Home ವಿಶೇಷ ಸುದ್ದಿ ಪುರಾತನ ಸೀರೆಗಳಿಗೆ ವಿದೇಶಿ ಮಾರುಕಟ್ಟೆ ಹುಡುಕಿದ ಹೇಮಲತಾ

ಪುರಾತನ ಸೀರೆಗಳಿಗೆ ವಿದೇಶಿ ಮಾರುಕಟ್ಟೆ ಹುಡುಕಿದ ಹೇಮಲತಾ

0
ನವೆಂಬರ್ 13ರಂದು ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕನ್ನಡ ನಾಡಿನ ಚಿನ್ನದ ಸಾಧಕರು ಅಡಿ ಪ್ರಕಟವಾದ ಲೇಖನ

ಕರ್ನಾಟಕದಿಂದ ರಫ್ತು; ಅಮೆರಿಕ, ಬ್ರಿಟನ್, ಅರಬ್ ದೇಶಗಳಲ್ಲೂ ಮಾರಾಟ | ವರ್ಷಕ್ಕೆ 25 ಲಕ್ಷಕ್ಕೂ ಹೆಚ್ಚು ವಹಿವಾಟು

ಕರ್ನಾಟಕದಲ್ಲಿ ಮೈಸೂರು ರೇಷ್ಮೆ, ಮೊಳಕಾಲ್ಮೂರು ಸೀರೆಗಳಿಗೆ ಜಿಐ ಟ್ಯಾಗ್ ಇದೆ. ಇನ್ನೂ ಹಲವು ಕಡೆ ನೇಯ್ಗೆ ನಡೆಯುತ್ತಿದೆ. ಕೆಲವೊಂದು ಕಡೆ ಶತಮಾನಗಳ ಹಿಂದಿನ ಸಾಂಪ್ರದಾಯಿಕ ಸೀರೆಗಳ ನೇಯ್ಗೆ ಈಗ ಬಹುತೇಕ ನಿಂತೇ ಹೋಗಿದೆ. ಇಂಥ ಕೈಮಗ್ಗದ ಸೀರೆಗಳನ್ನು ಹುಡುಕಿ ಅವುಗಳನ್ನು ಪುನರುಜ್ಜೀವನಗೊಳಿಸಿ, ದೇಶವಿದೇಶಗಳಲ್ಲಿ ಮಾರಾಟಕ್ಕೆ ತೊಡಗಿದ್ದಾರೆ ಹೇಮಲತಾ ಜೈನ್.

ಬೆಂಗಳೂರಲ್ಲಿ ಹುಟ್ಟಿದ ಹೇಮಲತಾ ಟೆಕ್ಸ್‌ಟೈಲ್‌ನಲ್ಲಿ ಪಿಎಚ್‌ಡಿ ಪಡೆದು, ಕಲೆಯಲ್ಲಿ ಪೋಸ್ಟ್ ಡಾಕ್ಟೊರೇಟ್ ಮುಗಿಸಿದ್ದಾರೆ. ಕೆಲವು ವರ್ಷಗಳ ಕಾಲ ಅಮೆರಿಕದಲ್ಲಿದ್ದ ಅವರು, 2014ರಲ್ಲಿ ವಾಪಸ್ ಬಂದ ನಂತರ ಪುನರುಜ್ಜೀವನ ಟ್ರಸ್ಟ್ ಆರಂಭಿಸಿ, ಹಿಂದಿನ ಸೀರೆಗಳ ಹುಡುಕಾಟದಲ್ಲಿ ತೊಡಗಿದರು. ಅದಕ್ಕಾಗಿ ದೇವದಾಸಿಯರನ್ನು ಭೇಟಿಯಾಗಿ ಅವರಲ್ಲಿ ಉಳಿದಿದ್ದ ವಿಶಿಷ್ಟವಾದ 250 ವರ್ಷಗಳ ಹಿಂದಿನ ಪಟ್ಟೇದ ಅಂಚಿನ ಸೀರೆಗಳನ್ನು ಪತ್ತೆಹಚ್ಚಿದರು. ಇದರ ನೇಯ್ಗೆ ವಿಧಾನ 10 ಶತಮಾನಗಳಷ್ಟು ಹಿಂದಿನದು.

