ಬೆಂಗಳೂರು: ವಿವಿಧ ಕಾರಣಗಳಿಂದ ಉದ್ಯಾನ ನಗರಿ ಬೆಂಗಳೂರಿನ ಬಹುನಿರೀಕ್ಷಿತ ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾಗುತ್ತಿಲ್ಲ. ಹಳದಿ ಮಾರ್ಗದಲ್ಲಿ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಸುಮಾರು 3 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
2014ರಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾಮಗಾರಿಯನ್ನು ಆರಂಭಿಸಲಾಗಿತ್ತು. 2025ರ ಜುಲೈನಲ್ಲಿಯೂ ರೈಲು ಸಂಚಾರ ಆರಂಭವಾಗಿಲ್ಲ. ಆದ್ದರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಶನಿವಾರ ಲಾಲ್ ಬಾಗ್ ಮುಂದೆ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.
ಹಲವು ಗಡವುಗಳನ್ನು ನೀಡಿದ್ದು ಸಾಕು ನಗರದ ಅತ್ಯಂತ ಪ್ರಮುಖವಾದ ನಮ್ಮ ಮೆಟ್ರೋ ಮಾರ್ಗ ಇದಾಗಿದೆ. ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ರೈಲುಗಳ ವಾಣಿಜ್ಯ ಸಂಚಾರವನ್ನು ತಕ್ಷಣ ಆರಂಭಿಸಬೇಕು ಎಂದು ಬಿಎಂಆರ್ಸಿಎಲ್ ಅನ್ನು ಒತ್ತಾಯಿಸಲಾಗುತ್ತಿದೆ.
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಪ್ರತಿಭಟನಾನಿರತರ ಮನವಿಯನ್ನು ಸ್ವೀಕಾರ ಮಾಡಲು ಸ್ಥಳಕ್ಕೆ ಆಗಮಿಸಿದ್ದಾರೆ. ಕರ್ನಾಟಕ ಸರ್ಕಾರ 2024ರಲ್ಲಿಯೇ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ಭರವಸೆ ನೀಡಿತ್ತು. ಬಳಿಕ 2025ರ ಜನವರಿಯಲ್ಲಿ ರೈಲು ಸಂಚಾರ ಎಂದು ಹೇಳಿತ್ತು.
ಸಿವಿಲ್ ಕಾಮಗಾರಿ ಪೂರ್ಣಗೊಂಡರೂ ಸಹ ರೈಲುಗಳ ಸಂಚಾರವನ್ನು ಆರಂಭಿಸದ ಕಾರಣ ಜನರು ಆಕ್ರೋಶಗೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಗೆ ಈ ರೈಲು ಮಾರ್ಗ ಸಂಪರ್ಕವನ್ನು ಕಲ್ಪಿಸಲಿದೆ. ಆದ್ದರಿಂದ ಮೆಟ್ರೋ ಸಂಚಾರ ಆರಂಭವಾದರೆ ಸಾವಿರಾರು ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಅನುಕೂಲವಾಗಲಿದೆ.
ಐಟಿ ಕಂಪನಿಗಳ ಜೊತೆ ಒಪ್ಪಂದವನ್ನು ಮಾಡಿಕೊಂಡು ಆರ್. ವಿ. ರಸ್ತೆ – ಬೊಮ್ಮಸಂದ್ರ ಮಾರ್ಗದಲ್ಲಿ ಹಲವು ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ. ಈ ನಮ್ಮ ಮೆಟ್ರೋ ಮಾರ್ಗದಲ್ಲಿ 16 ನಿಲ್ದಾಣಗಳಿವೆ. 18.8 ಕಿ. ಮೀ. ಮಾರ್ಗ ನಗರವನ್ನು ಎಲೆಕ್ಟ್ರಾನಿಕ್ ಸಿಟಿ ಜೊತೆ ಸಂಪರ್ಕವನ್ನು ಕಲ್ಪಿಸುತ್ತದೆ.
ಸದ್ಯದ ಮಾಹಿತಿ ಪ್ರಕಾರ ಜುಲೈ 16, 17ರಂದು ಈ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಅಂತಿಮ ಹಂತದ ಪರಿಶೀಲನೆಯನ್ನು ನಡೆಸಲಿದ್ದಾರೆ. ಆಗಸ್ಟ್ 15ರೊಳಗೆ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ.
ಡಬಲ್ ಡೆಕ್ಕರ್ ಫ್ಲೈ ಓವರ್, ಮೂರು ಇಂಟರ್ ಚೇಂಜ್ ನಿಲ್ದಾಣ, ಚಾಲಕ ರಹಿತ ನಮ್ಮ ಮೆಟ್ರೋ ರೈಲುಗಳ ಸಂಚಾರ ಈ ಮಾರ್ಗದ ವಿಶೇಷತೆಯಾಗಿದೆ. ಸಿವಿಲ್ ಕಾಮಗಾರಿ ಪೂರ್ಣಗೊಂಡರೂ ರೈಲು ಸಂಚಾರ ಆರಂಭಿಸದಿರಲು ರೈಲುಗಳ ಕೊರತೆಯೇ ಪ್ರಮುಖ ಕಾರಣವಾಗಿದೆ. ಈಗ ಮಾರ್ಗ ಉದ್ಘಾಟನೆಗೊಂಡರೂ 4 ಅಥವ 5 ರೈಲುಗಳ ಮೂಲಕ ಕಾರ್ಯಾಚರಣೆ ಆರಂಭವಾಗಲಿದೆ ಎಂಬ ಮಾಹಿತಿ ಇದೆ.
ಆರ್. ವಿ. ರಸ್ತೆಯಲ್ಲಿ ಈಗಾಗಲೇ ಹಸಿರು ಮಾರ್ಗದ ನಮ್ಮ ಮೆಟ್ರೋ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಹಳದಿ ಮಾರ್ಗದಲ್ಲಿ ಆರ್. ವಿ. ರಸ್ತೆಯಿಂದ ಹೊರಡುವ ರೈಲು ರಾಗಿಗುಡ್ಡ, ಜಯದೇವ ಮೂಲಕ ಬೊಮ್ಮಸಂದ್ರ ತನಕ ಸಂಚಾರವನ್ನು ನಡೆಸಲಿದೆ.
ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ, ಬೇರಟೇನ ಅಗ್ರಹಾರ, ಸಿಂಗಸಂದ್ರ, ಕೂಡ್ಲುಗೇಟ್, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್. ವಿ. ರಸ್ತೆ ನಿಲ್ದಾಣಗಳಿವೆ.