ಜುಲೈ 18ರಂದು ಚಿತ್ರಮಂದಿರದಲ್ಲಿ ತೆರೆ ಕಂಡು ಸದ್ದು ಮಾಡಿದ್ದ ಕಿರೀಟಿ ಅಭಿಯನದ ‘ಜೂನಿಯರ್’ ಸಿನಿಮಾ ಒಟಿಟಿಗೆ ಬರುತ್ತಿದೆ. ಮಾಜಿ ಸಚಿವ, ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಈ ಸಿನಿಮಾನ ನಾಯಕ.
‘ಜೂನಿಯರ್’ ಕಿರೀಟಿ ಅಭಿನಯದ ಮೊದಲ ಸಿನಿಮಾ. ಭರ್ಜರಿ ಆಕ್ಷನ್, ಡ್ಯಾನ್ಸ್ ಮೂಲಕ ಮೊದಲ ಸಿನಿಮಾದಲ್ಲಿಯೇ ಅವರು ಭರವಸೆ ಮೂಡಿಸಿದ್ದಾರೆ.
ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಿ ಗಳಿಕೆಯಲ್ಲಿಯೂ ನಿಧಾನವಾಗಿ ಪ್ರಗತಿ ಕಂಡಿತ್ತು. ಕಿರೀಟಿ ಅಭಿನಯ, ಡ್ಯಾನ್ಸ್ ನೋಡಿದ ಸಿನಿಮಾ ಪ್ರೇಮಿಗಳು ಮತ್ತೊಬ್ಬ ಉತ್ತಮ ನಟ ಸಿಕ್ಕ ಎಂದು ಹೇಳಿದ್ದರು.
ಈಗ ‘ಜೂನಿಯರ್’ ಸಿನಿಮಾ ಒಟಿಟಿಗೆ ಬರುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಆಗಸ್ಟ್ 15ರಂದು ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಜನರ ಮುಂದೆ ಬರುತ್ತಿದೆ.
‘ಜೂನಿಯರ್’ ಸಿನಿಮಾದಲ್ಲಿಕಿರೀಟಿ, ಶ್ರೀಲೀಲಾ, ರವಿಚಂದ್ರನ್, ಜೆನಿಲಿಯಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಸಾಯಿ ಕೊರಪತಿ ನಿರ್ಮಾಣ ಮಾಡಿದ್ದು, ಕನ್ನಡದಲ್ಲಿ ‘ಮಾಯಾಬಜಾರ್’ ಸಿನಿಮಾ ನಿರ್ದೇಶಿಸಿದ್ದ ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಿದ್ದಾರೆ.
ಮೊದಲ ಸಿನಿಮಾವಾದರೂ ಸಹ ಕಿರೀಟಿ ಸಾಕಷ್ಟು ಶ್ರಮ ಹಾಕಿದ್ದಾರೆ. ಆಕ್ಷನ್, ಉತ್ಸಾಹ ತುಂಬುವ ಹಾಡು, ನೃತ್ಯಗಳಿವೆ. ಆದ್ದರಿಂದ ತೆಲಗು ಪ್ರೇಕ್ಷಕರು ಸಹ ಚಿತ್ರವನ್ನು ಮೆಚ್ಚಿಕೊಂಡಿದ್ದರು.
‘ಜೂನಿಯರ್’ ಸಿನಿಮಾದ ಒಂದು ಹಾಡು, ಒಂದು ಸಾಹಸ ದೃಶ್ಯಕ್ಕಾಗಿ ಕಿರೀಟಿ ಪರಿಶ್ರಮಪಟ್ಟಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ವತಃ ಜನಾರ್ದನ ರೆಡ್ಡಿ ವಿಡಿಯೋ ಹಂಚಿಕೊಂಡು ಮಗನ ಶ್ರಮವನ್ನು ಶ್ಲಾಘಿಸಿದ್ದರು.
ಕಿರೀಟಿಯನ್ನು ಮಾಸ್ ಹೀರೊ ಆಗಿ ಚಿತ್ರರಂಗಕ್ಕೆ ಪರಿಚಯ ಮಾಡಿಸಬೇಕು ಎಂದು ಈ ಸಿನಿಮಾವನ್ನು ಮಾಡಲಾಗಿದೆ. ಪ್ರತಿ ಫ್ರೇಮ್‌ನಲ್ಲಿಯೂ ಅದ್ದೂರಿತನ ಎದ್ದು ಕಾಣುತ್ತಿದ್ದು, ಚಿತ್ರ ರಿಚ್ ಆಗಿ ಅಭಿಮಾನಿಗಳನ್ನು ಸೆಳೆದಿತ್ತು.
ಅಮ್ಮನನ್ನು ಕಳೆದುಕೊಳ್ಳುವ ನಾಯಕ ಅಪ್ಪನ ಆಶ್ರಯದಲ್ಲಿ ಬೆಳೆಯುವುದು, ಕಾಲೇಜಿನಲ್ಲಿ, ಉದ್ಯೋದಲ್ಲಿ ಜೂನಿಯರ್ ಆದ ನಾಯಕ ಬುದ್ಧಿವಂತಿಕೆಯಿಂದ ಎದುರಾಳಿಗಳನ್ನು ಮಣಿಸುವುದು ಚಿತ್ರದ ಒಂದು ಎಳೆಯಾಗಿದೆ.
ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ, ನೃತ್ಯ ಸಂಯೋಜನೆ ಚಿತ್ರದ ಪ್ರಮುಖ ಹೈಲೈಟ್. ಸಾಕಷ್ಟು ಎನರ್ಜಿಯಿಂದ ಕೂಡಿರುವ ಜೂನಿಯರ್ ಈಗ ಆಗಸ್ಟ್ 15ರ ಶುಕ್ರವಾರ ಒಟಿಟಿಗೆ ಬರುತ್ತದೆ. ಶನಿವಾರ, ಭಾನುವಾರ ಸಿನಿಮಾ ನೋಡುವ ಪ್ಲಾನ್ ಇದ್ದರೆ ಇದನ್ನು ವೀಕ್ಷಣೆ ಮಾಡಬಹುದು.
ಜನಾರ್ದನ ರೆಡ್ಡಿ ಪೋಸ್ಟ್ ಒಂದನ್ನು ಹಾಕಿ, “ಪ್ರಪಂಚದಾದ್ಯಂತ ಬಿಡುಗಡೆಯಾಗಿರುವ ಪುತ್ರ ಕಿರೀಟಿಯ ಜೂನಿಯರ್ ಚಿತ್ರವನ್ನು ತಾವೆಲ್ಲರೂ ತಮ್ಮ ಹತ್ತಿರದ ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಿಸಿ, ಪುತ್ರ ಕಿರೀಟಿಗೆ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ತಾವೆಲ್ಲರೂ ಆಶೀರ್ವದಿಸಬೇಕೆಂದು ಮನವಿ ಮಾಡುತ್ತೇನೆ” ಎಂದು ಮನವಿ ಮಾಡಿದ್ದರು.
ಕಿರೀಟಿ ಮತ್ತು ಜನಾರ್ದನ ರೆಡ್ಡಿ ಜೂನಿಯರ್ ಚಿತ್ರವನ್ನು ಬಳ್ಳಾರಿಯ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿದ್ದರು. ಶ್ರೀಲೀಲಾ ಚಿತ್ರದ ಹಾಡೊಂದರಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದು, ಯೂ ಟ್ಯೂಬ್‌ನಲ್ಲಿ ಹಾಡು ವೈರಲ್ ಆಗಿದೆ.