ಜೆರೋಧಾ ಕಂಪನಿ ಕಟ್ಟಿ ಬೆಳೆಸಿದ ನಿಖಿಲ್ ಕಾಮತ್ ಯಶೋಗಾಥೆ | 50% ಗಳಿಕೆ ದಾನ ಮಾಡುವ ನಿರ್ಧಾರ
39 ವರ್ಷದ ನಿಖಿಲ್ ಕಾಮತ್ ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕರೇಜ್ ಕಂಪನಿ ಜೆರೋಧಾದ ಸಹ-ಸಂಸ್ಥಾಪಕ. ಫೋರ್ಬ್ಸ್ ಸಮೀಕ್ಷೆಯ ಪ್ರಕಾರ, ಸಹೋದರರಾದ ನಿತಿನ್ ಮತ್ತು ನಿಖಿಲ್ ಜಂಟಿಯಾಗಿ ಸ್ಥಾಪಿಸಿದ ಜೆರೋಧಾ ಕಂಪನಿಯು ಪ್ರಸ್ತುತ 24788.50 ಕೋಟಿ ರೂಪಾಯಿ (3.45 ಬಿಲಿಯನ್ ಯುಎಸ್ ಡಾಲರ್) ಮೌಲ್ಯವನ್ನು ಹೊಂದಿರುವ ಪ್ರಸಿದ್ಧ ಕಂಪನಿಯಾಗಿದೆ.
ಎಲ್ಲಕ್ಕಿಂತ ಹೆಚ್ಚು ಗಮನಸೆಳೆಯುವ ಸಂಗತಿ ಎಂದರೆ ನಿಖಿಲ್ ಕಾಮತ್ ತಮ್ಮ ಸಂಪತ್ತಿನ 50%ಗಿಂತ ಹೆಚ್ಚು ಹಣವನ್ನು ದಾನ ಮಾಡಲು ನಿರ್ಧರಿಸಿರುವುದು. ಕೇವಲ ಹಣ ಸಂಪಾದನೆಯನ್ನೇ ಮೂಲವಾಗಿಟ್ಟುಕೊಂಡು ಕೆಲಸ ಮಾಡುವ ಹಾಗೂ ಬರೀ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವ ಚಿಂತೆಯಲ್ಲೇ ಇರುವ ಅನೇಕರ ಮಧ್ಯೆ ನಿಖಿಲ್ ಕಾಮತ್ ಅವರಂಥವರು ಸಿಗುವುದು ತೀರ ಅಪರೂಪ.
ಭಾರತದ ಅತ್ಯಂತ ಕಿರಿಯ ವಯಸ್ಸಿನ ಮತ್ತು ಅತಿ ಹೆಚ್ಚು ದಾನ ನೀಡಿದ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. ಇಂತಹ ವ್ಯಕ್ತಿ ಅಪ್ಪಟ ಕರ್ನಾಟಕದವರು ಎನ್ನುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಷಯ.
ನಿಖಿಲ್ ಕಾಮತ್ ಸೆಪ್ಟೆಂಬರ್ 5, 1986ರಂದು ಶಿವಮೊಗ್ಗ ನಗರದಲ್ಲಿ ಜನಿಸಿದರು. ನಿಖಿಲ್ ಕಾಮತ್ ಅವರ ತಂದೆ ರಘುರಾಮ್ ಕಾಮತ್ ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದರು. ತಾಯಿ ರೇವತಿ ಕಾಮತ್ ಪ್ರಸಿದ್ಧ ವೀಣಾ ವಾದಕಿ ಮತ್ತು ಪರಿಸರವಾದಿ. ಅವರು 10ನೇ ತರಗತಿಯಲ್ಲಿ ಓದುತ್ತಿರುವಾಗ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಆಕ್ಸ್ಫರ್ಡ್ ಸೀನಿಯರ್ ಸೆಕೆಂಡರಿ ಶಾಲೆಯನ್ನು ತೊರೆದರು. ನಿಖಿಲ್‌ಗೆ ಓದುವುದರಲ್ಲಿ ಆಸಕ್ತಿ ಇರಲಿಲ್ಲ, ಆದರೆ ಗಣಿತದಲ್ಲಿ ಮಾತ್ರ ಎತ್ತಿದ ಕೈ.
