ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹೇಳಿಕೆ: ರವಿ ಕುಮಾರ್ ಸ್ಪಷ್ಟನೆ

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ಆರೋಪ.

ಈ ಆರೋಪಕ್ಕೆ ಎನ್. ರವಿ ಕುಮಾರ್ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. “ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನಾನು ಯಾವುದೇ ಅವಹೇಳನಕಾರಿಯಾಗಿ ಹೇಳಿಕೆ ನೀಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ರವಿ ಕುಮಾರ್ ಅವರು ತಮ್ಮ ಪೋಸ್ಟ್‌ನಲ್ಲಿ, “ಕೆಲ ದೃಶ್ಯ, ಮುದ್ರಣ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನಾನು ಅವಹೇಳನಕಾರಿಯಾಗಿ ಮಾತನಾಡಿದ್ದೇನೆ ಎಂದು ಪ್ರಚಾರ ಮಾಡುತ್ತಿರುವುದು ನನಗೆ ಆಘಾತವನ್ನುಂಟು ಮಾಡಿದೆ” ಎಂದು ಹೇಳಿದ್ದಾರೆ.

“ಅಧಿಕೃತ ಕೆಲಸದ ನಿಮಿತ್ತ ನಾನು ಕಳೆದ ಮೂರು ದಿನಗಳಿಂದ ಹೈದರಾಬಾದ್‌ನಲ್ಲಿ ಇದ್ದೆ. ಮಹಾದೇವಪುರ ಕ್ಷೇತ್ರದ ಕಾಡುಗೋಡಿಯ ದಲಿತ ಕುಟುಂಬಗಳು ಹಲವಾರು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಜಮೀನನ್ನು ಅರಣ್ಯ ಇಲಾಖೆಯು ವಶಕ್ಕೆ ಪಡೆಯುತ್ತಿರುವುದನ್ನು ಖಂಡಿಸಿ ದಿನಾಂಕ 30.06.2025ರಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಹಾಗೂ ನಾನು ಸೇರಿದಂತೆ ಇತರೆ ದಲಿತ ನಾಯಕರು ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆಯ ಮುಂದೆ ನಾವು ಪ್ರತಿಭಟನೆ ಮಾಡಿದ್ದೆವು” ಎಂದು ರವಿ ಕುಮಾರ್ ತಿಳಿಸಿದ್ದಾರೆ.

“ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಮಾನ್ಯ ಸಿಎಂ ಅವರು ಸಹ ಭೇಟಿಗೆ ಸಿಗುತ್ತಿಲ್ಲ, ಮಾನ್ಯ ಸಿಎಸ್ ಅವರು ಕೂಡ ಸಿಗುತ್ತಿಲ್ಲ, ಹೀಗಾಗಿ ಸಿಎಸ್ ಅವರು ಬ್ಯುಸಿ ಇರುತ್ತಾರೆ ಅನ್ನುವುದನ್ನು ಬಿಟ್ಟು ಅವರ ವಿರುದ್ದ ಯಾವುದೇ ಒಂದು ಶಬ್ದವು ಅವಹೇಳನಕಾರಿಯಾಗಿ ಮಾತನಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ಈ ಪ್ರತಿಭಟನೆ ಸಂದರ್ಭದಲ್ಲಿ ಸಿಎಸ್ ಅವರ ವಿರುದ್ಧ ಯಾವುದೇ ಭಾಷಣ ಮಾಡಿಲ್ಲ ಹಾಗೂ ನಾನು ಮಾಧ್ಯಮಗಳೊಂದಿಗೆ ಕೂಡ ಮಾತನಾಡಿಲ್ಲ. ಹೀಗಾಗಿ ಮುಖ್ಯ ಕಾರ್ಯದರ್ಶಿಯ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಪ್ರಶ್ನೆಯೇ ಈ ವಿಷಯದಲ್ಲಿ ಉದ್ಭವಿಸುವುದಿಲ್ಲ” ಎಂದು ಹೇಳಿದ್ದಾರೆ.

