ಸವದತ್ತಿ: ಯಲ್ಲಮ್ಮನಗುಡ್ಡದಲ್ಲಿ ಧಾರಾಕಾರ ಸುರಿದ ಮಳೆಯಿಂದಾಗಿ ಹಳ್ಳ, ಕೊಳ್ಳ ಉಕ್ಕಿ ಹರಿದು ಯಲ್ಲಮ್ಮ ದೇವಸ್ಥಾನದಲ್ಲಿದ್ದ ಹುಂಡಿ ಒಳಕ್ಕೂ ಅಪಾರ ಪ್ರಮಾಣದ ನೀರು ನುಗ್ಗಿತ್ತು. ಇದರಿಂದಾಗಿ ಹುಂಡಿಯಲ್ಲಿದ್ದ ನೋಟುಗಳೆಲ್ಲಾ ತೊಯ್ದುಹೋಗಿದ್ದು, ದೇವಸ್ಥಾನದ ಸಿಬ್ಬಂದಿ ಹುಂಡಿಯಲ್ಲಿದ್ದ ಹಣವನ್ನು ತೆಗೆದು ಒಣಗಿಸಲು ಪ್ರಾಂಗಣದಲ್ಲಿ ಹರಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ, ಸವದತ್ತಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಕಚೇರಿ, ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಮ್ಮುಖದಲ್ಲಿ ಹುಂಡಿ ಒಡೆಯಲಾಯಿತು. ನಂತರ ಹುಂಡಿಯಲ್ಲಿ ಇದ್ದ ಹಣವನ್ನು ತೆಗೆದು ಒಣಗಿಸುವ ಪ್ರಕ್ರಿಯೆ ಆರಂಭಿಸಲಾಯಿತು. ನೋಟುಗಳೆಲ್ಲ ಕುಂಕುಮ – ಭಂಡಾರಮಯವಾಗಿದ್ದು, ರಾಶಿ ರಾಶಿಯಾಗಿ ಒಣಗಲು ಹಾಕಿರುವುದು ಕಂಡುಬಂತು.
ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಯಲ್ಲಮ್ಮನ ಗುಡ್ಡಕ್ಕೆ ದರ್ಶನಕ್ಕೆ ಆಗಮಿಸುತ್ತಾರೆ. ದೇವಸ್ಥಾನದಲ್ಲಿರುವ ಹುಂಡಿಯಲ್ಲಿ ನಗದು, ಚಿನ್ನ, ಬೆಳ್ಳಿ ಆಭರಣ ಹಾಕಿ ಭಕ್ತಿ ಸಮರ್ಪಿಸುತ್ತಾರೆ. ಇತ್ತೀಚೆಗೆ ಹುಂಡಿಗಳ ಎಣಿಕೆ ನಡೆದಾಗ 2025 ಏಪ್ರಿಲ್ 1ರಿಂದ ಜೂನ್ 30ರ ಅವಧಿಯಲ್ಲಿ 3.39 ಕೋಟಿ ರೂ. ನಗದು, 32.94 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 9.79 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಸೇರಿದಂತೆ 3.81 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿತ್ತು.