ಗಜೇಂದ್ರಗಡ, ಬೆಳಗಾಂ, ರಾಯಚೂರು, ಕೋಡಲ್, ಬೀದರ್, ಬಳ್ಳಾರಿ, ಕಲಬುರಗಿ ಮತ್ತು ಧಾರವಾಡಗಳಲ್ಲಿ ಇದು ಆ ಕಾಲದಲ್ಲಿ ಜನಪ್ರಿಯವಾಗಿತ್ತು. ಮುಖ್ಯವಾಗಿ ಅಗಲವಾದ ಬಾರ್ಡರ್‌ಗಳ ಈ ಸೀರೆಯನ್ನು ಸವದತ್ತಿ ಎಲ್ಲಮ್ಮನಿಗೆ ಅರ್ಪಿಸುತ್ತಿದ್ದುದರಿಂದ ಕಪ್ಪು ಬಣ್ಣ ನಿಷಿದ್ಧವಾಗಿತ್ತು. ಇಂಥದ್ದೊಂದು ಸೀರೆಯನ್ನು ಮತ್ತೆ ಚಾಲ್ತಿಗೆ ತರುವುದು ಅಷ್ಟೊಂದು ಸುಲಭವಾಗೂ ಇರಲಿಲ್ಲ.

ರಾಜ್ಯಾದ್ಯಂತ ನಡೆಯುವ ಸೀರೆಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಪಾಲ್ಗೊಂಡರು. ಬೇರೆ ಬೇರೆ ಕಡೆಯಿಂದ ಸೀರೆಗಳಿಗೆ ಆದೇಶಗಳನ್ನು ಪಡೆದುಕೊಂಡರು. ಕ್ರಮೇಣ 55 ನೇಕಾರರು, 20 ಬಣ್ಣಗಾರರು ಮತ್ತು ಸ್ಪಿನ್ನರುಗಳು ಈ ಉದ್ಯಮಕ್ಕೆ ಜೋಡಿಸಿಕೊಂಡರು. ಹೀಗೆ ಮರೆತುಹೋದ ಒಂದು ವಿಶಿಷ್ಟ ಸೀರೆಗೆ ಮರುಜನ್ಮ ನೀಡಿದರು.

ಅದೇ ರೀತಿ ಸುಧಾ ಖಾದಿ(ಬಾರ್ಡರ್‌ನಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಬಿಂಬಿಸುವ ಸಮಾನಾಂತರ ರೇಖೆಗಳನ್ನು ಹೊಂದಿರುತ್ತದೆ), ಗೋಮಿ ತೇನಿ(12ನೇ ಶತಮಾನದ ನೇಯ್ಗೆ ರೀತಿ), ಹುಬ್ಬಳ್ಳಿ ಸೀರೆ(ಹುಬ್ಬಳ್ಳಿ ಕಡೆಯ ಗ್ರಾಮೀಣ ಮಹಿಳೆಯರು ಉಡುವ ಸೀರೆ) ಮುಂತಾದವನ್ನು ಹೇಮಲತಾ ಮುಖ್ಯವಾಹಿನಿಗೆ ತಂದು ಜನಪ್ರಿಯಗೊಳಿಸುತ್ತಿದ್ದಾರೆ.

`ಗೋಮಿ ತೇನಿಯು ಜವಾರ್ ಜೋಳದ ಬೀಜದಿಂದ ಪ್ರೇರಣೆ ಗೊಂಡಿದ್ದು, ಹೆರಿಂಗ್‌ಬೋನ್ ಹೆಣಿಗೆಯನ್ನು ಹೊಂದಿರುತ್ತದೆ. ಉತ್ತರ ಕರ್ನಾಟಕದಲ್ಲಿ ಜೋಳ ಸಮೃದ್ಧತೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಇಂಥ ಸೀರೆಯನ್ನು ಗರ್ಭಿಣಿಯರಿಗೆ ಮತ್ತು ಸಕ್ರಾಂತಿ ಸಮಯದಲ್ಲಿ ಮಹಿಳೆಯರಿಗೆ ನೀಡುವ ಸಂಪ್ರದಾಯವಿತ್ತು’ ಎಂದು ಹೇಮಲತಾ ಹೇಳುತ್ತಾರೆ.

