Home ನಮ್ಮ ಜಿಲ್ಲೆ ಧಾರವಾಡ ಧಾರವಾಡ: ಇಬ್ಬರ ಗುದ್ದಾಟದಲ್ಲಿ ವಿವಿ ಆಡಳಿತ ವ್ಯವಸ್ಥೆ ಅತಂತ್ರ!

ಧಾರವಾಡ: ಇಬ್ಬರ ಗುದ್ದಾಟದಲ್ಲಿ ವಿವಿ ಆಡಳಿತ ವ್ಯವಸ್ಥೆ ಅತಂತ್ರ!

0

ರವೀಶ ಪವಾರ

ಧಾರವಾಡ ಇಷ್ಟು ದಿನಗಳವರೆಗೆ ಕಾಯಂಕುಲಪತಿಗಳಿಲ್ಲ…ಬೋಧಕ-ಬೋಧಕೇತರ ಸಿಬ್ಬಂದಿಗಳಿಲ್ಲ…ಇನ್ನು ಅನುದಾನವಂತೂ ಇಲ್ಲವೇ ಇಲ್ಲ ಎಂಬ ಮಾತುಗಳು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೇಳಿಬರುತ್ತಿದ್ದವು. ಆದರೀಗ ಕಾಯಂ ಕುಲಪತಿ, ಕುಲಸಚಿವರಿದ್ದರೂ ಆಡಳಿತ ಮಾತ್ರ ಸುಸೂತ್ರವಾಗಿ ನಡೆಯುತ್ತಿಲ್ಲ..!

ಹೌದು…ಕುಲಪತಿ ಎ.ಎಂ.ಖಾನ್ ಹಾಗೂ ಕುಲಸಚಿವ ಡಾ.ಶಂಕ್ರಪ್ಪ ವಣಿಕ್ಯಾಳ ಮಧ್ಯೆ ಮುಸುಕಿನ ಗುದ್ದಾಟ ನಡೆದಿದ್ದು, ಆಡಳಿತ ವ್ಯವಸ್ಥೆಗೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಹೊಂದಾಣಿಕೆ ಇಲ್ಲದಾಗಿದೆ. ಇದರಿಂದ ವಿಶ್ವವಿದ್ಯಾಲಯದ ಆಡಳಿತ ಡೋಲಾಯಮಾನವಾಗಿದೆ. ರಾಜ್ಯದ ಹಳೆಯ ವಿವಿಗಳಲ್ಲಿ ಕವಿವಿ ಎರಡನೇ ಸ್ಥಾನದಲ್ಲಿದ್ದು, ಆಡಳಿತ ವ್ಯವಸ್ಥೆಯ ಅತಂತ್ರತೆಯಿಂದಾಗಿ ಕವಿವಿ ತೀವ್ರ ಹಿನ್ನಡೆ
ಅನುಭವಿಸುತ್ತಿದೆ.

ಹಣಕಾಸಿನ ಅವ್ಯವಸ್ಥೆ: ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅನುದಾನದ ಸಮಸ್ಯೆಯಿಂದಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸರಕಾರ ನೇರವಾಗಿ ಆಂತರಿಕ ಸಂಪನ್ಮೂಲಗಳಿ೦ದಲೇ ಅನುದಾನ ಕ್ರೊಢೀಕರಿಸಿಕೊಳ್ಳಬೇಕು ಎಂದು ಕವಿವಿಗೆ ಸೂಚನೆ ನೀಡಿದೆ. ಇದರಿಂದ ನಿವೃತ್ತ ನೌಕರರಿಗೆ ವೇತನ ನೀಡುವುದೇ ವಿಶ್ವವಿದ್ಯಾಲಯಕ್ಕೆ ದೊಡ್ಡ ಸವಾಲಿನ ಪ್ರಶ್ನೆಯಾಗಿದ್ದು, ಇದರ ಮಧ್ಯೆ ಕುಲಸಚಿವರು ಮತ್ತು ಕುಲಪತಿಗಳ ಗುದ್ದಾಟ ವಿಶ್ವವಿದ್ಯಾಲಯವನ್ನು ಮತ್ತಷ್ಟು ಸಂಕಷ್ಟದತ್ತ ಕೊಂಡಯ್ಯಲು ದಾರಿಯಾದಂತಾಗುತ್ತದೆ ಎಂಬ ಮಾತು ಕ್ಯಾಂಪಸ್‌ನಲ್ಲಿ ಕೇಳಿ ಬರುತ್ತಿದೆ.

