ಮಾಲತೇಶ ಹೂಲಿಹಳ್ಳಿ
ಹುಬ್ಬಳ್ಳಿ: ಪ್ರಾಥಮಿಕ ಶಿಕ್ಷಣದಿಂದಲೇ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಗ್ರಾಮೀಣ ಪ್ರದೇಶಗಳಲ್ಲೂ ಮಕ್ಕಳಿಗೆ ನಗರದಲ್ಲಿ ಸಿಗುವಂತಹ ಶೈಕ್ಷಣಿಕ ಸೌಲಭ್ಯ ಸಿಗಬೇಕು ಎಂಬ ನಿಟ್ಟಿನಲ್ಲಿ ಸರಕಾರ ಸರಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಗಳಾಗಿ ರೂಪಂತರಿಸಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲೂ 18 ಶಾಲೆಗಳು ಕೆಪಿಎಸ್ ಶಾಲೆಗಳಾಗುತ್ತಿವೆ.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಪ್ರಾಥಮಿಕ, ಪ್ರೌಢ ಹಾಗೂ ದ್ವಿತೀಯ ಪಿಯುಸಿಯವರೆಗೂ ಶಿಕ್ಷಣ ಪಡೆಯಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಪ್ರೌಢಶಾಲೆ ಹಾಗೂ ಪಿಯುಸಿ ಕಲಿಕೆಯಿಂದ ಮಕ್ಕಳು ಹಿಂದೆ ಸರಿಯುತ್ತಿದ್ದಾರೆ. ಅಲ್ಲದೆ, ಗುಣಮಟ್ಟದ ಶಿಕ್ಷಣ ಸಿಗದೇ ವಿದ್ಯಾರ್ಥಿಗಳ ಹಿಂಜರಿಕೆಯಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಹಾಗೂ ಶಿಕ್ಷಣದಿಂದ ಯಾವ ಮಕ್ಕಳು ಹಿಂದೆ ಉಳಿಯಬಾರದು ಜೊತೆಗೆ ಶಾಲಾ ದಾಖಾಲಾತಿ ಹೆಚ್ಚಿಸಬೇಕು ಎಂಬ ಸರಕಾರದ ನಿರ್ಧಾರದಿಂದ ಒಂದೇ ಕ್ಯಾಂಪಸ್‌ನಲ್ಲಿ ಕೆಪಿಎಸ್ ಶಾಲೆ ತೆರೆಯುವುದಕ್ಕೆ ಒತ್ತು ನೀಡಲಾಗಿದೆ.
ದ್ವಿಭಾಷಾ ಮಾಧ್ಯಮ, ನವೀನ ಪಾಠಕ್ರಮ: ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಕನ್ನಡ-ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತದೆ. 6 ರಿಂದ 10ನೇ ತರಗತಿವರೆಗೆ ಏಕ ತರಗತಿ ಪಠ್ಯಕ್ರಮ ಮತ್ತು ಕ್ರಿಯಾಶೀಲ ಕಲಿಕಾ ಪದ್ಧತಿ ಇರಲಿದೆ. 10 ರಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ನಿರ್ಗಮನ ಆಯ್ಕೆ ಆಯ್ಕೆಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.
ಎಲ್ಲೇಲ್ಲಿ ಕೆಪಿಎಸ್ ಶಾಲೆಗಳು: ಧಾರವಾಡ ಜಿಲ್ಲೆಯಲ್ಲಿ ಒಟ್ಟು 18 ಕೆಪಿಎಸ್ ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ನವಲಗುಂದ 3, ಧಾರವಾಡ 5, ಹುಬ್ಬಳ್ಳಿ 7, ಕುಂದಗೋಳ 1, ಕಲಘಟಗಿ 2 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ನವಲಗುಂದ ಕೋಳಿವಾಡ ಗ್ರಾಮದ ಶ್ರೀ ಆರ್.