ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನದಿಂದ ಚುರುಕುಗೊಂಡಿರುವ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಗುಡ್ಡ ಕುಸಿತ, ಕೃತಕ ನೆರೆ, ಅವರಣಗೋಡೆ ಕುಸಿತ ಹಾಗೂ ಅಲ್ಲಲ್ಲಿ ಹಾನಿ ಸಂಭವಿಸಿವೆ.
ಶನಿವಾರದಿಂದ ಮಂಗಳೂರು ನಗರದ ಬಹುಭಾಗ ಜಲಾವೃತಗೊಂಡಿತ್ತು. ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಇಂದು ಕೂಡಾ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಜಿಲ್ಲೆಯಲ್ಲಿ ರೆಡ್ ಅಲಾರ್ಟ್ ಮುಂದುವರೆದಿದೆ.
ಪಾಂಡೇಶ್ವರದ ಶಿವನಗರದ ನಾಲ್ಕನೇ ಕ್ರಾಸ್ ಬಳಿಯ ಪ್ರದೇಶ ಮಳೆಯಿಂದ ಜಲಾವೃತಗೊಂಡಿದ್ದು, ಹಲವು ಮನೆಗಳಿಗೆ ನೆರೆ ನೀರು ನುಗ್ಗಿದೆ. ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅವಕಾಶವಿಲ್ಲದಾಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಕಂಕನಾಡಿ ಫಾದರ್ ಮುಲ್ಲರ್ ಸಂಸ್ಥೆಯ ಆವರಣ ಗೋಡೆ ಶನಿವಾರ ಸಂಜೆ ಕುಸಿದು ಸುವರ್ಣ ಲೈನ್ ರಸ್ತೆಗೆ ಬಿದ್ದ ಪರಿಣಾಮವಾಗಿ, ಆ ರಸ್ತೆ ಬಂದ್ ಆಗಿದ್ದು, ಸುವರ್ಣ ಲೈನ್ ನಾಲ್ಕನೇ ಅಡ್ಡರಸ್ತೆ ಬಳಿ ಈ ಘಟನೆ ಸಂಭವಿಸಿದೆ. ರಸ್ತೆಗೆ ಬಿದ್ದಿರುವ ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ತಕ್ಷಣ ಕೈಗೊಳ್ಳಲಾಗಿದ್ದರೂ, ಎಲ್ಲ ಕಲ್ಲುಗಳನ್ನು ತೆರವುಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮೂಡುಬಿದಿರೆಗೆ ಸಂಚರಿಸುವ ಕೆತ್ತಿಕಲ್ಲು ಪ್ರದೇಶದಲ್ಲಿ ಗುಡ್ಡ ಕುಸಿತ, ಪಡೀಲ್ ಮತ್ತು ಜೋಕಟ್ಟೆ ನಡುವಿನ ರೈಲು ಹಳಿಯ ಮೇಲೆ ಗುಡ್ಡ ಕುಸಿತಗೊಂಡಿದ್ದು, ರೈಲು ಸಂಚಾರ ವಿಳಂಭವಾಗಿದೆ.
ನೆರೆ ಸಂತ್ರಸ್ತರನ್ನು ಗಂಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ನೆರೆ ಸಂತ್ರಸ್ತರಿಗೆ ಇಂದು ಮಧ್ಯಾಹ್ನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.