ಬೆಂಗಳೂರು: ರಾಜಧಾನಿಯಲ್ಲಿ ನಡೆದ 7.11 ಕೋಟಿ ರೂ. ಎಟಿಎಂ ಹಣ ದರೋಡೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಬೆಂಗಳೂರು ಪೊಲಿಸರು ಇದುವರೆಗೆ ದೊಡ್ಡ ಯಶಸ್ಸನ್ನು ಕಂಡಿದ್ದಾರೆ. ದರೋಡೆಯಾದ ಹಣದಲ್ಲಿ 5.30 ಕೋಟಿ ರೂ. ವಶಪಡಿಸಿಕೊಂಡು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ದರೋಡೆಯ ಹಿಂದಿನ ಮಾಸ್ಟರ್ ಮೈಂಡ್ ಗೋವಿಂದಪುರ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯ್ಕ್ ಎಂದು ಬಯಲಾಗಿದೆ. ದಕ್ಷಿಣ ವಿಭಾಗದ ಪೊಲೀಸರು ಅಣ್ಣಪ್ಪನನ್ನು ಬಂಧಿಸಿದ್ದಾರೆ. ಆತನ ಜೊತೆಗೆ ಸಿಎಂಎಸ್ ಕಂಪನಿಯ ಹಣ ಸಾಗಾಟದ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ಆಂತರಿಕ ಮಾಹಿತಿ ಹೊಂದಿದ್ದ ಮಾಜಿ ಉದ್ಯೋಗಿ ಝೇವಿಯರ್ ಸಹ ಬಂಧಿತನಾಗಿದ್ದಾನೆ.
ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಪ್ಪಣ್ಣ ಬೇರೆ ವಿಭಾಗಕ್ಕೆ ವರ್ಗಾವಣೆಗೊಂಡು ಕೆಲಸವಿಲ್ಲದ ಸಮಯದಲ್ಲಿ, ಝೇವಿಯರ್‌ನನ್ನು ಭೇಟಿಯಾಗುತ್ತಿದ್ದ. ಈ ಸಂದರ್ಭದಲ್ಲಿ ಝೇವಿಯರ್ ಕಂಪನಿಯ ಹಣ ಸಾಗಾಟದ ಸೂಕ್ಷ್ಮ ವಿವರಗಳನ್ನು ಕಾನ್‌ಸ್ಟೇಬಲ್‌ಗೆ ತಿಳಿಸಿದ್ದ. ಇಬ್ಬರೂ ಸೇರಿ ದರೋಡೆಗೆ ಸಂಚು ರೂಪಿಸಿದ್ದರು.
ಝೇವಿಯರ್ ಸಿಎಂಎಸ್‌ನ ಆಂತರಿಕ ಪ್ಲಾನ್ ನೋಡಿಕೊಂಡರೆ, ಅಣ್ಣಪ್ಪ ಎಸ್ಕೇಪ್ ಪ್ಲಾನ್ ರೂಪಿಸುವ ಜವಾಬ್ದಾರಿ ಹಂಚಿಕೊಂಡಿದ್ದರು ಎನ್ನಲಾಗಿದೆ. ದರೋಡೆ ನಡೆದ ಸ್ಥಳದಲ್ಲಿ ಇವರು ಇರಲಿಲ್ಲ. ದೂರದಿಂದಲೇ ಕಾರ್ಯಾಚರಣೆಯನ್ನು ನಿಯಂತ್ರಿಸಿದ್ದರು.
ಕಮ್ಮನಹಳ್ಳಿ ಮತ್ತು ಕಲ್ಯಾಣನಗರದ ಯುವಕರ ತಂಡವನ್ನು ಅಣ್ಣಪ್ಪ ನಾಯ್ಕ್ ಸಂಘಟಿಸಿ, ದರೋಡೆ ನಡೆಸಲು ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮಗ್ರ ತರಬೇತಿಯನ್ನು ನೀಡಿದ್ದ ಎಂದು ತಿಳಿದುಬಂದಿದೆ. ಈ ಬೃಹತ್ ಶೋಧ ಕಾರ್ಯಾಚರಣೆಯನ್ನು ನಾಲ್ವರು ಜಂಟಿ ಪೊಲೀಸ್ ಆಯುಕ್ತರು ಮತ್ತು 18 ಡಿಸಿಪಿಗಳ ನೇತೃತ್ವದಲ್ಲಿ ಮುಂದುವರಿಸಲಾಗಿದೆ.
ಚೆನ್ನೈಗೆ ಹೋಗುತ್ತಿದ್ದ ಹಣ: ಚಿತ್ತೂರಿನಿಂದ ಚೆನ್ನೈಗೆ ಹಣವನ್ನು ಕೊಂಡೊ ಯ್ಯುತ್ತಿದ್ದ ಓರ್ವ ಆರೋಪಿ ಹಾಗೂ 5.30 ಕೋಟಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ರಾಕೇಶ್ ಮತ್ತು ರವಿ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. 7 ಕೋಟಿಯಲ್ಲಿ 5.30 ಕೋಟಿ ಹಣ ಸಿಕ್ಕಿದೆ. ಇನ್ನುಳಿದ ಹಣ ಯಾರು ತೆಗೆದುಕೊಂಡು ಹೋಗಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಪೇದೆ ಅಪ್ಪಣ್ಣ ಸಿಕ್ಕಿದ್ದು ಹೇಗೆ?: ಚಿತ್ತೂರಿನಲ್ಲಿ ಮೂವರನ್ನು ಬಂಧಿಸಿ ವಿಚಾರಣೆ ಸಂದರ್ಭದಲ್ಲಿ ಅವರು ಅಪ್ಪಣ್ಣ ಹೆಸರನ್ನು ಪೊಲೀಸರ ಮುಂದೆ ತಿಳಿಸಿದ್ದಾರೆ. ನಮಗೆ ದರೋಡೆಯ ನಂತರ ಹೇಗೆ ತಪ್ಪಿಸಿಕೊಳ್ಳಬೇಕು. ಹಣವನ್ನು ಎಲ್ಲಿ ಸಾಗಿಸಬೇಕು ಎಂಬುದನ್ನು ಅವರೇ ಹೇಳಿಕೊಟ್ಟಿದ್ದು ಎಂದು ತಿಳಿಸಿದ್ದರು. ಈ ಜಾಡು ಹಿಡಿದ ಪೊಲೀಸರು ಪೊಲೀಸಪ್ಪನನ್ನು ಬಂಧಿಸಿದ್ದಾರೆ.
