ಬಳ್ಳಾರಿ: ಮಧ್ಯರಾತ್ರಿ ಎಟಿಎಂವೊಂದರಲ್ಲಿ ಹಣ ಕದಿಯಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಳ್ಳಾರಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳ್ಳಾರಿಯ ಕಾಳಮ್ಮ ಸರ್ಕಲ್‌ನಲ್ಲಿನರುವ ಆಕ್ಸಿಸ್ ಬ್ಯಾಂಕ್‌ನ ಎಟಿಎಂನಲ್ಲಿ ದರೋಡೆಗೆ ಯತ್ನಿಸಿದ ಕಳ್ಳನನ್ನು ಪೊಲೀಸರು ಲೈವ್‌ನಲ್ಲಿ ಹಿಡಿದು ಬಂಧಿಸಿದ್ದಾರೆ.
ಬಂಧಿತ ಆರೋಪಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಆರ್. ವೆಂಕಟೇಶ ಕೋಡಿಗುಡ್ಡ ಎಂದು ಗುರುತಿಸಲಾಗಿದೆ. ಈತ ಸೋಮವಾರ ಮಧ್ಯರಾತ್ರಿ 1.30 ರ ಸುಮಾರಿಗೆ ಆಕ್ಸಿಸ್ ಬ್ಯಾಂಕ್ ಎಟಿಎಂ ಒಡೆದು ಹಣ ಕಳ್ಳತನ ಮಾಡಲು ಯತ್ನಿಸಿದ್ದಾನೆ. ರಾತ್ರಿ ಪಾಳಿಯದಲ್ಲಿದ್ದ ಬ್ರೂಸ್ ಪೇಟೆ ಠಾಣೆಯ ಎಎಸ್‌ಐ ಮಲ್ಲಿಕಾರ್ಜುನ ಎನ್ನುವವರು ಒಳ ನುಗ್ಗಿ ಆರೋಪಿಯನ್ನು ಹಿಡಿದಿದ್ದಾರೆ.
ಪೊಲೀಸ್ ಕಳ್ಳನನ್ನು ಹಿಡಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಸ್ವಲ್ಪ ಯಾಮಾರಿದರೂ ಕಳ್ಳ ಎಎಸ್ಐ ಮೇಲೆ ದಾಳಿ ಮಾಡುತ್ತಿದ್ದ. ಆರೋಪಿ ವೆಂಕಟೇಶ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಮತ್ತಿಬ್ಬರು ಪೇದೆಗಳಾದ ಅನಿಲ್, ಸಿದ್ದೇಶ ಎನ್ನುವವರು ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬ್ರೂಸ್‌ಪೇಟೆ ಠಾಣೆ ಪೊಲೀಸರ ಕರ್ತವ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರೈಲಿನಲ್ಲಿ ಲ್ಯಾಪಟಾಪ್ ಕಳ್ಳತನ: ಹುಬ್ಬಳ್ಳಿಯಿಂದ ಬೆಂಗಳೂರಿಗೆ `ದಾದರ್ ತಿರನಲ್ವೇಲಿ’ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಲ್ಯಾಪ್‌ಟಾಪ್ ಸೇರಿದಂತೆ 92,500 ಮೌಲ್ಯದ ವಸ್ತುಗಳ ಕಳ್ಳತನ ಮಾಡಲಾಗಿದೆ. ಹಾವೇರಿಯಲ್ಲಿ ರೈಲು ನಿಂತಿದ್ದ ಸಂದರ್ಭದಲ್ಲಿ ಬೆಳಗಾವಿಯ ವಿಜಯ ಕಾಂಬಳೆ ಎನ್ನುವವರು ಶೌಚಾಲಯಕ್ಕೆ ಹೋಗಿ ಮರಳಿ ಬರುವಷ್ಟರಲ್ಲಿ ಲ್ಯಾಪ್‌ಟಾಪ್ ಬ್ಯಾಗ್ ಕಳ್ಳತನವಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮೆರೆದ ಆಟೋ ಚಾಲಕ: ಬ್ಯಾಂಕ್ ವ್ಯವಹಾರ ಮುಗಿಸಿಕೊಂಡು ಮನೆಗೆ ಹೋಗುವ ಅವಸರದಲ್ಲಿ ಪ್ರಯಾಣಿಕರೊಬ್ಬರು ಆಟೋ ರೀಕ್ಷಾದಲ್ಲಿ ತಮ್ಮ ಬ್ಯಾಂಕಿನ ಪಾಸ್‌ಬುಕ್ ಹಾಗೂ ದಾಖಲೆಗಳ ಜೊತೆ 6 ಸಾವಿರ ರೂ. ನಗದು ಬಿಟ್ಟು ಹೋಗಿದ್ದು, ದಾಖಲೆ ಕಳೆದುಕೊಂಡ ವ್ಯಕ್ತಿಗೆ ಆಟೋ ಚಾಲಕರು ಪೊಲೀಸರ ಮೂಲಕ ತಲುಪಿಸಿ, ಮಾನವೀಯತೆ ಮೆರೆದಿದ್ದಾರೆ.
ಆಟೋ ಚಾಲಕ ಸಲೀಂ ಶೇಕ ಅವರು ತಮ್ಮ ಆಟೋ ಸ್ವಚ್ಛಗೊಳಿಸುವಾಗ ದಾಖಲೆಗಳನ್ನು ಗಮನಿಸಿ ತಕ್ಷಣ ಆಟೋ ಚಾಲಕರ, ಮಾಲಿಕರ ಸಂಘದ ಅಧ್ಯಕ್ಷ ರಫೀಕ ಬಡೇಘರ ಗಮನಕ್ಕೆ ತಂದಿದ್ದಾರೆ. ಅವರು ತಕ್ಷಣ ಬೈಲಹೊಂಗಲ ಪೊಲೀಸ್ ಠಾಣೆಯ ಸಿಪಿಐ ಪ್ರಮೋದ ಯಲಿಗಾರ ಅವರಿಗೆ ತಲುಪಿಸಿ ದಾಖಲೆಗಳನ್ನು ಕಳೆದುಕೊಂಡವರಿಗೆ ನೀಡುವಂತೆ ತಿಳಿಸಿದ್ದರು. ಬೈಲಹೊಂಗಲ ಪೊಲೀಸರು ದಾಖಲೆ ಪರಿಶೀಲಿಸಿ, ಕಳೆದುಕೊಂಡಿದ್ದ ವ್ಯಕ್ತಿಯನ್ನು ಸಂಪರ್ಕಿಸಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಟೋ ಚಾಲಕರ ಕಾರ್ಯಕ್ಕೆ ಪೊಲೀಸರು ಹಾಗೂ ದಾಖಲೆ ಕಳೆದುಕೊಂಡಿದ್ದ ವ್ಯಕ್ತಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.