ಸಭೆಯಲ್ಲಿಯೇ ಗುದ್ದಾಟ: ಇತ್ತೀಚೆಗೆ ಕೆಲವು ಆಡಳಿತಾತ್ಮಕ ನಿರ್ಣಯ ಕೈಗೊಳ್ಳಲು ಡೀನ್‌ಗಳ ಸಭೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕುಲಸಚಿವರು ಮತ್ತು ಕುಲಪತಿಗಳ ಮಧ್ಯೆ ವಾಕ್‌ಸಮರ ಏರ್ಪಟ್ಟಿದ್ದು, ಸಭೆಯಲ್ಲಿದ್ದ ಎಲ್ಲ ಸಿಬ್ಬಂದಿ ಒಂದು ಕ್ಷಣ ದಂಗಾಗಿ ಕುಳಿತಿದ್ದರು ಎಂದು ಮೂಲಗಳು ತಿಳಿಸಿವೆ.

ನೇಮಕಾತಿ ಆದೇಶವೇ ಇಲ್ಲ…: ಇಷ್ಟು ಮಾತ್ರವಲ್ಲದೇ ಈಗಾಗಲೇ ವಿಶ್ವವಿದ್ಯಾಲಯದ ಅಧೀನದಲ್ಲಿ ಇರುವ ಪದವಿ ಕಾಲೇಜುಗಳು ಕಳೆದ ಆಗಸ್ಟ್‌ನಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಿವೆ. ಅಲ್ಲದೇ ಬಹುಪಾಲು ಅತಿಥಿ ಉಪನ್ಯಾಸಕರೇ ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಆ. 22ಕ್ಕೆ ಸಂದರ್ಶನ ಪ್ರಕ್ರಿಯೆ ಮುಗಿಸಲಾಗಿದೆ. ಆದರೆ, ಒಂದು ತಿಂಗಳೇ ಗತಿಸುತ್ತ ಬಂದರೂ ಈ ವರೆಗೆ ಯಾರೊಬ್ಬರಿಗೂ ನೇಮಕಾತಿ ಆದೇಶ ನೀಡಿಲ್ಲ! ಇದರಿಂದ ವಿದ್ಯಾರ್ಥಿಗಳ ಚೆಲ್ಲಾಟವಾಡಿದಂತಾಗುತ್ತಿದೆ. ಒಂದು ತಿಂಗಳಿನಿಂದ ಸರಿಯಾಗಿ ತರಗತಿಗಳೇ ನಡೆದಿಲ್ಲದಿರುವುದು ವಿದ್ಯಾರ್ಥಿಗಳಲ್ಲಿ ಅಧ್ಯಯನ ಆಸಕ್ತಿ ಕುಗ್ಗುವಂತೆ ಮಾಡಿದೆ.

ಅತಂತ್ರ ಪರಿಸ್ಥಿತಿಯಿಂದಾಗಿ ಕೇವಲ ಆಡಳಿತ ವ್ಯವಸ್ಥೆ ಮಾತ್ರವಲ್ಲದೇ ಆರ್ಥಿಕ ವ್ಯವಸೆಯೂ ಸಂಪೂರ್ಣ ಹಾಳಾಗುತ್ತಿದ್ದು, ಬಹುತೇಕ ಬಿಲ್‌ಗಳಿಗೆ ಕುಲಸಚಿವರ ಸಹಿ ಹಾಕುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ಸಾಕಷ್ಟು ಕೆಲಸ ಕಾರ್ಯಗಳು ಬಾಕಿ ಉಳಿಯುತ್ತಿದ್ದು, ವಿಶ್ವವಿದ್ಯಾಲಯದ ಎಲ್ಲ ವಿಭಾಗದ ಸಿಬ್ಬಂದಿ ಪರದಾಡುವ ಪರಿಸ್ಥಿತಿ ಎದುರಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version