ಭಟ್ಕಳ: ತಾಲೂಕಿನಲ್ಲಿ ಮಳೆಯಿಂದಾಗಿ ಬಾಲಕಿ ಹಾಗೂ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜರುಗಿದೆ.
ಶನಿವಾರ ಮಳೆ ಸ್ವಲ್ಪ ಬಿಡುವು ನೀಡಿದ್ದು, ಭಾನುವಾರದ ಮಳೆಗೆ ಬೆಳಿಗ್ಗೆಯಿಂದ ಗಾಳಿ ಮಳೆ ಜೋರಾಗಿ ಬರುತ್ತಿದ್ದು ಅನೇಕ ಕಡೆಗಳಲ್ಲಿ ಹಾನಿಯಾಗಿರುವ ಕುರಿತು ವರದಿಯಾಗಿದೆ. ಶನಿವಾರ ಮಧ್ಯಾಹ್ನದ ಸಮಯ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಯ ಎದುರು ಆಟವಾಡುತ್ತಿದ್ದ ಎರಡು ವರ್ಷದ ಬಾಲಕಿಯೊರ್ವಳು ಹಳ್ಳದಲ್ಲಿ ಬಿದ್ದು ಮೃತ ಪಟ್ಟ ದಾರುಣ ಘಟನೆ ನಡೆದಿದೆ. ಮಗುವು ಹಳ್ಳಕ್ಕೆ ಬಿದ್ದಿರುವುದನ್ನು ಗಮನಕ್ಕೆ ಬಂದ ತಕ್ಷಣ ಸರಕಾರಿ ಆಸ್ಪತ್ರೆಗೆ ತರಲಾಯಿತಾದರೂ ಬದುಕುಳಿದಿಲ್ಲ ಎನ್ನಲಾಗಿದೆ. ತಾಲೂಕಿನ ಬೆಳಲಖಂಡದ ಮಾದೇವ ನಾರಾಯಣ ದೇವಾಡಿಗ (೫೦) ಎನ್ನುವವರು ಮನೆಗೆ ನಡೆದುಕೊಂಡು ಬರುತ್ತಿರುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮುಳುಗಿ ಮೃತ ಪಟ್ಟಿರುವುದಾಗಿ ಆತನ ಪತ್ನಿ ಲಕ್ಷ್ಮೀ ಮಾದೇವ ದೇವಾಡಿಗ ದೂರು ನೀಡಿದ್ದಾರೆ. ತನ್ನ ಪತಿ ಬೆಳಲಖಂಡದ ಲಕ್ಕಿ ಫ್ಯಾಕ್ಟರಿಯ ಹಿಂಬದಿಯಿಂದ ಮನೆಗೆ ನಡೆದುಕೊಂಡು ಬರುತ್ತಿರುವಾಗ ಭಾರೀ ಮಳೆಯ ನೀರಿಗೆ ಕೊಚ್ಚಿ ಹೋಗಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ಶವ ಬಿಟ್ಟುಕೊಡಲಾಯಿತು.