ಪಿಯುಸಿಗೇ ಓದು ನಿಲ್ಲಿಸಿದವನೀಗ ಕಂಪನಿ ಮಾಲೀಕ | ಸಾವಿರಾರು ಜನಕ್ಕೆ ಕೆಲಸ ಕೊಟ್ಟ ಉದ್ಯಮಿ ಸತ್ಯಶಂಕರ್ ಸಕ್ಸಸ್ ಸ್ಟೋರಿ
ಯಶಸ್ಸು ಅನ್ನೋದು ಸಾಧಕನ ಸ್ವತ್ತು. ನಿರಂತರ ಸೋಲಿನ ಬಳಿಕ ಯಶಸ್ಸು ಸಿಗುತ್ತದೆ. ಅದಕ್ಕೆ ಸತತ ಪರಿಶ್ರಮ, ತಾಳ್ಮೆ ಅಗತ್ಯವಿರುತ್ತದೆ. ಒಂದೊಮ್ಮೆ ನಾವು ಅಂದುಕೊಂಡಿದ್ದರಲ್ಲಿ ಯಶಸ್ವಿಯಾದರೆ ಆನಂತರ ಆಗೋದೆಲ್ಲವೂ ಒಳ್ಳೆಯದೇ. ಆದರೆ ಯಾವತ್ತೂ ತಾಳ್ಮೆ ಕಳೆದುಕೊಳ್ಳಬಾರದು. ಈ ಬೀಜಮಾತನ್ನು ಹೇಳುವ ಎಸ್‌ಜಿ ಗ್ರೂಪ್‌ನ ಎಂಡಿ ಸತ್ಯಶಂಕರ್, ತಮ್ಮ ಕಂಪನಿಯ ಉತ್ಪನ್ನ ಜನರಿಗೆ ಪರಿಚಯವಾಗಲು 10 ವರ್ಷಗಳೇ ಬೇಕಾಯಿತು ಎಂದು ವಿವರಿಸುತ್ತಾರೆ.
ಬಹುಶಃ ಸತ್ಯಶಂಕರ್ ಹೆಚ್ಚಿನವರಿಗೆ ಪರಿಚಯ ಇಲ್ಲದಿರಬಹುದು. ಆದರೆ ಬಿಂದು ಜೀರಾ ಸೋಡಾ ನಾವೆಲ್ಲರೂ ಒಮ್ಮೆಯಾದರೂ ಕುಡಿದಿರುತ್ತೇವೆ. ಬಿಂದು ಮಿನರಲ್ ವಾಟರ್, ಬಿಂದು ಜೀರಾ ಮಸಾಲ ಸೇರಿದಂತೆ 50ಕ್ಕೂ ಹೆಚ್ಚು ಉತ್ಪನ್ನಗಳ ತಯಾರಿಸುವ ಎಸ್‌ಜಿ ಕಂಪನಿಯ ಹಿಂದಿರುವ ಶಕ್ತಿಯೇ ಸತ್ಯಶಂಕರ್.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಸಮೀಪದ ಪುಟ್ಟ ಗ್ರಾಮದಲ್ಲಿ ಹುಟ್ಟಿಬೆಳೆದ ಸತ್ಯಶಂಕರ್ ಅವರು ತಮ್ಮೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದರು. ತಂದೆ ಕೃಷ್ಣ ಭಟ್ ವೃತ್ತಿಯಿಂದ ಪುರೋಹಿತರಾಗಿದ್ದರು. ಮನೆಯಲ್ಲಿ ಅಷ್ಟಾಗಿ ದುಡ್ಡಿರಲಿಲ್ಲ. ಅಣ್ಣಂದಿರು ಅದಾಗಲೇ ಡಿಗ್ರಿ ಪದವಿ ಪಡೆದರೂ ನಿರುದ್ಯೋಗಿಗಳಾಗಿದ್ದರು. ಮನೆಯಲ್ಲಿ ಬಡತನ ಕಂಡ ಶಂಕರ್ ಪಿಯುಸಿಯಲ್ಲೇ ಓದು ನಿಲ್ಲಿಸಿದರು.
ಆ ಬಳಿಕ ಸರ್ಕಾರದ ಯೋಜನೆಯಲ್ಲಿ 15 ಸಾವಿರ ರೂ. ಲೋನ್ ಪಡೆದು ಆಟೋ ಖರೀದಿಸುತ್ತಾರೆ. ಒಂದು ವರ್ಷ ಆಟೋ ಚಾಲಕರಾಗಿದ್ದ ಸತ್ಯಶಂಕರ್ ಒಂದೇ ವರ್ಷದಲ್ಲಿ ಆಟೋ ಮಾರಿ ಕಾರು ಖರೀದಿಸಿ ಬಾಡಿಗೆಗೆ ಬಿಡುತ್ತಾರೆ. ಆನಂತರ ಮತ್ತೆ ಲೋನ್ ಮಾಡಿ ಆಟೋಮೊಬೈಲ್ ಅಂಗಡಿ ಆರಂಭಿಸಿದ ಹುಡುಗ ಈಗ 800 ಕೋಟಿ ರೂ. ಬೆಲೆಬಾಳುವ ಕಂಪನಿ ಕಟ್ಟಿ ಬೆಳೆಸುವ ಮೂಲಕ ದೇಶವೇ ಹಿಂದಿರುಗಿ ನೋಡುವಂತೆ ಸಾಧನೆ ಮಾಡಿದ್ದಾರೆ.
