ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿದೆ. ಇದೇ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೂ, ಪ್ರಮುಖ-ಹೆಸರಾಂತ ವಿಮಾನಯಾನ ಸಂಸ್ಥೆಗಳು ಇಲ್ಲಿಂದ ಸೇವೆ ಆರಂಭಿಸಲು ಆಸಕ್ತಿ ತೋರುತ್ತಿಲ್ಲ. ಬದಲಾಗಿ, ಅತೀ ಸಣ್ಣ ವಿಮಾನಯಾನ ಕಂಪನಿಗಳು ಹುಬ್ಬಳ್ಳಿಯನ್ನು ಸಂಪರ್ಕಿಸಲು ಹಾತೊರೆಯುತ್ತಿವೆ ಎಂಬುದು ಗಮನಾರ್ಹ.
ಹುಬ್ಬಳ್ಳಿ – ಧಾರವಾಡ ಮಾತ್ರವಲ್ಲದೇ ಉತ್ತರ ಕರ್ನಾಟಕದ ಜಿಲ್ಲೆಗಳ ಪ್ರಯಾಣಿಕರು ತಮ್ಮ ಗಮ್ಯಸ್ಥಾನವನ್ನು ತಲುಪಲು ಹುಬ್ಬಳ್ಳಿ ವಿಮಾನ ನಿಲ್ದಾಣವನ್ನೇ ಆಶ್ರಯಿಸಿದ್ದಾರೆ. ಇನ್ನೂ ಮುಖ್ಯವಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರು, ವಿಶೇಷವಾಗಿ ಮಧ್ಯಪ್ರಾಚ್ಯದ ಪ್ರಯಾಣಿಕರು ಕೊಚ್ಚಿನ್, ಬೆಂಗಳೂರು, ಮುಂಬೈ ಮತ್ತು ನವದೆಹಲಿಯಂತಹ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ತಲುಪಲು ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಸಂಪರ್ಕ ಕೊಂಡಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ಈ ವಾಸ್ತವವನ್ನು ಅರಿತಿರುವ ಫ್ಲೈ 91, ಏರ್‌ಕೇರ್-ಆಲಾ ಮತ್ತು ಅಲ್ಹಿಂದ್ ಏರ್ ಸೇರಿದಂತೆ ಹೊಸ ವಿಮಾನಯಾನ ಸಂಸ್ಥೆಗಳು ಇಲ್ಲಿಂದ ಕಾರ್ಯನಿರ್ವಹಿಸಲು ಆಸಕ್ತಿ ತೋರಿಸಿವೆ. ಅಗತ್ಯವಿರುವ ಅನುಮತಿ ಪಡೆದ ನಂತರ, ಅವುಗಳಿಗೆ ಇಲ್ಲಿಂದ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ.
ಈಗಾಗಲೇ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರನ್ನು ದೂರವಾಣಿಯ ಮೂಲಕ ಸಂಪರ್ಕಿಸಿರುವ ಕೆಲ ಸಣ್ಣ ವಿಮಾನಯಾನ ಸಂಸ್ಥೆಯ ಮುಖ್ಯಸ್ಥರು, ಉಡಾವಣೆಗೆ ಬೇಕಾದ ಅನುಮತಿ ಸೇರಿದಂತೆ ಎಲ್ಲ ದಾಖಲಾತಿಗಳನ್ನೂ ಅವರು ಸಿದ್ಧಪಡಿಸಿಕೊಂಡಿದ್ದು, ವಾರದೊಳಗೆ ಹುಬ್ಬಳ್ಳಿಗೆ ಬಂದು ಅಧಿಕೃತವಾಗಿ ಡೇಟಾ ಮತ್ತು ಇತರ ವಿವರಗಳನ್ನು ಸಂಗ್ರಹಿಸುವ ಯೋಜನೆ ಹೊಂದಿದ್ದಾರೆ. ಬಳಿಕ ಕೆಲವೇ ದಿನಗಳಲ್ಲಿ ಹುಬ್ಬಳ್ಳಿ – ಕೊಚ್ಚಿ, ಹುಬ್ಬಳ್ಳಿ – ಬೆಂಗಳೂರು ವಿಮಾನ ಸೇವೆ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇಂಡಿಗೋ ಸಂಸ್ಥೆಯು ಹುಬ್ಬಳ್ಳಿಯಿಂದ ಬೆಂಗಳೂರು, ನವದೆಹಲಿ, ಮುಂಬೈ, ಹೈದರಾಬಾದ್ ಮತ್ತು ಪುಣೆಗೆ ವಿಮಾನಗಳನ್ನು ನಿರ್ವಹಿಸುತ್ತಿದೆ. ಬೆಂಗಳೂರು ಮತ್ತು ಮುಂಬೈ ಹೊರತುಪಡಿಸಿ, ಹುಬ್ಬಳ್ಳಿಯಿಂದ ಇತರ ನಗರಗಳಿಗೆ ಯಾವುದೇ ದೈನಂದಿನ ವಿಮಾನಗಳಿಲ್ಲ. ಈ ಹಿಂದೆ, ಏರ್ ಇಂಡಿಯಾ, ಸ್ಟಾರ್ ಏರ್, ಏರ್ ಪೆಗಾಸಸ್, ಸ್ಪೈಸ್‌ಜೆಟ್, ಕಿಂಗ್-ಫಿಷರ್, ಡೆಕ್ಕನ್ ಏರ್‌ವೇಸ್ ನಗರದಿಂದ ವಿವಿಧ ಭಾಗಗಳಿಗೆ ವಿಮಾನಗಳನ್ನು ನಿರ್ವಹಿಸುತ್ತಿದ್ದವು.
