Home ನಮ್ಮ ಜಿಲ್ಲೆ ಉತ್ತರ ಕನ್ನಡ ಗೃಹ ಆರೋಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 4 ಲಕ್ಷ ಜನರ ಆರೋಗ್ಯ ತಪಾಸಣೆ: ಶಂಕರ ರಾವ್

ಗೃಹ ಆರೋಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 4 ಲಕ್ಷ ಜನರ ಆರೋಗ್ಯ ತಪಾಸಣೆ: ಶಂಕರ ರಾವ್

0

ದಾಂಡೇಲಿ : ರಾಜ್ಯದಲ್ಲಿನ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಸಾಂಕ್ರಾಮಿಕವಲ್ಲದ ರೋಗಗಳ ಕುರಿತಂತೆ ಉಚಿತವಾಗಿ ಆರೋಗ್ಯ ಪರೀಕ್ಷೆಗಳನ್ನು ನಡೆಸುವ ಗೃಹ ಆರೋಗ್ಯ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 2025 ರಿಂದ ಅಕ್ಟೋಬರ್‌ವರೆಗೆ ಒಟ್ಟು 4,09,448 ಜನರ ಆರೋಗ್ಯ ತಪಾಸಣೆ ನಡೆಸಿ, ವಿವಿಧ ಕಾಯಿಲೆಗಳ ಬಗ್ಗೆ ತಪಾಸಣೆ ಮತ್ತು ಸುರಕ್ಷಿತ ಆರೋಗ್ಯ ಮಾಹಿತಿ ನೀಡಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಾಧಿಕಾರಿ ಶಂಕರ್ ರಾವ್ ತಿಳಿಸಿದ್ದಾರೆ.

ಈ ಯೋಜನೆಯಡಿ ಆರೋಗ್ಯ ಕಾರ್ಯಕರ್ತರ ಒಂದು ತಂಡ ದಿನಕ್ಕೆ 15 ಮನೆಗಳ ತಪಾಸಣೆ ನಡೆಸಲಿದೆ. ಪ್ರತಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಭೇಟಿ ಕಡ್ಡಾಯವಾಗಿರಲಿದೆ. ರಕ್ತದೊತ್ತಡ ಸಮಸ್ಯೆ, ಮಧುಮೇಹ, ಬಾಯಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್, ನಿದ್ದೆಯಲ್ಲಿ ಉಸಿರುಗಟ್ಟುವಿಕೆ, ಮಾನಸಿಕ ಆರೋಗ್ಯದ ತಪಾಸಣೆ ನಡೆಸಲಿದ್ದು, ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧ ವಿತರಣೆ, ಕೆಲವರಿಗೆ ಜೀವನ ಶೈಲಿ ಮಾರ್ಪಾಡಿಗೆ ಸಲಹೆ ನೀಡಲಾಗುವುದು ಎಂದು ಅವರು ವಿವರಿಸಿದರು.

ಆರೈಕೆಯಲ್ಲಿರುವ ರೋಗಿಗಳಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಔಷಧೋಪಚಾರ ಮತ್ತು ಉಚಿತವಾಗಿ ಮಾತ್ರೆಗಳ ವಿತರಣೆ ಮಾಡಲಾಗುವುದು. ಜಿಲ್ಲೆಯಲ್ಲಿ ಅಗಸ್ಟ್-2025ನೇ ತಿಂಗಳಿoದ ಗೃಹ ಆರೋಗ್ಯ ಕಾರ್ಯಕ್ರಮವು ಆರಂಭವಾಗಿದ್ದು , ಈ ಕುರಿತು ಎಲ್ಲಾ ಹಂತದ ಸಿಬ್ಬಂದಿಗಳಿಗೆ ಗೃಹ ಆರೋಗ್ಯ ಕಾರ್ಯಕ್ರಮದ ಕುರಿತು ತರಬೇತಿ ನೀಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಮನೆಗೆ ತೆರಳಿ ಗೃಹ ಆರೋಗ್ಯ ಅಡಿಯಲ್ಲಿ ಬರುವ ವಿವಿಧ ಬಗೆಯ 14 ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದು, ಪ್ರಾಥಮಿಕ ತಪಾಸಣೆಯನ್ನು ನಡೆಸಲಿದ್ದು, ಸಂಶಯಾಸ್ಪದ ಪ್ರಕರಣಗಳಿದ್ದಲ್ಲಿ ಹತ್ತಿರದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ತಪಾಸಣೆಗಾಗಿ ಕಳುಹಿಸುತ್ತಾರೆ.

ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಎಲ್ಲಾ 14 ಕಾಯಿಲೆಗಳ ತಪಾಸಣೆಯನ್ನು ಸಮುದಾಯ ಆರೋಗ್ಯಾಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮಾಡಿ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ನಿರ್ದೇಶನ ಮಾಡುತ್ತಾರೆ.4 ರಿಂದ 6 ತಿಂಗಳಲ್ಲಿ ಸ್ತ್ರೀನಿಂಗ್ ಕಾರ್ಯ ಪೂರ್ಣಗೊಳಿಸಿ, ನಂತರ ಹೆಚ್ಚಿನ ಆರೈಕೆಗಾಗಿ ಒಂದು ತಿಂಗಳ ನಂತರ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು.

ಎರಡನೇ ಹಂತದಲ್ಲಿ ಫಾಲೋಅಪ್ ಮತ್ತು ನಿಯಂತ್ರಣಕ್ಕೆ ಗಮನ ನೀಡಲಾಗುವುದು. ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸಿಕ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲಾಗುವುದು.

ಗೃಹ ಆರೋಗ್ಯ ಕಾರ್ಯಕ್ರಮದದಲ್ಲಿ ಜಿಲ್ಲೆಯಲ್ಲಿ ಇದುವರೆಗೆ 1,05,365 ರಕ್ತದೊತ್ತಡ, 78084 ಮಧುಮೇಹ, 3800 ಮಾನಸಿಕ ಆರೋಗ್ಯ ಸಮಸ್ಯೆ, 7106 ಅನಿಮಿಯಾ, 78042 ಬಾಯಿ ಕ್ಯಾನ್ಸರ್, 29848 ಸ್ತನ ಕ್ಯಾನ್ಸರ್, 8759 ಗರ್ಭಕಂಠದ ಕ್ಯಾನ್ಸರ್, 21498 ಮಧುಮೇಹ ಕಾಲು ,19279 ಡಯಾಬೇಟಿಕ್ ರೆಟಿನೋಪತಿ ಪರೀಕ್ಷೆ ಸೇರಿದಂತೆ 4 ಲಕ್ಷಕ್ಕೂ ಅಧಿಕ ತಪಾಸಣೆಗಳನ್ನು ಕೈಗೊಂಡಿದ್ದು, 8558 ಸಂಶಯಾಸ್ಪದ ಪ್ರಕರಣಗಳನ್ನು ಚಿಕಿತ್ಸೆಗೆ ವರದಿ ಮಾಡಿದ್ದು, 1303 ಮಂದಿಯಲ್ಲಿ ಹೊಸದಾಗಿ ರೋಗಗಳನ್ನು ಪತ್ತೆ ಹಚ್ಚಿದ್ದು, 16822 ಮಂದಿಗೆ ಉಚಿತವಾಗಿ ಔಷಧಗಳನ್ನು ವಿತರಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version