ಸಂ.ಕ. ಸಮಾಚಾರ ಮೈಸೂರು: ಬೆಂಗಳೂರಿನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆಯ ಕಾಲ್ತುಳಿತ ದುರಂತ ಸಂಭವಿಸಿದ ಇಡೀ ದಿನ ಡಿ.ಕೆ. ಶಿವಕುಮಾರ್ ದಾದಾಗಿರಿ ಮಾಡಿದ್ದಾರೆ. ಅವರು ಒಂದು ಕ್ಷಣ ಕೂಡಾ ಡಿಸಿಎಂ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.
ನಗರಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಡನೆ ಮಾತನಾಡಿ, ಸಿಎಂ ಹಾಗೂ ಡಿಸಿಎಂ ಸಹಾ ಇದೇ ಕ್ಷಣ ರಾಜೀನಾಮೆ ನೀಡಬೇಕು. ಬೆಂಗಳೂರು ಕಮಿಷನರ್ ಅವರನ್ನು ಭದ್ರತೆ ನಿರಾಕರಿಸಿಲ್ಲ ಎಂಬ ಕಾರಣಕ್ಕೆ ಸಸ್ಪೆಂಡ್ ಮಾಡಿದ್ದೀರಿ. ನೀವೇ ನಿಮ್ಮ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳಿಗೆ ಕರೆ ಕೊಟ್ಟಿಲ್ವಾ., ನಿಮ್ಮ ಡಿಸಿಎಂ ಏರ್‌ಪೋರ್ಟ್ಗೆ ಹೋಗಿ ಬಾವುಟ ಹಿಡಿದುಕೊಂಡು ಬರಲಿಲ್ಲವೇ ಎಂದು ಪ್ರಶ್ನಿಸಿದರು.
ಹೈಕಮಾಂಡ್‌ನಲ್ಲಿ ಕಮಾಂಡ್ ಇದ್ದರೆ ಮೊದಲು ಇವರ ಮೇಲೆ ಕ್ರಮ ಕೈಗೊಳ್ಳಲಿ. ರಾಹುಲ್‌ಗಾಂಧಿ ಇಡೀ ಪ್ರಪಂಚದಾದ್ಯಂತ ಹೋಗಿ ಎಲ್ಲವನ್ನ ಮಾತನಾಡುತ್ತಾರೆ. ಆರ್‌ಸಿಬಿ ವಿಜಯದ ನಂತರ ನಿನ್ನೆ ಆದದ್ದು ಅತ್ಯಂದ ದೌರ್ಭಾಗ್ಯದ ದಿನ. ಮಿಸ್ ಮ್ಯಾನೇಜ್ಮೆಂಟ್ ಮಾಡಿದ ಸರ್ಕಾರ ತರಾತುರಿಯಲ್ಲಿ ಹುಚ್ಚರಂತೆ ವರ್ತನೆ ಮಾಡುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜನ ಸತ್ತ ನಂತರವೂ ವಿಧಾನಸೌಧದ ಬಳಿ ಸಿಎಂ, ಡಿಸಿಎಂ, ಅವರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಐಎಎಸ್ ಆಫಿಸರ್‌ಗಳು ಸೆಲ್ಪಿ ಪೋಟೋ ತೆಗೆಸಿಕೊಳ್ಳುತಿದ್ದರು. ಅವರು ಸೆಲ್ಫಿ ತೆಗೆಸಿಕೊಳ್ಳುವಾಗ ಅಲ್ಲಿ ಮೂರು ಜನ ಸತ್ತಿದ್ದರು. ಇದು ಅಕ್ಷಮ್ಯ ಅಪರಾಧ ಅಲ್ಲವೆ ಎಂದರು.
