ದಾಂಡೇಲಿ: ಕಾಳಿ ಹುಲಿ ಯೋಜನಾ ಪ್ರದೇಶದ ಗ್ರಾಮಸ್ಥರಿಗಾಗಿ ಬುಧವಾರ ಅಂಬಿಕಾನಗರದ ಕೆಪಿಸಿ ಸಭಾಂಗಣದಲ್ಲಿ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕೆನರಾ ಬ್ಯಾಂಕ್ ಆರ್‌ಸೆಟಿ ದಾಂಡೇಲಿ ವಿಸ್ತರಣಾ ಕೇಂದ್ರ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಕಾರವಾರ ಮತ್ತು ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಎಸ್‌ಜಿಎಂಐ ಬ್ಯಾಂಕ್ ಮತ್ತು ಸಂಶೋಧನಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಟಾಟಿಸಿ ಮಾತನಾಡಿದ ರಾಜ್ಯ ವಿದ್ಯುತ್ ನಿಗಮದ ಮುಖ್ಯ ಅಭಿಯಂತರ ಶ್ರೀಧರ ಕೋರಿ, ಯೋಜನಾ ಪ್ರದೇಶದ ಗ್ರಾಮಸ್ಥರ ಮನೆ ಬಾಗಿಲಿಗೆ ನುರಿತ ವೈದ್ಯರ ತಂಡ ಬಂದಿದ್ದು ಅದರ ಸಂಪೂರ್ಣ ಪ್ರಯೋಜನ ಸ್ಥಳೀಯರು ಉಚಿತವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರ ಕಣ್ಣಿನ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ ದೃಷ್ಟಿ ದೋಷ, ಕಣ್ಣಿನ ಸೋಂಕು, ವಯೋಸಹಜ ಬದಲಾವಣೆಗಳ ಕುರಿತಂತೆ ತಜ್ಞ ವೈದ್ಯರಿಂದ ನಿಖರವಾಗಿ ವೈಯುಕ್ತಿಕ ತಪಾಸಣೆ ನಡೆಸಿದ್ದು, ತಪಾಸಣೆಯಲ್ಲಿ 24 ಜನರಿಗೆ ಕಣ್ಣಿನ ಪೊರೆಯ ಸಮಸ್ಯೆ ಇರುವುದು ಕಂಡು ಬಂದಿದೆ. ಅವರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಈ ಶಸ್ತ್ರಚಿಕಿತ್ಸೆಯನ್ನು ಹುಬ್ಬಳ್ಳಿಯ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