ನಾನಾ ರೀತಿಯ ಪುರಾತನ ಸೀರೆಗಳನ್ನು ನೇಯ್ದು ಕರ್ನಾಟಕದಲ್ಲಷ್ಟೇ ಅಲ್ಲ, ಅಮೆರಿಕ, ಬ್ರಿಟನ್, ಅರಬ್ ದೇಶಗಳಲ್ಲೂ ಮಾರಾಟ ಮಾಡಲಾಗುತ್ತಿದೆ. ಪುನರುಜ್ಜೀವನ ಮೂಲಕ ತಿಂಗಳಿಗೆ 250 ಸೀರೆಗಳನ್ನು ನೇಯಲಾಗುತ್ತಿದ್ದು, ವರ್ಷಕ್ಕೆ 25 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುತ್ತಿದೆ.

ಪುನರುಜ್ಜೀವನಕ್ಕೆ ಜೋಡಿಸಿಕೊಂಡ ನೇಕಾರ ಸಮುದಾಯವೂ ಹೆಮ್ಮೆಯಿಂದ ಸಾಂಪ್ರದಾಯಿಕ ಸೀರೆಗಳನ್ನು ನೇಯ್ದು ಕೊಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗೆಯ ಸೀರೆಗಳಿಗೂ ಬೇಡಿಕೆ ಇದೆ, ಅವೂ ಮಾರಾಟವಾಗುತ್ತದೆ ಎಂದು ಗೊತ್ತಿರಲಿಲ್ಲ. ಹೇಮಲತಾ ಅವರಿಂದ ಗೊತ್ತಾಯಿತು ಎನ್ನುತ್ತಿದ್ದಾರೆ. ಹೊಸ ತಲೆಮಾರಿನ ನೇಕಾರರಿಗೆ ಅದನ್ನು ಕಲಿಸಿಕೊಡಲು ಮುಂದಾಗಿದ್ದಾರೆ.

ಸವಾಲುಗಳ ನಡುವೆ ಗೆಲುವು

ಈ ಕೈಮಗ್ಗದ ಸೀರೆಗಳು ವಿಶಿಷ್ಟವಾಗಿದ್ದರೂ, ಪವರ್‌ಲೂಮ್‌ಗಳಲ್ಲಿ ಇಂಥದ್ದೇ ಸೀರೆಗಳನ್ನು ನೇಯ್ದು ಮಾರುಕಟ್ಟೆ ಬಿಡಲಾಗುತ್ತಿದೆ. ಹೀಗಾಗಿ ಅವುಗಳಿಂದ ಸ್ಪರ್ಧೆಯನ್ನು ಎದುರಿಸಿ ಉಳಿಯುವುದು ಅಷ್ಟೊಂದು ಸುಲಭದ ಸಂಗತಿಯಲ್ಲ. ಗ್ರಾಹಕರಿಗೂ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಕಷ್ಟದ ಸಂಗತಿಯೇ. ನಾವೂ ಕೂಡ ಅದರ ನೈಜತೆಯನ್ನು ಗ್ರಾಹಕರಿಗೆ ಸಮಾಧಾನದಿಂದಲೇ ಮನದಟ್ಟು ಮಾಡಿಕೊಡಬೇಕಾಗುತ್ತದೆ. ಈ ಸವಾಲುಗಳ ನಡುವೆಯೂ ಜನರನ್ನು ನಾವು ತಲುಪಿದ್ದೇವೆ.
: ಹೇಮಲತಾ ಜೈನ್ – ಪುನರುಜ್ಜೀವನ ಟ್ರಸ್ಟ್ ಮುಖ್ಯಸ್ಥೆ

NO COMMENTS

LEAVE A REPLY

Please enter your comment!
Please enter your name here

Exit mobile version