ಅವರು ಮಾನಸಿಕ ಸ್ಥಿತಿಮಿತಿ ಕಳೆದುಕೊಂಡಿದ್ದಾರೆ. ೧೧ ಜನ ಸತ್ತ ನಂತರವೂ ಕಾರ್ಯಕ್ರಮ ನಡೆದಿದೆ. ಅಂದು ತರಾತುರಿಯಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಅಂದರು. ಇದಕ್ಕೆ ಪ್ರಮೋಟಿ ಐಎಎಸ್ ಆಫಿಸರ್ ನೇಮಕ ಮಾಡಿದ್ದಾರೆ. ಇಷ್ಟು ತರಾತುರಿ ಯಾಕೆ, ಯಾರನ್ನ ನೀವು ರಕ್ಷಣೆ ಮಾಡಬೇಕಿತ್ತು. ಹೈಕೋರ್ಟ್ ಸುಮೋಟೊ ಕೇಸ್ ಹಾಕಿದ ನಂತರ ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ ಎಂದು ಕಿಡಿಕಾರಿದರು. ಬೆಂಗಳೂರು ಪೊಲೀಸ್ ಕಮಿಷನರ್ ಒಬ್ಬ ದಕ್ಷ ಅಧಿಕಾರಿ. ಅವರು ಪತ್ರದಲ್ಲಿ ಅನುಮತಿ ನಿರಾಕರಿಸಲಿಲ್ಲ ಎಂಬ ಕಾರಣ ಕೊಟ್ಟಿದ್ದೀರಿ. ನೀವೇ ವಿಧಾನಸೌಧದ ಮುಂದಿನ ಕಾರ್ಯಕ್ರಮದ ಬಗ್ಗೆ ಟ್ವಿಟ್ ಮಾಡಿದ್ದೀರಿ. ನೀವು ಬಹಿರಂಗ ಕರೆ ಕೊಟ್ಟಿದ್ದಕ್ಕೆ ಅಷ್ಟು ಜನ ಬಂದಿದ್ದಾರೆ. ಡಿ.ಕೆ.ಶಿವಕುಮಾರ್ ಹೋಗಿ ಬರಮಾಡಿಕೊಂಡಿದ್ದಾರೆ. ಅವರಿಗೆ ಬುದ್ದಿ ಇರಲಿಲ್ಲವೇ ಎಂದು ಕೇಳಿದರು.
ಅವರನ್ನ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ತನಿಖೆ ಮಾಡುತ್ತೀರೇನು, ಪೊಲೀಸ್ ಇಲಾಖೆ ನಿರಾಕರಿಸಿದ ನಂತರವೂ ಅವರನ್ನ ಕರೆಸಿದ್ದು ಯಾರು, ಸ್ನಾನ ಮಾಡಿಕೊಳರ ಕೆಳಗೆ ಕುಳಿತು ಸ್ನಾನ ಮಾಡೋ ರೀತಿ ಡಿಕೆ.ಶಿವಕುಮಾರ್ ನಡೆದುಕೊಂಡಿದ್ದಾರೆ., ತಮ್ಮನ್ನು ತಾವು ಕೋಚ್ ಎಂದುಕೊಂಡಿದ್ದಾರೆ. ಸಾಧನೆ ಮಾಡಿದವರ ಜೊತೆ ನಿಂತು ಕ್ರೆಡೀಟ್ ತಗಳೊ ಚಟ ಇವರಿಗೆ ಉಪ ಮುಖ್ಯಮಂತ್ರಿ ಯನ್ನು ಏನು ಮಾಡುತ್ತೀರಿ, ನೀವು ಕರೆ ಕೊಟ್ಟಿದ್ದಕ್ಕೆ ಯಾವ ನೈತಿಕ ಹೊಣೆ ಹೊರುತ್ತೀರಿ, ಐಪಿಎಲ್ ಟ್ರೋಪಿಗೆ ಮುತ್ತು ಕೊಟ್ರಲ್ಲ, ನಾಚಿಕೆ ಆಗಲಿಲ್ಲವೇ, ಅಭಿಮಾನಿಗಳು ಸತ್ತ ನಂತರೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಡಿಕೆ.ಶಿವಕುಮಾರ್ ಹೋಗಿದ್ದಾರೆ. ದಯಾನಂದ್ ಅನುಮತಿ ಕೊಟ್ಟಿಲ್ಲ ಎಂದರೆ ನಿಮ್ಮ ಡಿಸಿಎಂ ಏಕೆ ಹೋಗಿದ್ದರು ಎಂದು ಮತ್ತೆ ಪ್ರಶ್ನಿಸಿದರು. ಹಿಂದೆ, ಮೂಡಾ, ವಾಲ್ಮೀಕಿ ಹಗರಣ ನಡೆದಾಗ ಅಧಿಕಾರ ಮೇಲೆ ಕ್ರಮ ವಹಿಸಿದ್ದಾರೆ, ತಮ್ಮದೇನೂ ಜವಾಬ್ದಾರಿ ಇಲ್ಲವೆ ಎಂದು ಕೇಳಿದರು.