ಮಳೆಯ ರೌದ್ರಾವತಾರ: ಶ್ರಾವಣ ಮಾಸದ ಮೂರನೇ ಶುಕ್ರವಾರ, ವರಮಹಾಲಕ್ಷ್ಮೀ ಪೂಜೆಯ ದಿನ ಸಂಜೆ ಇದ್ದಕ್ಕಿದ್ದಂತೆಯೇ ಉಗರಗೋಳದಲ್ಲಿ ಧಾರಾಕಾರ ಮಳೆಯಾಗಿದ ಹಿನ್ನೆಲೆಯಲ್ಲಿ ಯಲ್ಲಮ್ಮನ ಗುಡ್ಡ ಮಾರ್ಗದಲ್ಲಿನ ಹಳ್ಳ ಉಕ್ಕಿ ಹರಿಯುತ್ತಿತ್ತು. ಇದರಿಂದಾಗಿ ಸಂಚಾರ ಸ್ಥಗಿತಗೊಂಡಿದ್ದು, ಸಾವಿರಾರು ಭಕ್ತರು ಕೂಡ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆ. 9ರಂದು ನೂಲು ಹುಣ್ಣಿಮೆ ಅಂಗವಾಗಿ ಯಲ್ಲಮ್ಮನ ಗುಡ್ಡದಲ್ಲಿ ಜಾತ್ರೆ ಇದ್ದ ಕಾರಣ ಶುಕ್ರವಾರ ಸಂಜೆಯಿಂದಲೇ ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಉಗರಗೋಳ ಮಾರ್ಗವಾಗಿ ಗುಡ್ಡಕ್ಕೆ ಭಕ್ತರ ದಂಡು ಹರಿದುಬಂದಿತ್ತು. ಆದರೆ ಗುಡ್ಡಕ್ಕೆ ಬಂದ ಭಕ್ತರು ಮಳೆಯ ರೌದ್ರಾವತಾರ ಕಂಡು ಭಯಪಟ್ಟಿದ್ದರು.
ಶುಕ್ರವಾರ ಮಧ್ಯಾಹ್ನ 3 ರಿಂದ ಎರಡು ಗಂಟೆಗಳಿಗೂ ಅಧಿಕ ಹೊತ್ತು ಧಾರಾಕಾರ ಮಳೆಯಾಗಿ ಸಂಪರ್ಕ ಕಡಿತಗೊಂಡಿತ್ತು. ಹಳ್ಳದ ಎರಡೂ ಬದಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲವು ಭಕ್ತರು ಸುತ್ತುಬಳಸಿ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಪ್ರಯತ್ನಿಸುತ್ತಿದ್ದರಾದರೂ, ಗುಡ್ಡ ಏರುವುದು ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಧಾರಾಕಾರ ಮಳೆ ನೀರಿನ ರಭಸಕ್ಕೆ ವಾಹನಗಳು ಅರ್ಧದಲ್ಲಿಯೇ ಸಿಲುಕಿಕೊಂಡಿದ್ದು, ವಾಹನದೊಳಗಿನಿಂದ ಭಕ್ತರನ್ನು ಸುರಕ್ಷಿತವಾಗಿ ಹೊರಗಡೆ ಕರೆತರಲಾಗಿದೆ. ಇಷ್ಟೇ ಅಲ್ಲದೇ ದೇವಸ್ಥಾನದ ಆವರಣದಲ್ಲಿದ್ದ ಭಕ್ತರು ಮಳೆಯ ರೌದ್ರಾವತಾರ ಕಂಡು ಬೆಚ್ಚಿಬಿದ್ದಿದ್ದರು. ಏಕಾಏಕಿ ನೀರು ಪ್ರವಾಹದಂತೆ ಬಂದಿದ್ದು, ಕಾಣಿಕೆ ಹುಂಡಿಗಳು ಕೂಡ ನೀರಿನಿಂದ ಮುಚ್ಚಿಹೋಗಿದ್ದವು.
ದೇವರ ಕಾಣಿಕೆ ಹುಂಡಿಯಲ್ಲಿ ನೀರು ಹೋಗಿದ್ದರಿಂದ ಅದರಲ್ಲಿದ್ದ ನೋಟುಗಳು ತೊಯ್ದು ತೊಪ್ಪೆಯಾಗಿದ್ದು, ಸಿಬ್ಬಂದಿ ಹುಂಡಿಯಲ್ಲಿದ್ದ ಹಣವನ್ನು ತೆಗೆದು ಒಣಗಿಸಲು ಪ್ರಾಂಗಣದಲ್ಲಿಂದು ಹರಡಿದ್ದಾರೆ.