ಡಿ.ಪಾಟೀಲ ಜಿಎಚ್‌ಎಸ್ ಶಾಲೆ, ನಲವಡಿಯ ಶ್ರೀಮತಿ ಕೆ.ಟಿ.ಎಂ. ಇಂಡಿಪೆಡೆಂಟ್ ಜಿಜೆಪಿಯುಸಿ ಸ್ಕೂಲ್, ಅಣ್ಣಿಗೇರಿಯ ಜಿಎಚ್‌ಪಿಎಸ್ ನಂ.2 ಶಾಲೆ, ಹೆಬ್ಬಳ್ಳಿಯ ಜಿಎಚ್‌ಪಿಎಸ್ ಮತ್ತು ಜಿಎಚ್‌ಎಸ್ ಮಾಡೆಲ್ ಸ್ಕೂಲ್, ತಡಕೋಡದ ಜಿಎಚ್‌ಪಿಎಸ್ ಮತ್ತು ಜಿಎಚ್‌ಎಸ್ ಮಾಡೆಲ್ ಸ್ಕೂಲ್, ಯಾದವಾಡದ ಓಎಚ್‌ಎಸ್ ಮತ್ತು ಜಿಐ ಐಪಿಎಸ್ ಸ್ಕೂಲ್, ಸಂಶಿಯ ಶ್ರೀಮತಿ ಎನ್.ಸಿ.ಅಕ್ಕಿ ಸರಕಾರಿ ಪ್ರೌಢಶಾಲೆ, ಅದರಗುಂಚಿಯ ಓಎಚ್‌ಎಸ್ ಶಾಲೆ, ಹುಬ್ಬಳ್ಳಿಯ ತಬಿಬಲ್ಯಾಂಡ್‌ನ ಉರ್ದು ಹೈಯರ್ ಪ್ರೈಮರಿ ಸ್ಕೂಲ್, ವೀರಾಪುರ ಓಣಿಯ ಕೆಬಿಎಸ್ ಮತ್ತು ಕೆಜಿಎಸ್ ಶಾಲೆ, ಘಂಟಿಕೇರಿ ಜಿಎಂಜಿಎಸ್, ಎಂಎಲ್‌ಎ ಬಾಯ್ಸ್ ಸ್ಕೂಲ್, ನೇತಾಜಿ ಸುಭಾಸ್ ಚಂದ್ರ ಬೋಸ್ ವಸತಿ ಶಾಲೆ, ಗಾಮನಗಟ್ಟಿಯ ಜಿಎಚ್‌ಪಿಎಸ್ ಶಾಲೆ, ಉಣಕಲ್ ಗ್ರಾಮದ ಜಿಎಂಪಿಎಸ್ ಶಾಲೆ, ನವಲೂರಿನ ಜಿಎಚ್‌ಎಸ್ ಶಾಲೆ, ಕಲಘಟಗಿಯ ತಂಬೂರಿನ ಜಿಎಚ್‌ಪಿಎಸ್ ಶಾಲೆ, ಗಂಬ್ಯಾಪುರದ ಜಿಎಚ್‌ಪಿಎಸ್ ಶಾಲೆ ಹಾಗೂ ಮನಗುಂಡಿಯ ಜಿಎಚ್‌ಪಿಎಸ್ ಮತ್ತು ಜಿಎಚ್‌ಎಸ್ ಶಾಲೆಯನ್ನು ಆಯ್ಕೆ ಮಾಡಲಾಗಿದೆ.
ಪ್ರತಿ ಶಾಲೆಗೆ 2 ರಿಂದ 4 ಕೋಟಿ ರೂ. ಅನುದಾನ: ಜಿಲ್ಲೆಯಲ್ಲಿ ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೇರಿಸುತ್ತಿರುವ ಪ್ರತಿ ಕೆಪಿಎಸ್ ಶಾಲೆಯಲ್ಲಿ 1200 ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಸಮರ್ಪಕ ಮೂಲ ಸೌಕರ್ಯಗಳನ್ನು ನಿರ್ಮಿಸಲು ಹಾಗೂ ಶೌಚಾಲಯ, ಸ್ಮಾರ್ಟ್ಕ್ಲಾಸ್, ಪ್ರಯೋಗಶಾಲೆ, ಗ್ರಂಥಾಲಯ, ಮೈದಾನ ಸೇರಿದಂತೆ ವಿವಿಧ ಮೂಲಸೌಕರ್ಯ ಒದಗಿಸಲು ಏಷಿಯನ್ ಡೆವಲ್ಪಮೆಂಟ್ ಬ್ಯಾಂಕ್ ಹಾಗೂ ರಾಜ್ಯ ಸರಕಾರದಿಂದ 2 ಕೋಟಿಯಿಂದ 4 ಕೋಟಿ ರೂಗಳವರೆಗೆ ಅನುದಾನ ನೀಡಲಾಗುತ್ತಿದೆ. ಶಾಲೆಯ ಅಭಿವೃದ್ಧಿ ಯೋಜನೆಯ ಮೇಲೆ ಅನುದಾನ ಬಿಡುಗಡೆ ಮಾಡಲಾಗುವುದು.
ಧಾರವಾಡ ಜಿಲ್ಲೆಯಲ್ಲಿ 18 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ರೂಪಾಂತರಿಸಲು ಸರಕಾರ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ.
ಎಸ್.ಎಂ.ಹುಡೇದಮನಿ, ಜಿಲ್ಲಾ ಉಪಯೋಜನಾಧಿಕಾರಿಗಳು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಧಾರವಾಡ.
