Home ನಮ್ಮ ಜಿಲ್ಲೆ ಉತ್ತರ ಕನ್ನಡ ಭಾರತದ ಸಂವಿಧಾನ ಶೋಷಣೆ ಮುಕ್ತ ಸಮಾಜಕ್ಕೆ ಬುನಾದಿಯಾಗಿದೆ

ಭಾರತದ ಸಂವಿಧಾನ ಶೋಷಣೆ ಮುಕ್ತ ಸಮಾಜಕ್ಕೆ ಬುನಾದಿಯಾಗಿದೆ

0

ದಾಂಡೇಲಿ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂಲ ತತ್ವಗಳ ಮೇಲೆ ನಿರ್ಮಿಸಿದ ಭಾರತೀಯ ಸಂವಿಧಾನ — ಇದು ವಿಶ್ವದಾದ್ಯಂತ ಗೌರವಿಸಲ್ಪಟ್ಟ ಅದ್ವಿತೀಯ ಗ್ರಂಥ ಎಂದು ಹಿರಿಯ ಉಪನ್ಯಾಸಕ ಉಪೇಂದ್ರ ಸಿಂಹ ಘೋರ್ಪಡೆ ಹೇಳಿದ್ದಾರೆ.

ನಗರದ ಬಂಗೂರನಗರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಇಂದು ನಡೆದ ಸಂವಿಧಾನ ದಿನಾಚರಣೆ–2025 ಮತ್ತು ವಿಕಸಿತ ಭಾರತ 2047 ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು. ಶಿವಮೊಗ್ಗದ ಕೇಂದ್ರ ಸಂಹವನ ಇಲಾಖೆ, ರಾಜ್ಯಶಾಸ್ತ್ರ ವಿಭಾಗ ಮತ್ತು ಮಾನವ ಹಕ್ಕುಗಳ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.

ಘೋರ್ಪಡೆ ಅವರು ಮುಂದುವರಿಸಿ ಮಾತನಾಡುತ್ತಾ ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಶಿಕ್ಷಣ ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಯಾವುದೇ ರೀತಿಯ ಭೇದಭಾವವಿಲ್ಲದೆ ಹಕ್ಕುಗಳನ್ನು ನೀಡುವಷ್ಟು ವೈಶಾಲ್ಯ ಹೊಂದಿರುವ ಸಂವಿಧಾನ ಜಗತ್ತಿನಲ್ಲಿ ಇನ್ನಿಲ್ಲ. ಪ್ರಪಂಚದಲ್ಲಿ ನಾಗರಿಕರಿಗೆ ಅತಿ ಹೆಚ್ಚು ಹಕ್ಕುಗಳನ್ನು ನೀಡಿರುವ ಸಂವಿಧಾನ ನಮ್ಮದೇ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮವನ್ನು ಅಂಕೋಲಾ ಜೆ.ಸಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್. ವಿ. ವಸ್ತ್ರದ ಉದ್ಘಾಟಿಸಿ ಮಾತನಾಡಿ ದೇಶದ ಸ್ವಾತಂತ್ರ್ಯ ಹೋರಾಟದ ಆದರ್ಶಗಳ ಬೆಳವಣಿಗೆಯಾಗಿ ಬೆಳೆದು ಬಂದ ನಮ್ಮ ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿ ಜಗತ್ತಿನಲ್ಲಿಲ್ಲ. ಇದು ಪ್ರಜಾಸತ್ತೆಯ ಶಾಶ್ವತ ದಾಖಲೆ ಎಂದು ಹೇಳಿದರು.

ಶಿವಮೊಗ್ಗದ ಕ್ಷೇತ್ರ ಸಹಾಯಕ ಪ್ರಚಾರಕರಾದ ಸಿ. ವಿ. ಲಕ್ಷ್ಮಿಕಾಂತ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತ ಸಂವಿಧಾನದ ಮೂಲ ಆಶಯಗಳು ಮತ್ತು ಅವುಗಳ ಅಗತ್ಯತೆಯನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಬಿ. ಎಲ್. ಗುಂಡೂರು ವಹಿಸಿದ್ದರು. ಶಿರೀನ್ ಮಂಟೂರ್‌, ಅರ್ಚನಾ ತೋಟದ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version