ದಾಂಡೇಲಿ : ಖರೀದಿ ಮಾಡಿದ ಹೊಲ ಬಿಟ್ಟುಕೊಡದೆ, ತಕಾರರು ತೆಗೆದು ಪರಿಶುರಾಮ ತೋರಸ್ಕರ್ ಎಂಬಾತನ ಕೊಲೆ ಮಾಡಿದ್ದ ಸಹದೇವ ದಡ್ಡಿಕರ್ ಹಾಗೂ ಕೊಲೆಗೆ ಸಹಕಾರ ನೀಡಿದ್ದ ಸದಾನಂದ ಎ.ಪಾಟೀಲ, ರಾಮಾ ಹುಬ್ಬಳಕರ್ ಎಂಬುವವರಿಗೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ.
ಕರ್ಲಾಕಟ್ಟಾ ಹೊಲದಲ್ಲಿ 2023 ಮೇ 11 ರಂದು ಪರುಶುರಾಮ ಎಂಬಾತನ ಕಾಲು ಕಡಿದು ಆರೋಪಿಗಳು ಕೊಲೆ ಮಾಡಲಾಗಿತ್ತು. ಮೊಬೈಲ್ ತುಂಡು ಮಾಡಿ ಸಾಕ್ಷಿ ನಾಶಕ್ಕೆ ಯತ್ನಿಸಿದ್ದರು. ವಕೀಲ ರಮೇಶ್ ಬಿಂಗಿ ಅವರಿಗೆ ಕೊಲೆಯಾದ ವ್ಯಕ್ತಿ ಜಗಳದ ವೇಳೆ ಮಾಡಿದ ಮೊಬೈಲ್ ಕರೆ ಹಾಗೂ ಇನ್ನಿತರೆ ವೈಜ್ಞಾನಿಕ ಸಾಕ್ಷಿ ಆಧಾರದಲ್ಲಿ ಸಾಬೀತಾಗಿತ್ತು.
ಈ ಕೊಲೆ ಸಾಕ್ಷ್ಯಗಳನ್ನು ಸಿಪಿಐ ಸುರೇಶ್ , ಪಿಎಸ್ ಐ ವಿನೋದ ಎಸ್ಕೆ ಸಂಗ್ರಹಿಸಿದ್ದರು. ಯಮುನಾ ಸುಂಟಗಾರ ಎಂಬುವವರಿಂದ ಮಾಯಾಶ್ರೀ ತೋರಸ್ಕರ್ 3 ಎಕರೆ ಹೊಲ ಖರೀದಿಸಿದ್ದರು. ಖರೀದಿಸಿದ ಹೊಲವನ್ನು ಸಾಗುವಳಿ ಮಾಡುತ್ತಿದ್ದ ಸಹದೇವ ದಡ್ಡೀಕರ್ ಬಿಟ್ಟುಕೊಡಲು ತಕರಾರು ತೆಗೆದಿದ್ದ.
ಅಲ್ಲದೆ ಆ ಹೊಲದಲ್ಲಿದ್ದ ತನ್ನ ತಂದೆಯ ಸಮಾಧಿಕಟ್ಟೆ ತೆಗೆದು ಹಾಕಿದ ಎಂದು ಪರುಶುರಾಮ ತೋರಸ್ಕರ್ ಮೇಲೆ ಸೇಡು ಇಟ್ಟಿದ್ದ ಸಹದೇವ , ನಂತರ ಪರುಶುರಾಮ ಹೊಲಕ್ಕೆ ಬಂದಾಗ ಜಗಳ ತೆಗೆದು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಸರ್ಕಾರಿ ವಕೀಲ ರಾಜೇಶ್ ಮಳಗೀಕರ್ ಸಮರ್ಥವಾಗಿ ವಾದ ಮಂಡಿಸಿದ್ದರು. ಅಲ್ಲದೆ ಅಪರಾಧ ಸಾಬೀತು ಪಡಿಸಿದ್ದರು.
ಶಿರಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ಅವರು ಮೂವರು ಆರೋಪಿಗಳಿಗೆ ಶುಕ್ರವಾರ ನ್ಯಾಯಾಲಯದ ನ್ಯಾಯಾಪೀಠದಿಂದ ತೀರ್ಪು ಪ್ರಕಟಿಸಿದರು. ಮೂವರು ಅಪರಾಧಿಗಳಾದ ಸಹದೇವ ದಡ್ಡಿಕರ, ಸದಾನಂದ ಪಾಟೀಲ, ರಾಮ ಹುಬ್ಬಕರ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 20 ಸಾವಿರ ರೂ.ದಂಡ ವಿಧಿಸಿದರು . ಅಲ್ಲದೆ ಮೃತನ ಕುಟುಂಬಕ್ಕೆ ತಲಾ 25 ಸಾವಿರ ರೂ.ದಂತೆ ಮೂವರು ಅಪರಾಧಿಗಳು ನೀಡಬೇಕು. ಮೃತನ ಪತ್ನಿ ಮಾಯಾಶ್ರಿ ಮತ್ತು ಮಕ್ಕಳಿಗೆ ಅಪರಾಧಿಗಳಿಂದ 75 ಸಾವಿರ ರೂ.ಪಡೆದು , ಪರಿಹಾರ ಮೊತ್ತವನ್ನು ತಲುಪಿಸಬೇಕೆಂದು ಆದೇಶ ಮಾಡಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದಿಂದ ಹೆಚ್ಚಿನ ನೆರವವನ್ನು ಮೃತನ ಕುಟುಂಬದವರು ಪಡೆಯಬಹುದು ಎಂದು ಸೂಚಿಸಿದ್ದಾರೆ
