Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರಲ್ಲಿ ಭವಿಷ್ಯದ ರಸ್ತೆಗಳಿಗೆ ಟೋಲ್: ಜನರಿಗೆ ಹೊರೆ!

ಬೆಂಗಳೂರಲ್ಲಿ ಭವಿಷ್ಯದ ರಸ್ತೆಗಳಿಗೆ ಟೋಲ್: ಜನರಿಗೆ ಹೊರೆ!

0

ಬೆಂಗಳೂರು ನಗರದ ಸಂಚಾರ ದಟ್ಟಣೆಯಿಂದ ಕಂಗೆಟ್ಟಿರುವ ಜನರಿಗೆ ಸಿಹಿ ಮತ್ತು ಕಹಿ ಸುದ್ದಿ ಇದೆ. ಸಿಲಿಕಾನ್ ಸಿಟಿಯಲ್ಲಿ ಹೊಸ ಎಲಿವೇಟೆಡ್ ಕಾರಿಡಾರ್‌, ಡಬಲ್ ಡೆಕ್ಕರ್ ರಸ್ತೆಗಳು ಮತ್ತು ಸುರಂಗ ಮಾರ್ಗಗಳು ಬರಲಿವೆ ಎಂಬುದು ಸಂತಸದ ಸುದ್ದಿ, ಆದರೆ ಅವುಗಳಿಗೆ ಟೋಲ್ ಶುಲ್ಕ ಕಟ್ಟಬೇಕು ಎಂಬುದು ಜನರಿಗೆ ಹೊರೆ.

ಕರ್ನಾಟಕ ಸರ್ಕಾರ ಸುಮಾರು 1 ಲಕ್ಷ ಕೋಟಿಗೂ ಹೆಚ್ಚು ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಹಣಕಾಸು ಒದಗಿಸಲು ಟೋಲ್ ಸಂಗ್ರಹಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ 40 ಕಿ.ಮೀ. ಸುರಂಗ ರಸ್ತೆ, 38 ಕಿ.ಮೀ. ಡಬಲ್ ಡೆಕ್ಕರ್ ಕಾರಿಡಾರ್‌ಗಳು ಮತ್ತು ಸುಮಾರು 124 ಕಿ.ಮೀ. ಫ್ಲೈಓವರ್‌ಗಳು ಹಾಗೂ ಅಂಡರ್‌ಪಾಸ್‌ಗಳು ನಗರದಲ್ಲಿ ನಿರ್ಮಾಣವಾಗಲಿವೆ.

ಈ ಬೃಹತ್ ಯೋಜನೆಗಳು ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಮುಕ್ತಿ ನೀಡುವ ಗುರಿ ಹೊಂದಿವೆ. ಆದರೆ, ಅಸ್ತಿತ್ವದಲ್ಲಿರುವ ಅಥವಾ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಯೋಜನೆಗಳಿಗೆ ಟೋಲ್ ಅನ್ವಯಿಸುವುದಿಲ್ಲ. ಹೊಸದಾಗಿ ಬರುವ ಯೋಜನೆಗಳಿಗಷ್ಟೇ ಈ ಶುಲ್ಕ ವಿಧಿಸಲಾಗುತ್ತದೆ.

ಯಾವೆಲ್ಲಾ ರಸ್ತೆಗಳಿಗೆ ಟೋಲ್?: ಯಶವಂತಪುರ-ಕೆ.ಆರ್.ಪುರ, ನಾಗವಾರ-ಬಾಗಲೂರು, ರಾಗಿಗುಡ್ಡ-ಕನಕಪುರ ಮುಖ್ಯ ರಸ್ತೆ ಸೇರಿದಂತೆ 124 ಕಿ.ಮೀ. ಯೋಜನೆಗಳು ಪ್ರಸ್ತುತ ಪರಿಕಲ್ಪನಾ ಹಂತದಲ್ಲಿವೆ. ಅವುಗಳಿಗೆ ವಿವರವಾದ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಆದರೆ, ಡಬಲ್ ಡೆಕ್ಕರ್ ರಸ್ತೆ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ.

