ದಾವಣಗೆರೆ: ಕುಂಬಳೂರು ಬಳಿ ಸಿಲಿಂಡರ್ ತುಂಬಿದ ಲಾರಿಯೊಂದು ಪಲ್ಟಿಯಾಗಿ ರಸ್ತೆ ತುಂಬಾ ಸಿಲಿಂಡರ್‌ಗಳು ಚೆಲ್ಲಾಪಿಲ್ಲಿ ಬಿದ್ದವು. ಒಂದುಕ್ಷಣ ಪ್ರಯಾಣಿಕರು, ಗ್ರಾಮಸ್ಥರ ಎದೆ ಝಲ್ ಎಂದಿತು.
ಶಿವಮೊಗ್ಗ ಕಡೆಯಿಂದ ಮಲೆಬೆನ್ನೂರು ಮಾರ್ಗವಾಗಿ ಹರಿಹರದೆಡೆಗೆ ಸಿಲಿಂಡರ್ ತುಂಬಿದ ಲಾರಿಯೊಂದು ಮಂಗಳವಾರ ಬಂದಿದೆ. ಕುಂಬಳೂರ ದಾಟಿ ಅಣತಿ ದೂರದಲ್ಲಿ ಎದುರಿಗೆ ಕೆಎಸ್‌ಆರ್‌ಟಿಸಿ ಬಸ್ ಎದುರಾಗಿದೆ.
ಸಿಲಿಂಡರ್ ತುಂಬಿದ ಲಾರಿ ಚಾಲಕ ಕಿರಿದಾದ ರಸ್ತೆಯಾಗಿದ್ದರಿಂದ ಟಾರ್ ರಸ್ತೆಯ ಎಡಗಡೆಗೆ ಲಾರಿ ಇಳಿಸಿ ದಾರಿ ಬಿಟ್ಟುಕೊಟ್ಟಿದ್ದಾನೆ. ಬಸ್‌ಗೆ ಹೋಗಲು ಬಿಟ್ಟು ರಸ್ತೆ ಹತ್ತಿಸಲು ಲಾರಿ ಚಾಲನೆ ಮಾಡಿದ್ದಾನೆ.
ಸಿಲಿಂಡರ್ ತುಂಬಿದ ಲಾರಿ ಟಾರ್ ರಸ್ತೆ ಕೆಳಗಿನಿಂದ ಸುಮಾರು ಒಂದು ಅಡಿಯಷ್ಟು ಚಡಿ ಹತ್ತಿ ರಸ್ತೆ ಹತ್ತುತ್ತಿದ್ದಂತೆ ಲಾರಿ ಲೋಡ್ ಮಾಡಿದ್ದ ಸಿಲಿಂಡರ್‌ಗಳು ಉರುಳಲಾರಂಭಿಸಿವೆ, ಲಾರಿ ಪಲ್ಟಿಯಾಗಿದೆ.
ಸಿಲಿಂಡರ್‌ಗಾಗಿ ಭಯದಲ್ಲೇ ಓಡಿದ ಜನರು: ಲಾರಿ ಪಲ್ಟಿಯಾಗಿ ದಾರಿಯುದ್ದಕ್ಕೂ ಸಿಲಿಂಡರ್‌ಗಳು ಉರುಳಲಾರಂಭಿಸುತ್ತಿದ್ದಂತೆ ಜನರು ಸಿಲಿಂಡರ್ ತೆಗೆದುಕೊಳ್ಳಲು ತಾ ಮುಂದು, ನಾ ಮುಂದು ಎಂದು ಭಯದಲ್ಲಿ ಓಡಿ ಹೋಗಿದ್ದಾರೆ.
ಪಲ್ಟಿಯಾಗಿ ಬಿದ್ದ ಲಾರಿ ಬಳಿ ಬರಲು ಜನರು ಭಯಪಡುವುದು ಕಂಡುಬಂತು. ಸಿಲಿಂಡರ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ಕೆಲ ಸಮಯ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಲಾರಿ ಪಲ್ಟಿಯಾಗಿ ರಸ್ತೆ ತುಂಬೆಲ್ಲ ಸಿಲಿಂಡರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಅದೃಷ್ಟವಶಾತ್ ಸಿಲಿಂಡರ್‌ಗಳು ಸಿಡಿಯದಿರುವುದು ಭಾರೀ ಅನಾಹುತ ತಪ್ಪಿದಂತಾಗಿದೆ.
ಚಾಲಕ ಅಶೋಕ್ ಎಂಬುವರಿಗೆ ಮಾತ್ರ ತಲೆಗೆ ಪೆಟ್ಟು ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಮಲೇಬೆನ್ನೂರು ಪಿಎಸ್‌ಐ ಹಾರೂನ್ ಅಖ್ತರ್ ಮತ್ತು ಸಿಬ್ಬಂದಿ ಭೇಟಿ ನೀಡಿ, ರಸ್ತೆಯಲ್ಲಿ ಬಿದ್ದಿದ್ದ ಸಿಲಿಂಡರ್‌ಗಳನ್ನು ತೆರವುಗೊಳಿಸಲು ಅನುವು ಮಾಡಿಕೊಟ್ಟರು.
ಹಾಳಾದ ರಸ್ತೆಯೇ ಕಾರಣ: ಈ ಮಾರ್ಗ ರಾಜ್ಯ ಹೆದ್ದಾರಿ ಆಗಿದ್ದರೂ ಕೂಡ ರಸ್ತೆ ಅಭಿವೃದ್ಧಿಗೊಂಡಿಲ್ಲ. ಅಲ್ಲಲ್ಲಿ ತಗ್ಗು ಗುಂಡಿಗಳು, ಕಿರಿದಾದ ರಸ್ತೆಯಾಗಿದ್ದು, ಎದುರು-ಬದರಾಗಿ ಭಾರೀ ಮತ್ತು ಲಘು ವಾಹನಗಳು ಸಹ ಓಡಾಡದಂತ ಪರಿಸ್ಥಿತಿ ಇದೆ.
ಕುಂಬಳೂರು, ನಂದಿತಾವರೆ, ನಂದಿತಾವರೆ ಕ್ಯಾಂಪ್‌ಗಳಲ್ಲಿ ತಂಗುದಾಣಗಳು ಸುಸ್ಥಿಯಲ್ಲಿಡಲು ಗ್ರಾಮ ಪಂಚಾಯಿತಿಗಳು ನಿರ್ಲಕ್ಷ್ಯ ವಹಿಸಿವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.