“ನನ್ನ ಬಗ್ಗೆ ಹರಡುತ್ತಿರುವ ವರದಿಯು ಸಂಪೂರ್ಣವಾಗಿ ಆಧಾರರಹಿತ, ದಾರಿತಪ್ಪಿಸುವ, ದುರುದ್ದೇಶಪೂರಿತ ಮತ್ತು ದೂಷಣೆಯಿಂದ ಕೂಡಿದೆ. ಸಿಎಸ್ ಅವರು ಸರ್ಕಾರದ ಕೆಲಸದಲ್ಲಿ ಬ್ಯುಸಿ ಇರುತ್ತಾರೆ ಎಂದು ಹೇಳಿದ್ದೇನೆ ಬಿಟ್ಟು, ಮುಖ್ಯ ಕಾರ್ಯದರ್ಶಿಯ ವಿರುದ್ಧ ಯಾವುದೇ ಅವಹೇಳನಕಾರಿಯಾಗಿ ಮಾತನಾಡಿಲ್ಲ, ಈ ಆರೋಪವನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ” ಎಂದು ರವಿ ಕುಮಾರ್ ಪೋಸ್ಟ್ ಹಾಕಿದ್ದಾರೆ.

ಕಾಂಗ್ರೆಸ್ ನಾಯಕರು ರವಿ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, ‘ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಬಗ್ಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್ ಬಳಸಿರುವ ಭಾಷೆ ಅಸಹ್ಯದ ಪರಮಾವಧಿ. ಚಾರಿತ್ರ್ಯಹೀನ ಬಿಜೆಪಿಯವರಿಗೆ ಹೆಣ್ಣಿನ ಬಗ್ಗೆ ಗೌರವವೇ ಇಲ್ಲ ಎಂಬುದು ರವಿಕುಮಾರ್ ಹೇಳಿಕೆಯಿಂದ ಸಾಬೀತಾಗಿದೆ. ಬಿಜೆಪಿಯವರ ಸಂಸ್ಕೃತಿಯೆ ಇದು’ ಎಂದು ತಿಳಿಸಿದ್ದರು.

‘ರವಿಕುಮಾರ್ ಈ ರೀತಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಳ್ಳುವುದು ಇದೆ ಮೊದಲೇನಲ್ಲ. ಇತ್ತೀಚೆಗಷ್ಟೇ ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧವೂ ಇಂತಹದ್ದೇ ಆಕ್ಷೇಪಾರ್ಹ ಪದ ಬಳಸಿ ಪ್ರಕರಣ ದಾಖಲಿಸಿಕೊಂಡಿದ್ದರು‌. ಪ್ರಕರಣ ದಾಖಲಾಗಿದ್ದರೂ ರವಿಕುಮಾರ್ ಕೆಟ್ಟ ಚಾಳಿ ಬಿಟ್ಟಿಲ್ಲ’ ಎಂದು ಸಚಿವರು ಪೋಸ್ಟ್ ಹಾಕಿದ್ದರು.

‘ಶ್ರೀಮತಿ ಶಾಲಿನಿ ರಜನೀಶ್ ರಾಜ್ಯದ ದಕ್ಷ ಅಧಿಕಾರಿ. ಉನ್ನತ ಹುದ್ದೆಯಲ್ಲಿರುವ ಶಾಲಿನಿ ರಜನೀಶ್ ಬಗ್ಗೆ ರವಿಕುಮಾರ್ ಆಡಿರುವ ಮಾತು ಖಂಡನೀಯ. ರವಿಕುಮಾರ್ ಈ ಕೂಡಲೇ ಶಾಲಿನಿ ರಜನೀಶ್ ಕ್ಷಮೆ ಕೇಳಬೇಕು. ಬಿಜೆಪಿ ವರಿಷ್ಠರಿಗೆ ಸ್ತ್ರೀಯರ ಬಗ್ಗೆ ಗೌರವವಿದ್ದರೆ ರವಿಕುಮಾರ್ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು‌’ ಎಂದು ಒತ್ತಾಯಸಿದ್ದರು.