ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನತೆಗೆ ಬಹು ನಿರೀಕ್ಷಿತವಾದ ಹೊಸ ರೈಲು ಸಂಪರ್ಕದ ಸುದ್ದಿ ಹೊರಬಿದ್ದಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿರಂತರ ಒತ್ತಾಯದ ನಂತರ, ರೈಲ್ವೆ ಇಲಾಖೆ ಹುಬ್ಬಳ್ಳಿ–ಬೆಂಗಳೂರು ಮಾರ್ಗದ ಹೊಸ ವಿಶೇಷ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ.
ಈ ರೈಲು ಡಿಸೆಂಬರ್ 8ರಿಂದ ಪ್ರತಿದಿನ ಸಂಚರಿಸಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಹೊಸ ರೈಲಿಗೆ ಸಂಖ್ಯೆ 20687 (ಹುಬ್ಬಳ್ಳಿ–ಬೆಂಗಳೂರು) ಹಾಗೂ 20688 (ಬೆಂಗಳೂರು–ಹುಬ್ಬಳ್ಳಿ) ಎಂದು ನಿಗದಿಪಡಿಸಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಮಾಡಿದ್ದು “ನಾನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಹುಬ್ಬಳ್ಳಿ–ಬೆಂಗಳೂರು ನಡುವಿನ ದೈನಂದಿನ ರೈಲು ಸಂಚಾರದ ಅಗತ್ಯತೆಯನ್ನು ಮನವಿ ಮಾಡಿದ್ದೆ. ಇದೀಗ ನಮ್ಮ ಮನವಿಗೆ ಸ್ಪಂದಿಸಿ ಸಚಿವರು ಅನುಮೋದನೆ ನೀಡಿದ್ದಾರೆ,” ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತೊಂದು ಹಾದಿ: ಈ ಹೊಸ ರೈಲು ಸಂಚಾರವು ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ರಾಜ್ಯದ ರಾಜಧಾನಿ ಬೆಂಗಳೂರಿಗೆ ಇನ್ನಷ್ಟು ಬಲವಾಗಿ ಸಂಪರ್ಕಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅದೇ ಸಮಯದಲ್ಲಿ ಈ ರೈಲು ಉತ್ತರ ಕರ್ನಾಟಕದ ವ್ಯಾಪಾರ, ಉದ್ಯಮ, ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ಹೊಸ ದಾರಿ ತೆರೆದಿಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಪ್ರಯಾಣಿಕರ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು, ಈ ರೈಲು ಆಧುನಿಕ ಸೌಲಭ್ಯಗಳೊಂದಿಗೆ ವೇಗವಾದ ಸಂಚಾರವನ್ನು ನೀಡಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಪ್ರಯಾಣಿಕರು ಹಾಗೂ ವ್ಯಾಪಾರ ವಲಯಗಳು ಈ ನಿರ್ಧಾರವನ್ನು ಸ್ವಾಗತಿಸಿದ್ದು. ಪ್ರತಿದಿನದ ಸಂಪರ್ಕದಿಂದ ಹುಬ್ಬಳ್ಳಿ–ಬೆಂಗಳೂರು ನಡುವಿನ ಪ್ರಯಾಣ ಸುಲಭವಾಗುತ್ತದೆ, ಸಮಯ ಉಳಿತಾಯವಾಗುತ್ತದೆ, ವ್ಯವಹಾರಕ್ಕೂ ಉತ್ತೇಜನ ಸಿಗುತ್ತದೆ.