ಉಳಿತಾಯ ಹಣದಿಂದ ಕಂಪನಿ ಶುರು: ಪುತ್ತೂರಿನಲ್ಲಿ ಆಟೋ ಮೊಬೈಲ್ ಶಾಪ್ ಮಾಡಿದ್ದ ಸತ್ಯಶಂಕರ್ ಗ್ರಾಹಕರು ತಮ್ಮ ಅಂಗಡಿಯಿಂದ ಕಾರಿಗೆ ಸಂಬಂಧಪಟ್ಟ ಬಿಡಿ ಭಾಗಗಳನ್ನು ಖರೀದಿಸುತ್ತಿದ್ದರು. ಆದರೆ ತಿಂಗಳ ಕಂತಿನ ರೂಪದಲ್ಲಿ ಹಣ ಪಾವತಿಸುತ್ತಿದ್ದರು. ಆರ್ಥಿಕ ಶಿಸ್ತು ಇಲ್ಲ ಎಂದು ಸತ್ಯಶಂಕರ್ 1994ರಲ್ಲಿ ಪ್ರವೀಣ್ ಕ್ಯಾಪಿಟಲ್ ಎಂಬ ಹೆಸರನಲ್ಲಿ ಸ್ಮಾಲ್ ಫೈನಾನ್ಸ್ ಕಂಪನಿ ಆರಂಭಿಸಿದರು.
ಗ್ರಾಹಕರು ಹೊಸ ವಾಹನಗಳನ್ನಷ್ಟೇ ಅಲ್ಲ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಲು ಲೋನ್ ಕೊಡುತ್ತಿದ್ದರು. ಬರೀ ಉಳಿತಾಯದ ಹಣದಿಂದ ಆರಂಭಿಸಿದ ಪ್ರವೀಣ್ ಕ್ಯಾಪಿಟಲ್ ಕಂಪನಿ ಈಗ 240 ಕೋಟಿ ರೂ.ಗೆ ಬೆಲೆ ಬಾಳುತ್ತದೆ.
ಹಿಂದಿರುಗಿ ನೋಡಿಲ್ಲ: ಫೈನಾನ್ಸ್ ಕಂಪನಿ ಶುರು ಮಾಡಿದ 15 ವರ್ಷಗಳ ನಂತರ 2000ರಲ್ಲಿ ಸತ್ಯಶಂಕರ್ ಅವರು ಪ್ಯಾಕೇಜ್‌ಡ ವಾಟರ್ ಮಾರಾಟ ಮಾಡುವ ಮೂಲಕ ಬಿಂದು ಕಂಪನಿ ಶುರು ಮಾಡಿದರು. ಬಿಂದು ಫ್ಯಾಕ್ಟರಿ ಸ್ಥಾಪನೆಗೆ ಬೆಂಗಳೂರು ಸೇರಿದಂತೆ ಹಲವು ಕಡೆ ಅವಕಾಶವಿದ್ದರೂ ಪುತ್ತೂರಿನಲ್ಲೇ ಫ್ಯಾಕ್ಟರಿ ಆರಂಭಿಸಿದರು. ಸತ್ಯಶಂಕರ್ ಅವರೆ ಹೇಳುವಂತೆ ಪುತ್ತೂರಿನಲ್ಲಿ ಯಾವಾಗಲೂ ಮಳೆ ಬೀಳುತ್ತದೆ. ಹೀಗಾಗಿ ನೀರಿನ ಕೊರತೆ ಉಂಟಾಗುವುದಿಲ್ಲ. ಇನ್ನೊಂದು ನನ್ನೂರಿನ ಜನರಿಗೆ ಉದ್ಯೋಗ ನೀಡುವ ಉದ್ದೇಶವಿತ್ತು ಎನ್ನುತ್ತಾರೆ.
ವಾಟರ್ ಕಂಪನಿ ಆರಂಭಿಸಿದ ಎರಡು ವರ್ಷದ ಬಳಿಕ ಶಂಕರ್ ಅವರು ಬಿಂದು ಜೀರಾ ಮಸಾಲಾ ಮಾರಾಟ ಆರಂಭಿಸಿದರು. ಹೀಗೆ ಶಂಕರ್ ಅವರು ಎಸ್‌ಜಿ ಗ್ರೂಪ್ ಕಂಪನಿ ಮೂಲಕ ಸುಮಾರು 50ಕ್ಕೂ ಹೆಚ್ಚು ಉತ್ಪನ್ನಗಳ ಮಾರಾಟ ಮಾಡುತ್ತಾರೆ. ಗ್ರಾಮೀಣ ಭಾಗದ 2 ಸಾವಿರಕ್ಕೂ ಹೆಚ್ಚು ಮಂದಿಗೆ ನೇರ ಉದ್ಯೋಗ, 10 ಸಾವಿರ ಜನರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿರುವ ಸತ್ಯಶಂಕರ್ ಅವರ ಕಂಪನಿ ಈಗ 800 ಕೋಟಿ ರೂ.ಗೆ ಬೆಲೆ ಬಾಳುತ್ತದೆ.
ಕಡೇಗೊಂದ್ಮಾತು: ಶಿಸ್ತು, ಪರಿಶ್ರಮ, ಏನಾದರೂ ಸಾಧಿಸಬೇಕೆನ್ನುವ ತುಡಿತ, ಜನರಿಗೆ ಅಗತ್ಯ ಬೇಕಾದ ಉತ್ಪನ್ನ, ಅದಕ್ಕೆ ಸುಲಭವಾಗಿ ಸಂಪನ್ಮೂಲ ದೊರೆಯುವ ಸ್ಥಳ ಗುರುತಿಸಿ, ಪ್ರಾಮಾಣಿಕ ಪ್ರಯತ್ನ ಮಾಡಿದವರನ್ನು ಯಶಸ್ಸೂ ಹುಡುಕಿಕೊಂಡು ಬರುತ್ತದೆ.
