Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು–ಮುಂಬೈ ಸೂಪರ್ ಫಾಸ್ಟ್ ರೈಲುಗೆ ಅನುಮೋದನೆ

ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು–ಮುಂಬೈ ಸೂಪರ್ ಫಾಸ್ಟ್ ರೈಲುಗೆ ಅನುಮೋದನೆ

0

ಹುಬ್ಬಳ್ಳಿ: ಕರ್ನಾಟಕದ ಬಹು ನಿರೀಕ್ಷಿತ ರೈಲು ಸಂಪರ್ಕ ಯೋಜನೆಗೆ ಇಂದು ಹಸಿರು ನಿಶಾನೆ ದೊರೆತಿದೆ. ಹುಬ್ಬಳ್ಳಿ–ಧಾರವಾಡ ಮೂಲಕ ಸಂಚರಿಸುವ ಬೆಂಗಳೂರು–ಮುಂಬೈ ಸೂಪರ್ ಫಾಸ್ಟ್ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಧಿಕೃತ ಅನುಮೋದನೆ ನೀಡಿದ್ದಾರೆ.

ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, “ಇದು ನಮ್ಮ ಬಹುದಿನದ ಬೇಡಿಕೆಯಾಗಿತ್ತು. ನಾನು ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಈ ರೈಲು ಸೇವೆಗಾಗಿ ವಿನಂತಿಸಿದ್ದೆ. ಕೊನೆಗೂ ಅದು ಸಫಲವಾಗಿದೆ,” ಎಂದು ಹೇಳಿದ್ದಾರೆ.

ಹೊಸ ಸೂಪರ್ ಫಾಸ್ಟ್ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ–ಧಾರವಾಡ ಮತ್ತು ಬೆಳಗಾವಿ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಆರಂಭವಾಗುವುದರಿಂದ ಮಧ್ಯ ಕರ್ನಾಟಕದ ಜನತೆ, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯಾಪಾರ ವಲಯದವರಿಗೆ ಅಪಾರ ಅನುಕೂಲ ಸಿಗಲಿದೆ.

ಪ್ರಲ್ಹಾದ ಜೋಶಿ ಅವರು ಮುಂದುವರೆದು, “ಈ ಹೊಸ ರೈಲು ಮಾರ್ಗದಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ವ್ಯಾಪಾರ–ವಹಿವಾಟು ಮತ್ತಷ್ಟು ಚುರುಕಾಗಲಿದೆ. ಪ್ರಯಾಣಿಕರ ಅನುಭವ ಸುಧಾರಿಸಲು ಹಾಗೂ ಸಂಚಾರ ಸಮಯವನ್ನು ಕಡಿಮೆ ಮಾಡಲು ರೈಲ್ವೆ ಇಲಾಖೆ ಕೈಗೊಂಡಿರುವ ಈ ಹೆಜ್ಜೆ ಪ್ರಶಂಸನೀಯ,” ಎಂದು ತಿಳಿಸಿದ್ದಾರೆ.

ಬೆಂಗಳೂರು–ಮುಂಬೈ ನಡುವಿನ ರೈಲು ಸಂಚಾರವು ಈಗಾಗಲೇ ವ್ಯಾಪಕ ಬಳಕೆಯಲ್ಲಿದ್ದು, ಹೊಸ ಸೂಪರ್ ಫಾಸ್ಟ್ ರೈಲು ಪ್ರಾರಂಭವಾದರೆ ಎರಡೂ ನಗರಗಳ ನಡುವಿನ ಸಂಪರ್ಕ ವೇಗ ಮತ್ತು ಅನುಕೂಲತೆಯ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version