ಈ ಯೋಜನೆಗಳಿಗೆ ರಾಜ್ಯ ಸರ್ಕಾರ ರೂ. 3,880 ಕೋಟಿ ನೀಡಿದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರೂ. 970 ಕೋಟಿ ಸಂಗ್ರಹಿಸಲಿದೆ. ಬಿ-ಸ್ಮೈಲ್ ಸಾಲಗಳ ಮೂಲಕ ಯೋಜನಾ ವೆಚ್ಚದ ಅರ್ಧದಷ್ಟು ಹಣವನ್ನು ಸಂಗ್ರಹಿಸಿ, ಟೋಲ್ ಶುಲ್ಕದಿಂದ ಬಾಕಿಗಳನ್ನು ಪಾವತಿಸಲು ಯೋಜಿಸಿದೆ.

ಯೋಜನೆಗೆ ಹಣ ಹೇಗೆ?: ಈ ಯೋಜನೆಗಳಿಗೆ ಒಟ್ಟು ವೆಚ್ಚದಲ್ಲಿ ರಾಜ್ಯ ಸರ್ಕಾರ ತನ್ನ ಪಾಲನ್ನು ನೀಡಲಿದೆ. ಉಳಿದ ಹಣವನ್ನು ಖಾಸಗಿ ಸಂಸ್ಥೆಗಳ ಮೂಲಕ ನಿರ್ಮಾಣ-ಸ್ವಂತ-ನಿರ್ವಹಣೆ-ವರ್ಗಾವಣೆ ಮಾದರಿಯಲ್ಲಿ ಸಂಗ್ರಹಿಸಲಾಗುತ್ತದೆ. ಇಲ್ಲವೇ, ಸಾಲಗಳ ಮೂಲಕ ಹಣ ಹೊಂದಿಸಲಾಗುತ್ತದೆ.

ಯೋಜನೆಗಳನ್ನು ಕಾರ್ಯಗತಗೊಳಿಸಲಿರುವ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್)ಗೆ ಆದಾಯದ ಖಾಯಂ ಮೂಲವಿಲ್ಲ. ಹೀಗಾಗಿ, ಅವರು ಪಡೆದಿರುವ ಸಾಲಗಳನ್ನು ಮರುಪಾವತಿಸಲು ಹಣಕಾಸು ಇಲಾಖೆ ಟೋಲ್ ಸಂಗ್ರಹಿಸುವ ವಿಧಾನವನ್ನು ಸೂಚಿಸಿದೆ.

ಬಿ-ಸ್ಮೈಲ್‌ನ ತಾಂತ್ರಿಕ ನಿರ್ದೇಶಕ ಬಿ.ಎಸ್.ಪ್ರಹಲ್ಲಾದ್ ಈ ಬಗ್ಗೆ ಮಾತನಾಡಿ, “ಸಂಚಾರ ದಟ್ಟಣೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು, ನಾವು 200 ಕಿ.ಮೀ.ಗೂ ಹೆಚ್ಚು ಸಾಂದ್ರತೆಯ ಕಾರಿಡಾರ್‌ಗಳಲ್ಲಿ ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತಿದ್ದೇವೆ. ಸರ್ಕಾರ ಭಾಗಶಃ ಹಣ ನೀಡುತ್ತಿರುವುದರಿಂದ, ಸಂಪನ್ಮೂಲಗಳನ್ನು ಸಂಗ್ರಹಿಸಲು ಟೋಲ್ ಉತ್ತಮ ಮಾರ್ಗ” ಎಂದು ಹೇಳಿದ್ದಾರೆ.

ಬಿ-ಸ್ಮೈಲ್ ಈಗಾಗಲೇ 16.5 ಕಿ.ಮೀ.ಉದ್ದದ ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ಮಾರ್ಗಕ್ಕೆ ಪ್ರತಿ ಕಿಲೋಮೀಟರ್‌ಗೆ ರೂ. 19ಶುಲ್ಕ ವಿಧಿಸುವ ಪ್ರಸ್ತಾವನೆ ಸಲ್ಲಿಸಿದೆ. ಇದು ಅಂತಿಮಗೊಂಡರೆ, ಪ್ರಯಾಣಿಕರು 600ಕ್ಕೂ ಹೆಚ್ಚು ಪಾವತಿಸಬೇಕಾಗಬಹುದು. ಡಬಲ್ ಡೆಕ್ಕರ್ ರಸ್ತೆಗಳಿಗೆ ಟೋಲ್‌ ದರಗಳನ್ನು ಇನ್ನೂ ಅಂತಿಮಗೊಳಿಸಿಲ್ಲ.

NO COMMENTS

LEAVE A REPLY

Please enter your comment!
Please enter your name here

Exit mobile version