RCB ವಿಜಯೋತ್ಸವ ಮೆರವಣಿಗೆ ರದ್ದು: ಚಿನ್ನಸ್ವಾಮಿ ಸ್ಟೇಡಿಯಂಗೆ ಬನ್ನಿ ಎಂದ ಡಿಕೆಶಿ

ಭದ್ರತಾ ಕಾರಣಗಳಿಂದ ಕೊನೆಯ ಕ್ಷಣದಲ್ಲಿ ಆರ್‌ಸಿಬಿ ಆಟಗಾರರ ತೆರೆದ ವಾಹನದ ಮೆರವಣಿಗೆಯನ್ನು ಸರ್ಕಾರ ರದ್ದುಪಡಿಸಿದೆ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಚಾಂಪಿಯನ್ ಆಗಿ ಇಂದು ಅಹಮದಾಬಾದ್​ನಿಂದ ವಿಶೇಷ ವಿಮಾನದ ಮೂಲಕ ತವರಿಗೆ ಮರಳಿದ್ದು, ಆ ಬಳಿಕ ವಿಜಯಯಾತ್ರೆಗೆ ಸಿದ್ಧತೆಯನ್ನು ನಡೆಸಲಿದೆ. ಇನ್ನು ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ನಿನ್ನೆಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯಗಳಿಸಿ ತವರೂರಿಗೆ ಆಗಮಿಸುತ್ತಿರುವ ಕರ್ನಾಟಕದ ಹೆಮ್ಮೆಯ ಆರ್‌ಸಿಬಿ ತಂಡವನ್ನು ಸಮಸ್ತ ಕನ್ನಡಿಗರ ಪರವಾಗಿ ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅಭಿನಂದಿಸಿ, ಸನ್ಮಾನಿಸಲಿದ್ದೇನೆ. ಕೋಟ್ಯಂತರ ಅಭಿಮಾನಿಗಳ 18 ವರ್ಷಗಳ ಕಾತುರ, ಕಾಯುವಿಕೆ ಕೊನೆಗೊಂಡು, ಇಡೀ ರಾಜ್ಯದಲ್ಲೇ ಹಬ್ಬದ ವಾತಾವರಣ ಸೃಷ್ಟಿಸಿದ ಈ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ನೀವೂ ಭಾಗಿಯಾಗಿ ಎಂದಿದ್ದಾರೆ.

ಆರ್​​ಸಿಬಿ ತಂಡದ ವಿಜಯಯಾತ್ರೆ ರದ್ದು : ಗೃಹ ಸಚಿವ ಡಾ.ಪರಮೇಶ್ವರ್, ಭದ್ರತೆ ದೃಷ್ಟಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಇಲ್ಲ ಎಂದು ಹೇಳಿದ್ದು, ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಅಭಿನಂದನೆ ಸಲ್ಲಿಸಲಾಗುವುದು. ಈ ವೇಳೆ ಆರ್​ಸಿಬಿ ತಂಡದ ಪರವಾಗಿ ಒಬ್ಬರು ಮಾತನಾಡಲಿದ್ದಾರೆ. ನಂತರ ಎಲ್ಲಾ ಆಟಗಾರರು ಬಸ್​ನಲ್ಲೇ ವಿಧಾನಸೌಧದಿಂದ ಸ್ಟೇಡಿಯಂಗೆ ತೆರಳಲಿದ್ದಾರೆ, ಇನ್ನು ಅಭಿಮಾನಿಗಳೆಲ್ಲ ಚಿನ್ನಸ್ವಾಮಿ ಸ್ಟೇಡಿಯಂಗೆ ಬನ್ನಿ. ಅಭಿಮಾನ ತಪ್ಪು ಎನ್ನಲ್ಲ, ಆದರೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.