ಧಾರವಾಡ: ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಈಗಾಗಲೇ ಸಿಎಂ ಹೇಳಿದ್ದಾರೆ. ಅವರು ಆ ಮಾತು ಹೇಳುವಾಗ ನಾನೂ ಅಲ್ಲೇ ಇದ್ದೆ. ಹೈಕಮಾಂಡ್ ಸೂಚನೆ ಕೊಟ್ಟ ನಂತರ ಸಿಎಂ ಆ ಮಾತು ಹೇಳಿದ್ದು, ಸಂಪುಟ ವಿಸ್ತರಣೆ ಮಾಡುವ ಅಧಿಕಾರಿ ಸಿಎಂ ಅವರಿಗೇ ಇದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ಹೇಳಿದಂತೆ ಕೆಪಿಸಿಸಿ ಅಧ್ಯಕ್ಷರು ಮತ್ತು ಸಿಎಂ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲ ಶಾಸಕರು ಬದ್ಧ. ಮಂತ್ರಿ ಮಂಡಲ ಬದಲಾವಣೆ ವೇಳೆ ಯಾರು ಕೆಲಸ ಮಾಡಿರುತ್ತಾರೆ. ಯಾರು ಕೆಲಸ ಮಾಡಿರಲ್ಲ ಅವರ ಬದಲಾವಣೆ ಮಾಡುವುದರ ಬಗ್ಗೆ ಸಿಎಂ ಗಮನಕ್ಕೆ ಇರುತ್ತದೆ. ಬದಲಾವಣೆ ಮಾಡೋದು ಒಂದು ಕಡೆ ಒಳ್ಳೆಯದು ಎಂದರೂ ಕೂಡ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರನ್ನು ಇಟ್ಟುಕೊಳ್ಳಬೇಕು. ಯಾರು ಕೆಲಸ ಮಾಡೋದಿಲ್ಲ, ಯಾರು ಶಾಸಕರಿಗೆ ಸ್ಪಂದನೆ ಮಾಡುವುದಿಲ್ಲವೋ ಅವರನ್ನು ಬದಲಾವಣೆ ಮಾಡುವುದು ಸಿಎಂ ಕಡೆ ಇದೆ ಎಂದರು.
ಕೋನರಡ್ಡಿ ಸಚಿವ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪದೇ ಪದೇ ನಾನು ಸಚಿವ ಆಗಬೇಕು ಎಂದು ಹೇಳುವುದು ಸರಿ ಎನಿಸುವುದಿಲ್ಲ. ಹೈಕಮಾಂಡ್ ಆಗಲೇ ಸೂಚನೆ ಕೊಟ್ಟಿದೆ. ಎಲ್ಲರ ವಿವರ ಪಡೆದು ತೀರ್ಮಾನ ಮಾಡುತ್ತೇವೆ ಎಂದು ಹೈಕಮಾಂಡ್ ಹೇಳಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ, ನಮ್ಮ ಗುರಿ 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಬರಬೇಕು ಹಾಗೂ ನಾವು ಪುನರಾಯ್ಕೆಯಾಗಬೇಕು ಎಂದರು.
ಸತೀಶ ಜಾರಕಿಹೋಳಿ ಬಗ್ಗೆ ಯತೀಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಕೋನರಡ್ಡಿ, ಸಿಎಂ ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ಯತೀಂದ್ರ ಕೂಡ ಹೇಳಿಕೆ ಕೊಟ್ಟಿದ್ದಾರೆ. ನಾವು ರಸ್ತೆ ಮೇಲೆ ನಿಂತು ಮಾತನಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ. ಶಾಸಕರು ಮಾತನಾಡಬಾರದು ಎಂದು ಹೈಕಮಾಂಡ್ ಹೇಳಿದೆ. ಮಾತನಾಡದಂತೆ ಇರುವುದು ಒಳ್ಳೆದು ಎಂದರು.