ಕೇಂದ್ರ ಸರ್ಕಾರವು ಉಡಾನ್ ಯೋಜನೆಯನ್ನು ಪರಿಚಯಿಸಿದಾಗ, ಸ್ಪೈಸ್‌ಜೆಟ್ ಮತ್ತು ಸ್ಟಾರ್ ಏರ್ ಸಹ ಕಾರ್ಯಾರಂಭ ಮಾಡಿದ್ದವು. ಆದಾಗ್ಯೂ, ಉಡಾನ್ ಮುಗಿದ ಕೂಡಲೆ ಈ ಎರಡೂ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ಹಿಂತೆಗೆದುಕೊಂಡವು. ಆದರೆ, ಇಂಡಿಗೋ ಸಂಸ್ಥೆ ಮಾತ್ರ ಇಲ್ಲಿಂದ ಹಾರಾಟ ಮುಂದುವರಿಸಿದೆ.
ಪ್ರಯಾಣಿಕರ ಸಂಖ್ಯೆ ಏರಿಕೆ: ಹುಬ್ಬಳ್ಳಿಯ ನಿಲ್ದಾಣವು ರಾಜ್ಯದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವುದರಿಂದ ಪ್ರತಿ ತಿಂಗಳು ಸುಮಾರು 30,000 ಜನ ಇಲ್ಲಿಂದ ಪ್ರಯಾಣಿಸುತ್ತಾರೆ. 2024-25ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ, 2025-26ರ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕರ ಸಂಖ್ಯೆ 71,418 ರಿಂದ 94,655 ಕ್ಕೆ ಎಂದರೆ ಶೇ. 32.5 ರಷ್ಟು ಏರಿಕೆಯಾಗಿದೆ. ಆದರೂ, ಇಂಡಿಗೊ ಹೊರತುಪಡಿಸಿ ಬೇರೆ ಯಾವುದೇ ದೊಡ್ಡ ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆಯನ್ನು ಇಲ್ಲಿಂದ ನೀಡುತ್ತಿಲ್ಲ ಎಂಬುದು ವಿಪರ್ಯಾಸ.
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಮಾತನಾಡಿ, ಅಹ್ಮದಾಬಾದ್, ಚೆನ್ನೈ, ಕೊಚ್ಚಿನ್, ಗೋವಾ, ಮಂಗಳೂರಿನಂತಹ ಸಂಭಾವ್ಯ ಮಾರ್ಗಗಳು ಈಗ ಯಾವುದೇ ನೇರ ವಿಮಾನಗಳನ್ನು ಹೊಂದಿಲ್ಲ. ಹೀಗಾಗಿ, ಹುಬ್ಬಳ್ಳಿ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ತಿಳಿದುಕೊಂಡ ಸಣ್ಣ ವಿಮಾನಯಾನ ಸಂಸ್ಥೆಗಳು ಕ್ರಮೇಣ ಇಲ್ಲಿಂದ ಕಾರ್ಯನಿರ್ವಹಿಸಲು ಆಸಕ್ತಿ ತೋರಿಸುತ್ತಿವೆ ಎಂದು ಹೇಳಿದ್ದಾರೆ.