ನ ಗ್ರಾಹಕರಿಗೆ ಅತ್ಯುತ್ತಮ ಸ್ಲೀಪರ್ ಬಸ್ ಅನುಭವವನ್ನು ಒದಗಿಸುತ್ತದೆ. ಪ್ರಯಾಣಿಕರಿಗೆ ಅನುಕೂಲಕರ ಆಸನಗಳು ಇವೆ. ಬಹುತೇಕ ಎಲ್ಲಾ ಬಸ್‌ಗಳಲ್ಲಿ ಲೈವ್ ಬಸ್ ಟ್ರ‍್ಯಾಕಿಂಗ್‌ನ ಉತ್ತಮ ತಂತ್ರಜ್ಞಾನವನ್ನು ಸಹ ಇದೆ. ಜತೆಗೆ ಇನ್ನೂ ಹಲವಾರು ಸೌಲಭ್ಯಗಳನ್ನು ಕುಕ್ಕೆಶ್ರೀ ಟ್ರಾವೆಲ್ಸ್ ಒದಗಿಸುತ್ತದೆ.
ಡ್ರೈವರ್‌ಗಳ ಆದಿಯಾಗಿ ಕೆಲಸದಲ್ಲಿ ಅತ್ಯಂತ ಚಾಕಚಕ್ಯತೆ ಹೊಂದಿರುವ ಸಿಬ್ಬಂದಿಯನ್ನೇ ಈ ಕಂಪನಿ ನೇಮಕ ಮಾಡಿಕೊಳ್ಳುತ್ತದೆ. ದೇವರಾಜು ಅವರ ಟ್ರಾವೆಲ್ಸ್ ಕಂಪನಿಯಲ್ಲಿ 200ಕ್ಕೂ ಹೆಚ್ಚು ಜನ ಈಗ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ವಿದ್ಯುತ್ ಬಸ್‌ಗಳ ಜನಪ್ರಿಯತೆ ಹೆಚ್ಚಾಗಲಿದೆ ಮತ್ತು ಅದಕ್ಕೆ ಹೊಂದಿಕೊಳ್ಳುವುದರಿಂದ ನಮಗೂ, ಜನರಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ದೇವರಾಜು ಅವರು. ಹಾಗಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಕುಕ್ಕೆಶ್ರೀ ಯೋಜಿಸಿದೆ.
ಹೆಚ್ಚುವರಿಯಾಗಿ, ಕಂಪನಿಯು ತನ್ನ ಪ್ರಯಾಣ ಮಾರ್ಗಗಳನ್ನು ಹೈದರಾಬಾದ್, ಕೊಚ್ಚಿನ್ ಮತ್ತು ಚೆನೈನಂತಹ ಜನಪ್ರಿಯ ತಾಣಗಳಿಗೆ ವಿಸ್ತರಿಸಲು ಉದ್ದೇಶಿಸಿದೆ. ತಮ್ಮದೇ ಸ್ವಂತ ಟ್ರಾವೆಲ್ ಏಜೆನ್ಸಿಯನ್ನು ಶುರು ಮಾಡುತ್ತಿರುವವರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಈ ಎಲ್ಲಾ ಕಂಪನಿಗಳಲ್ಲೂ ಉನ್ನತ ಸ್ಥಾನವನ್ನು ತಲುಪಬೇಕು ಹಾಗೂ ಜನರಿಗೆ ಉತ್ತರ ಸಂಚಾರ ಸೌಲಭ್ಯ ಒದಗಿಸಬೇಕು ಎಂಬ ಉದ್ದೇಶವಿದೆ. ಈ ಸದುದ್ದೇಶಗಳಿರುವ ಟ್ರಾವೆಲ್ ಕಂಪನಿಗಳಲ್ಲಿ ಕುಕ್ಕೆಶ್ರೀ ಟ್ರಾವೆಲ್ಸ್ ಕೂಡ ಒಂದು ಎಂದು ಹೇಳಬಹುದು.
ಇನ್ನು, ಆನ್‌ಲೈನ್ ಪಾವತಿಗಳ ಲಭ್ಯತೆಯಿಂದಾಗಿ ಕುಕ್ಕೆಶ್ರೀ ಟ್ರಾವೆಲ್ಸ್ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಂಡಿದೆ. ಇದು ಪಾವತಿ-ಸಂಬಂಧಿತ ತೊಂದರೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಕಂಪನಿಯು ಈಗ ಗದಗ, ಕಲಬುರಗಿ ಮತ್ತು ರಾಯಚೂರಿಗೆ ಪ್ರಯಾಣಿಸುವ ಬಸ್‌ಗಳನ್ನು ಹಾಗೂ ಗೋವಾ, ಊಟಿ ಮತ್ತು ಇತರ ಸ್ಥಳಗಳಿಗೆ ಮತ್ತು ಅಲ್ಲಿಂದ ವಿಶೇಷ ಪ್ರವಾಸಗಳನ್ನು ನಿರ್ವಹಿಸುತ್ತದೆ.