ತಮ್ಮ 14ನೆಯ ವಯಸ್ಸಿನಲ್ಲಿ ಹಳೆಯ ಮತ್ತು ಬಳಸಿದ ಫೋನ್‌ಗಳನ್ನು ಮರುಮಾರಾಟ ಮಾಡಲು ನಿಖಿಲ್ ಕಾಮತ್ ಪ್ರಾರಂಭಿಸಿದರು. ನಂತರ ಅವರು ತಿಂಗಳಿಗೆ 8000 ಸಂಬಳದೊಂದಿಗೆ ರಾತ್ರಿ ಹೊತ್ತು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಲು ಶುರು ಮಾಡಿದರು. ಜತೆಗೆ ಬೆಳಗ್ಗೆ ಅವರು ಷೇರು ಮಾರುಕಟ್ಟೆ ವಹಿವಾಟುಗಳನ್ನು ಮಾಡಲು ಆರಂಭಿಸಿದರು. ಕೆಲವು ದಿನಗಳ ನಂತರ ಅವರು ಕಾಲ್ ಸೆಂಟರ್ ಅನ್ನು ತೊರೆದು ತಮ್ಮ ಸಹೋದರ ನಿತಿನ್ ಕಾಮತ್ ಅವರೊಂದಿಗೆ `ಕಾಮತ್ ಅಸೋಸಿಯೇಟ್ಸ್’ ಅನ್ನು ಪ್ರಾರಂಭಿಸಿದರು.
ಸಾಕಷ್ಟು ಅನುಭವವನ್ನು ಪಡೆದ ನಂತರ ಅವರು 2010ರಲ್ಲಿ ಬೆಂಗಳೂರಿನಲ್ಲಿ `ಜೆರೋಧಾ’ವನ್ನು ಪ್ರಾರಂಭಿಸಿದರು. ಈಗ ಜೆರೋಧಾ ದೇಶದ ನಂ.1 ಸ್ಟಾಕ್ ಬ್ರೋಕಿಂಗ್ ಕಂಪನಿಯಾಗಿ ಬೆಳೆದಿದೆ. ಈ ಮಟ್ಟಕ್ಕೆ ಬೆಳೆಯಲು ತಂದೆ-ತಾಯಿ ನೀಡಿದ ಪ್ರೋತ್ಸಾಹ ಹಾಗೂ ಬೆನ್ನೆಲುಬಾಗಿ ನಿಂತಿದ್ದನ್ನು ನೆನೆಯಲು ಮಾತ್ರ ನಿಖಿಲ್ ಕಾಮತ್ ಎಂದೂ ಮರೆಯುವುದಿಲ್ಲ.
`ದಿ ಗಿವಿಂಗ್ ಪ್ಲೆಡ್ಜ್ ಕಮ್ಯುನಿಟಿ’ಗೆ ದೇಣಿಗೆ ವಿಲ್ ಬರೆದಿರುವ ನಿಖಿಲ್ ಕಾಮತ್, “ನಾನು ಈ ವಯಸ್ಸಿನಲ್ಲಿ ಚಿಕ್ಕವನಾಗಿರಬಹುದು. ಆದರೆ ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ನಾನು ಬದ್ಧನಾಗಿದ್ದೇನೆ. ಸಮಾನ ಸಮಾಜವನ್ನು ಸ್ಥಾಪಿಸುವ ಮತ್ತು ಅದರ ಮೌಲ್ಯಗಳೊಂದಿಗೆ ಬದುಕಲು ಜನರನ್ನು ಪ್ರೇರೇಪಿಸಲು ಈ ಕೆಲಸ ಮುಖ್ಯವಾಗಿದೆ” ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಜನಿಸಿದ್ದಕ್ಕೆ ನಿಖಿಲ್ ಕಾಮತ್ ಹೆಮ್ಮೆ ಪಡುತ್ತಾರೆ. ಇಂತಹ ಕನ್ನಡಿಗನ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಲಿ.
