ಮಂಡ್ಯ ಜಿಲ್ಲೆಗೆ ೨೫ ಸಾವಿರ ಕೋಟಿ ಅನುದಾನ ಕೊಡಿಸಲಿ: ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಸವಾಲು

ಮೈಸೂರು: ಮಂಡ್ಯ ಜಿಲ್ಲೆಗೆ ೨೫ ಸಾವಿರ ಕೋಟಿ ಅನುದಾನ ಕೊಡಿಸಲಿ. ಅವರು ಜಿಲ್ಲೆಗೆ ಯಾವುದೇ ಪ್ರಮುಖ ಯೋಜನೆ ತಂದರೆ ಅಭಿನಂದಿಸುತ್ತೇನೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾಡಿನ ರೈತರಿಗೆ ಒಳ್ಳೆ ಮಳೆ ಬೆಲೆ ಆಗಲಿ ಎಂದು ಕೇಳಿಕೊಂಡಿದ್ದೇನೆ ಎಂದರು. ಮಂಡ್ಯದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ದಿಶಾ ಸಭೆ ನಡೆಸುತ್ತಿದ್ದು ಒಳ್ಳೆಯದಾಗಲಿ. ನಾನು ಸಭೆ ಕರೆದಾಗಲೂ ಅವರು ಬಂದಿಲ್ಲ. ನನಗೆ ಮೈಸೂರಿನಲ್ಲಿ ಅಧಿಕಾರಿಗಳ ಸಭೆ ಇದೆ, ಹೀಗಾಗಿ ಅಲ್ಲಿಗೆ ಹೋಗಲು ಆಗಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಸಚಿವರಾಗಿ ಆಟೋ ನಿಲ್ದಾಣಕ್ಕೆ ೩೦ಲಕ್ಷ ಅನುದಾನ ಕೊಟ್ಟಿದ್ದಾರೆ. ಸಂಸದರಿಗೆ ೫ ಕೋಟಿ ಅನುದಾನ ಬರುತ್ತೆ ಅದರಲ್ಲಿ ಕೊಟ್ಟಿದ್ದಾರೆ. ಈ ಕೆಲಸವನ್ನ ಸುಮಲತಾ ಸಹ ಮಾಡಿದ್ದರು. ಅದನ್ನ ಎಲ್ಲರೂ ಮಾಡುತ್ತಾರೆ. ನಮಗೂ, ಅವರಿಗೂ, ಶಾಸಕ, ಸಂಸದರಿಗೂ ಫಂಡ್ ಬರುತ್ತೆ. ಅದನ್ನ ಎಲ್ಲರೂ ಖರ್ಚು ಮಾಡುತ್ತಾರೆ. ಆದರೆ ಕುಮಾರಸ್ವಾಮಿ ಜಿಲ್ಲೆಗೆ ರಾಜ್ಯಕ್ಕೆ ದೊಡ್ಡ ಮಂತ್ರಿ ಇದ್ದಾರೆ. ಜೋಶಿ, ಕುಮಾರಸ್ವಾಮಿ ಇಬ್ಬರು ಸೇರಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಕೊಡಿಸಲಿ. ಅದನ್ನು ಬಿಟ್ಟು ಬರುವ ಎಂಪಿ ಫಂಡ್ ತಂದರೆ ಅದರಲ್ಲೇನು ವಿಶೇಷ ಇದೆ? ಏನಾದ್ರೂ ವಿಶೇಷ ಅನುದಾನ ತಂದು ಅಭಿವೃದ್ದಿ ಮಾಡಲಿ. ಈಗಿನ್ನು ಒಂದು ವರ್ಷ ಆಗಿದೆ. ಇನ್ನೂ ಸಮಯ ಇದೆ ಎಂದು ಮಾರ್ಮಿಕವಾಗಿ ಹೇಳಿದರು.

ನಮ್ಮ ಸರ್ಕಾರ ೫ ವರ್ಷ ಇರುತ್ತದೆ : ರಾಜ್ಯಕ್ಕೆ ರಣದೀಪ್ ಸಿಂಗ್ ಸುರ್ಜೆವಾಲ ಭೇಟಿ ನೀಡಿ ಶಾಸಕರ ಜೊತೆ ಮಾತುಕತೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ನಮ್ಮ ಸರ್ಕಾರ ಬಂದು ಎರಡು ವರ್ಷ ಆಗಿದೆ. ಜನಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಹೆಚ್ಚಿನ ಕೆಲಸ ಮಾಡಲು ಜನರ ಅಭಿಪ್ರಾಯ ಹೇಗಿದೆ ಎಂದು ಕೇಳಲು ಬಂದಿದ್ದರು. ಜೊತೆಗೆ ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಒಗ್ಗಟ್ಟಾಗಿದ್ದಾರೆ. ಯಾರೇ ಏನು ಮಾಡಿದರು ಅವರ ಒಗ್ಗಟ್ಟು ಹೀಗೆ ಇರುತ್ತದೆ. ೫ ವರ್ಷ ಇಬ್ಬರು ಹೀಗೆ ಇರ್ತಾರೆ.
೫ ವರ್ಷ ಸಿದ್ದರಾಮಯ್ಯ ಸಿಎಂ ಆಗಿರುವ ವಿಚಾರ. ಈ ಬಗ್ಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಎಐಸಿಸಿ ನಡುವೆ ಮಾತುಕತೆ ನಡೆದಿರುವುದು ನಮಗೆ ಗೊತ್ತಿಲ್ಲ, ನಮ್ಮ ಸರ್ಕಾರ ೫ ವರ್ಷ ಇರುತ್ತದೆ ಎಂದರು.

ಸಿಎಂ ಬದಲಾವಣೆ ಹೈಕಮಾಂಡ್ ವಿವೇಚನೆಗೆ : ಮೈಸೂರು: ಸಿಎಂ ಬದಲಾವಣೆ ಕುರಿತು ಶಾಸಕರು ಬಹಿರಂಗ ಹೇಳಿಕೆ ನೀಡುವ ಮೂಲಕ ಅವರವರ ಅಭಿಪ್ರಾಯ ಹೇಳಿದ್ದಾರೆ. ನಮ್ಮ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಹಳ ಅನೂನ್ಯವಾಗಿದ್ದಾರೆ. ಯಾರು ಏನೇ ಕುತಂತ್ರ ಮಾಡಿದ್ರು ಡಿವೈಡ್ ಆಗಲ್ಲ ಎಂದು ಸಚಿವ ಚಲುವರಾಯ ಸ್ವಾಮಿ ಹೇಳಿದರು. ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕಾ ಬೇಡವಾ ಎನ್ನುವದನ್ನ ನಿರ್ಧಾರ ಮಾಡೋರು ಹೈಕಮಾಂಡ್. ಶಾಸಕರು ಅವರವರ ಅಭಿಪ್ರಾಯ ಹೇಳಿದ್ದಾರೆ ಎಂದರು.