ನವದೆಹಲಿ: ದೇಶದಲ್ಲಿ 4 ಹೊಸ ಸೆಮಿಕಂಡಕ್ಟರ್ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಲಾಗಿದ್ದು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಚಿವ ಅಶ್ಚಿನಿ ವೈಷ್ಣವ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ ಅಡಿಯಲ್ಲಿ 4,600 ಕೋಟಿ ರೂ. ಹೂಡಿಕೆಯ ನಾಲ್ಕು ಹೊಸ ಸೆಮಿಕಂಡಕ್ಟರ್ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳು ಒಡಿಶಾ, ಆಂಧ್ರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಸ್ಥಾಪನೆಯಾಗಲಿವೆ ಎಂದು ಮಂಗಳವಾರ (ಆಗಸ್ಟ್ 12, 2025) ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಚಿವ ಅಶ್ಚಿನಿ ವೈಷ್ಣವ್ ತಿಳಿಸಿದರು.
ಸೆಮಿಕಂಡಕ್ಟರ್‌ಗಳು ಒಂದು ಮೂಲಭೂತ, ಕಾರ್ಯತಂತ್ರದ ಉದ್ಯಮವಾಗಿದ್ದು, ಅದಿಲ್ಲದೇ ಯಾವುದೇ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ತನ್ನನ್ನು ತಾನು ಗುರುತಿಸಿ ಕೊಳ್ಳಲು ಸಾಧ್ಯವಿಲ್ಲ. ಈ ಯೋಜನೆ ಇಂದಾಗಿ ದೇಶದಲ್ಲಿ 2,034 ನುರಿತ ವೃತ್ತಿಪರರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಇದರಿಂದ ದೇಶದ ಸೆಮಿಕಂಡಕ್ಟರ್ ಉತ್ಪಾದನೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದರು.
ಇಂದು ಈ ನಾಲ್ಕು ಅನುಮೋದನೆಗಳೊಂದಿಗೆ, ISM ಅಡಿಯಲ್ಲಿ ಒಟ್ಟು ಅನುಮೋದಿತ ಯೋಜನೆಗಳು 10 ಕ್ಕೆ ತಲುಪುತ್ತವೆ ಮತ್ತು 6 ರಾಜ್ಯಗಳಲ್ಲಿ ಸುಮಾರು ರೂ. 1.60 ಲಕ್ಷ ಕೋಟಿಗಳ ಹೂಡಿಕೆ ಆಗಿದೆ. ಈ ಮುಂಚಿನ ದಿನಗಳಲ್ಲಿ ಅನುಮೋದಿಸಲಾಗಿದ್ದ ಆರು ಯೋಜನೆಗಳು ವಾರ್ಷಿಕವಾಗಿ 24 ಬಿಲಿಯನ್ ಚಿಪ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ” ಎಂದರು.
ದೂರಸಂಪರ್ಕ, ಆಟೋಮೋಟಿವ್, ಡೇಟಾಸೆಂಟರ್‌ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಸೆಮಿಕಂಡಕ್ಟರ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದರೆ, ಈ ನಾಲ್ಕು ಹೊಸ ಅನುಮೋದಿತ ಸೆಮಿಕಂಡಕ್ಟರ್ ಯೋಜನೆಗಳು ಆತ್ಮನಿರ್ಭರ ಭಾರತ್ ನಿರ್ಮಾಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದರು.
ಅಡ್ವಾನ್ಸ್ಡ್ ಸಿಸ್ಟಮ್ ಇನ್ ಪ್ಯಾಕೇಜ್ ಟೆಕ್ನಾಲಜೀಸ್ (ASIP), ದಕ್ಷಿಣ ಕೊರಿಯಾದ APACT ಕಂಪನಿ ಲಿಮಿಟೆಡ್ ಜೊತೆಗಿನ ತಂತ್ರಜ್ಞಾನ ಒಪ್ಪಂದದ ಅಡಿಯಲ್ಲಿ ಆಂಧ್ರ ಪ್ರದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದ್ದು, ವಾರ್ಷಿಕ 96 ಮಿಲಿಯನ್ ಯೂನಿಟ್‌ಗಳ ಸಾಮರ್ಥ್ಯ ಹೊಂದಿದೆ. ಇಲ್ಲಿ ತಯಾರಿಸುವ ಉತ್ಪನ್ನಗಳು ಮೊಬೈಲ್ ಫೋನ್‌ಗಳು, ಸೆಟ್-ಟಾಪ್ ಬಾಕ್ಸ್‌ಗಳು, ಆಟೋಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಬಳಕೆ ಆಗುತ್ತವೆ.
ಕಾಂಟಿನೆಂಟಲ್ ಡಿವೈಸ್ (CDIL) ಪಂಜಾಬ್‌ನ ಮೊಹಾಲಿಯಲ್ಲಿ ತನ್ನ ಡಿಸ್ಕ್ರೀಟ್ ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯವನ್ನು ವಿಸ್ತರಿಸಲಿದೆ. ಪ್ರಸ್ತಾವಿತ ಸೌಲಭ್ಯವು ಸಿಲಿಕಾನ್ ಮತ್ತು ಸಿಲಿಕಾನ್ ಕಾರ್ಬೈಡ್‌ನಲ್ಲಿ MOSFET ಗಳು, IGBT ಗಳು, ಶಾಟ್ಕಿ ಬೈಪಾಸ್ ಡಯೋಡ್‌ಗಳು ಮತ್ತು ಟ್ರಾನ್ಸಿಸ್ಟರ್‌ಗಳಂತಹ ಹೈ-ಪವರ್ ಡಿಸ್ಕ್ರೀಟ್ ಸೆಮಿಕಂಡಕ್ಟರ್ ಸಾಧನಗಳನ್ನು ತಯಾರಿಸುತ್ತದೆ. ಈ ಬ್ರೌನ್‌ಫೀಲ್ಡ್ ವಿಸ್ತರಣೆಯ ವಾರ್ಷಿಕ ಸಾಮರ್ಥ್ಯವು 158.38 ಮಿಲಿಯನ್ ಯೂನಿಟ್‌ಗಳಷ್ಟು ಆಗಿರುತ್ತದೆ.
ಪಂಜಾಬ್‌ನ ಮೊಹಾಲಿಯ ಘಟಕಗಳಿಂದ ತಯಾರಿಸಲ್ಪಡುವ ಸಾಧನಗಳು EV ಗಳು ಮತ್ತು ಅದರ ಚಾರ್ಜಿಂಗ್ ಮೂಲ ಸೌಕರ್ಯ ಹಾಗೂ ನವೀಕರಿ ಸಬಹುದಾದ ಇಂಧನ ವ್ಯವಸ್ಥೆಗಳು, ವಿದ್ಯುತ್ ಪರಿವರ್ತನೆ, ಕೈಗಾರಿಕಾ ಸಲಕರಣೆಗಳಿಗೆ ಮತ್ತು ಸಂವಹನ ಮೂಲ ಸೌಕರ್ಯ ಸೇರಿದಂತೆ ಆಟೋಮೋಟಿವ್ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಉತ್ಪನ್ನಗಳಲ್ಲಿ ಬಳಕೆ ಆಗುತ್ತವೆ.
