Vande Bharat: ಬೆಂಗಳೂರಿನ ಈ ವಂದೇ ಭಾರತ್ ರೈಲಿಗೆ 16 ಬೋಗಿ

ಬೆಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು. ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಈ ಮಾದರಿ ರೈಲಿಗೆ ಭಾರೀ ಬೇಡಿಕೆ ಇದೆ. ಜುಲೈ 10ರಿಂದ ಬೆಂಗಳೂರು ನಗರದಿಂದ ಸಂಚಾರ ನಡೆಸುವ ರೈಲಿನ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.

ದಕ್ಷಿಣ ಮಧ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. ಕಾಚಿಗುಡ (ಹೈದಾರಾಬಾದ್)-ಬೆಂಗಳೂರು ನಡುವೆ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇನ್ನು ಮುಂದೆ 16 ಬೋಗಿ (14 ಚೇರ್ ಕಾರ್, 2 ಎಕ್ಸಿಕ್ಯುಟಿವ್ ಕ್ಲಾಸ್) ರೈಲಾಗಿ ಸಂಚಾರವನ್ನು ನಡೆಸಲಿದೆ.

ರೈಲು 16 ಬೋಗಿಯೊಂದಿಗೆ ಸಂಚಾರ ನಡೆಸುವುದರಿಂದ ಸದ್ಯ ಇರುವ ಸೀಟುಗಳ ಸಂಖ್ಯೆ 530 ರಿಂದ 1,128ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ಎರಡು ಐಟಿ ಸಿಟಗಳ ನಡುವೆ ಪ್ರಯಾಣ ನಡೆಸುವ ಜನರಿಗೆ ಸಹಾಯಕವಾಗಲಿದೆ.

2023ರ ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಕಾಚಿಗುಡ-ಯಶವಂತಪುರ-ಕಾಚಿಗುಡ ನಡುವಿನ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದ್ದರು. ಸದ್ಯ ರೈಲು 8 ಬೋಗಿಯನ್ನು ಹೊಂದಿದ್ದು, 530 ಸೀಟುಗಳಿವೆ.

ರೈಲು ನಂಬರ್ 20703/ 20704ಗೆ 1 ಎಕ್ಸಿಕ್ಯುಟಿವ್ ಮತ್ತು 7 ಚೇರ್ ಕಾರ್ ಸೇರಿಸಿ 8 ಬೋಗಿಯನ್ನು ಸೇರಿಸಲಿದ್ದು, ಜುಲೈ 10ರಿಂದ 16 ಬೋಗಿ ರೈಲಾಗಿ ಸಂಚಾರನ್ನು ನಡೆಸಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಹೇಳಿದೆ.

ಈ ರೈಲಿನ ಶೇ 100ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ರೈಲು ಸೇವೆಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ನೋಡಿಕೊಂಡು ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ.

ಕಾಚಿಗುಡ ರೈಲು ನಿಲ್ದಾಣದಿಂದ ಹೈದರಾಬಾದ್ ನಗರ ಹತ್ತಿರದಲ್ಲಿದೆ. ಬೆಂಗಳೂರು ಮಾದರಿಯಲ್ಲಿ ಐಟಿ ವಲಯದಲ್ಲಿ ಹೈದರಾಬಾದ್ ಸಹ ಪ್ರಮುಖವಾಗಿದ್ದು, ಪ್ರತಿದಿನ ನೂರಾರು ಜನರು ಬೆಂಗಳೂರು-ಹೈದರಾಬಾದ್ ನಡುವೆ ಸಂಚಾರ ನಡೆಸುತ್ತಾರೆ.

ವಂದೇ ಭಾರತ್ ರೈಲು ಈ ಪ್ರಯಾಣಿಕರ ಸಮಯವನ್ನು ಉಳಿತಾಯ ಮಾಡುತ್ತಿದೆ. ಈಗ ರೈಲಿನ ಸೀಟುಗಳ ಸಂಖ್ಯೆ ಹೆಚ್ಚಳ ಮಾಡುವುದರಿಂದ ಪ್ರತಿದಿನ ಸಂಚಾರ ನಡೆಸುವ ಜನರಿಗೆ ಸಹ ಅನುಕೂಲವಾಗಲಿದೆ.

ತಿರುವನಂತಪುರಂ-ಮಂಗಳೂರು ನಡುವೆ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ 16 ಬೋಗಿಯನ್ನು ಜೋಡಿಸಲಾಗಿತ್ತು. ಈಗ ಬೆಂಗಳೂರು ನಗರಕ್ಕೆ ಆಗಮಿಸುವ ರೈಲಿಗೆ ಬೋಗಿಯ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಕಾಚಿಗುಡ-ಯಶವಂತಪುರ ನಡುವೆ 2023ರಲ್ಲಿ ರೈಲು ಸಂಚಾರ ಆರಂಭವಾಯತು. 2024ರಲ್ಲಿ ರೈಲು ಸೇವೆಯ ವೇಳಾಪಟ್ಟಿನ್ನು ಪರಿಷ್ಕರಣೆ ಮಾಡಲಾಯಿತು. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬೋಗಿಗಳ ಸಂಖ್ಯೆ ಹೆಚ್ಚಿಸಿರುವುದು ಸಹಾಯಕವಾಗಲಿದೆ.

ಈ ರೈಲನ್ನು ದಕ್ಷಿಣ ಮಧ್ಯ ರೈಲ್ವೆ ಓಡಿಸುತ್ತಿದೆ. ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂದೀಪ್ ಮಾಥುರ್ ಮಾತನಾಡಿ, ಬೋಗಿಗಳ ಸಂಖ್ಯೆ ಹೆಚ್ಚಳದಿಂದ ಐಟಿ ನಗರಗಳಾದ ಹೈದರಾಬಾದ್ ಮತ್ತು ಬೆಂಗಳೂರು ನಡುವೆ ಹೆಚ್ಚಿನ ಪ್ರಯಾಣಿಕರು ಸಂಚಾರವನ್ನು ನಡೆಸಬುದು ಎಂದು ಹೇಳಿದ್ದಾರೆ.