ದಾಂಡೇಲಿ : ದಾಂಡೇಲಿ – ಅಳ್ನಾವರ ರೈಲು ಸಂಚಾರ ಪ್ರಾರಂಭಿಸುವಂತೆ ಆಗ್ರಹಿಸಿ ಇಂದು ಗುರುವಾರ ಅಳ್ನಾವರ ರೈಲು ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ದಾಂಡೇಲಿಯಿಂದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಕರ್ನಾಟಕ ರಾಜ್ಯ ಸ್ಥಳೀಯ ಘಟಕದ ಅಧ್ಯಕ್ಷರಾದ ಫಿರೋಜ ಫಿರಜಾದೆ ಅವರ ನೇತ್ರತ್ವದಲ್ಲಿ ರೈಲ್ ರೋಖೋ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಫಿರೋಜ್ ಪಿರಜಾದೆ ದಾಂಡೇಲಿಯಲ್ಲಿ ಸುವ್ಯವಸ್ಥಿತ ರೈಲು ನಿಲ್ದಾಣವನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೇಂದ್ರ ಸರಕಾರ ನಿರ್ಮಿಸಿದೆ.
ದಾಂಡೇಲಿಯಿಂದ ಧಾರವಾಡಕ್ಕೆ ಪ್ರತಿನಿತ್ಯ ಪ್ರಯಾಣಿಕರ ರೈಲು ಬಂದು ಹೋಗುತ್ತಿತ್ತು. ಇದರಿಂದ ದಾಂಡೇಲಿ ಹಾಗೂ ಸುತ್ತಮುತ್ತಲಿನ ಜನರಿಗೆ, ಪ್ರವಾಸೋದ್ಯಮಕ್ಕೂ ಅನುಕೂಲವಾಗಿತ್ತು. ಕೊವಿಡ್ ಸಾಂಕ್ರಾಮಿಕ ರೋಗದ ಹರಡುವಿಕೆಯಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಅಂದಿನಿಂದ ಇಂದಿನವರೆಗೆ ರೈಲು ಸಂಚಾರ ಪುನರಾರಂಭಿಸಿಲ್ಲ.
ರೈಲು ಸಂಚಾರ ಪ್ರಾರಂಭಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ, ಸಂಸದರಿಗೆ ಮತ್ತು ರೇಲ್ವೆ ಸಚಿವ ಸೋಮಣ್ಣ ಅವರಿಗೆ ಪ್ರತ್ಯಕ್ಷ ಭೇಟಿಯಾಗಿ ಮನವಿ ಮಾಡಲಾಗಿತ್ತು. ಅವರೆಲ್ಲರೂ ರೈಲು ಸಂಚಾರ ಪ್ರಾರಂಭಿಸುವ ಭರವಸೆ ನೀಡಿದರೆ ಹೊರತು ರೈಲು ಸಂಚಾರ ಪ್ರಾರಂಭವಾಗಿಲ್ಲ. ಈ ಹಿನ್ನಲೆಯಲ್ಲಿ ರೈಲು ರೋಖೊ ಪ್ರತಿಭಟನಾ ಕಾರ್ಯಕ್ರಮದ ಮೂಲಕ ಸಂಬಂಧಿಸಿದವರ ಗಮನಕ್ಕೆ ತರಲಾಗುತ್ತಿದೆ ಎಂದರು.
ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆ ಧಾರವಾಡದ ರೇಲ್ವೆ ಸಲಹಾ ಸಮಿತಿ ಸದಸ್ಯರಾದ ಲಿಂಗರಾಜ ಮೂಲಿಮನಿ, ಪ್ರವೀಣ ಪವಾರ ಸ್ಥಳಕ್ಕೆ ಆಗಮಿಸಿ ದಾಂಡೇಲಿಗೆ ರೈಲು ಸಂಚಾರ ಪ್ರಾರಂಭಿಸಲು ಬೇಕಾದ ಅಗತ್ಯ ತಯಾರಿ ಮಾಡುತ್ತಿದ್ದೆವೆ. ಶೇಕಡಾ 10 ರಷ್ಟು ಕೆಲಸ ಬಾಕಿ ಇದೆ. ಅದನ್ನು ಶೀಘ್ರದಲ್ಲೆ ಪೂರ್ಣಗೊಳಿಸಿ ರೈಲು ಸಂಚಾರ ಪ್ರಾರಂಭಿಸುವ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.
ಅವರ ಮನವಿಯ ಮೇರೆಗೆ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು. ಪ್ರತಿಭಟನೆಯಲ್ಲಿ ಶ್ರೀಕಾಂತ ಅಸೂದೆ, ರವಿ ಸುತಾರ, ರಫೀಕ್ ಹುದ್ದಾರ, ಶೆಹಜಾದೆ, ಭಾರ್ಗವಿ ಮನ್ನೂರು,ರಾಘವೇಂದ್ರ ವಿ. ಮತ್ತಿತರರುಪಾಲ್ಗೊಂಡಿದ್ದರು.
