Home ನಮ್ಮ ಜಿಲ್ಲೆ ಧಾರವಾಡ ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆ ಸರ್ಕಾರ ಈಡೇರಿಸಲಿ, ವಿಳಂಬ ಮಾಡಿದಷ್ಟು ಜಟಿಲ

ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆ ಸರ್ಕಾರ ಈಡೇರಿಸಲಿ, ವಿಳಂಬ ಮಾಡಿದಷ್ಟು ಜಟಿಲ

0

ಹುಬ್ಬಳ್ಳಿ : ಕಬ್ಬು ಬೆಳೆಗಾರರ ಬೇಡಿಕೆ ನ್ಯಾಯಯುತವಾಗಿದೆ. ಹಾಗೆ ನೋಡಿದರೆ ಹಿಂದೆ ಎಲ್ಲಾ ಪ್ರತಿ ಟನ್ ಕಬ್ಬಿಗೆ 4,500 ರೂ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಈಗ ಕನಿಷ್ಠ 3.500 ರೂ ಪ್ರತಿ ಟನ್‌ಗೆ ಕೇಳುತ್ತಿದ್ದಾರೆ. ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಶಾಸಕ ದರ್ಶನ ಪುಟ್ಟಣ್ಣಯ್ಯ ಒತ್ತಾಯಿಸಿದರು.

ಗುರುವಾರ ವಿಧಾನಸಭಾ ಅರ್ಜಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ, ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿದ ಅವರು ಕಬ್ಬು ಬೆಳೆಗಾರರು ಎದುರಿಸಿಕೊಂಡು ಬಂದಿರುವ ಸಮಸ್ಯೆ, ಸಂಕಷ್ಟಗಳು ಸರ್ಕಾರದಲ್ಲಿರುವವರಿಗೆ ಗೊತ್ತಿಲ್ಲದ ಸಂಗತಿಗಳೇನಲ್ಲ. ಎಲ್ಲವೂ ಗೊತ್ತಿರುವಂತದ್ದೆ. ರೈತರು ಮತ್ತೆ ಮತ್ತೆ ಪ್ರತಿ ವರ್ಷ ಬೆಲೆಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ಹೋಗಲಾಡಬೇಕು.

ಬೇರೆ ರಾಜ್ಯಗಳಲ್ಲಿ ಕಬ್ಬಿಗೆ ಬೆಲೆ ಕಡಿಮೆಯಾದಾಗ ಅಲ್ಲಿ ರಾಜ್ಯ ಸಲಹಾ ಬೆಲೆ ( ಎಸ್‌ಎಪಿ ) ಹೆಚ್ಚುವರಿ ಮೊತ್ತ ಸೇರಿಸಿ ರೈತರ ನೆರವಿಗೆ ಧಾವಿಸುತ್ತವೆ. ಪಂಜಾಬ್, ತಮಿಳುನಾಡು, ಹರಿಯಾಣ ರಾಜ್ಯದಲ್ಲಿ ಈ ವ್ಯವಸ್ಥೆ ಇದೆ. ಆದರೆ, ನಮ್ಮ ರಾಜ್ಯದಲ್ಲಿ ಈ ರೀತಿ ಬೆಲೆ ಸಂಕಷ್ಟ ರೈತರು ಎದುರಿಸಿದಾಗ ಅವರ ನೆರವಿಗಾಗಿ ರಾಜ್ಯ ಸಲಹಾ ಬೆಲೆ ವ್ಯವಸ್ಥೆ ( ಎಸ್‌ಎ ಪಿ ) ಇಲ್ಲ. ಅಲ್ಲದೇ ಇಂಥ ಸಮಸ್ಯೆ ಎದುರಾದಾಗ ಬಗೆಹರಿಸಲು ನಿರ್ದಿಷ್ಟ ಅನುದಾನ ಕಾಯ್ದಿರಿಸಿಲ್ಲ . ಈ ವ್ಯವಸ್ಥೆ ಇದ್ದರೆ ರೈತರಿಗೆ ಸಹಕಾರಿಯಾಗುತ್ತಿತ್ತು ಎಂದರು.

ಈಗ ರೈತರು ಕೇಳುತ್ತಿರುವ ಬೆಲೆ ಸೂಕ್ತವಾಗಿದೆ. ಬೇರೆ ರಾಜ್ಯಗಳು ಎಷ್ಟು ಕೊಡುತ್ತವೆ ಎನ್ನುದಕ್ಕಿಂತ ನಮ್ಮ ರೈತರಿಗೆ ಒಂದಿಷ್ಟು ಹೆಚ್ಚಿನ ಬೆಲೆಯನ್ನೇ ದೊರಕಿಸುವ ಪ್ರಯತ್ನ ಸರ್ಕಾರ ಮಾಡಬೇಕು. ಕೂಡಲೇ ಸ್ಪಂದಿಸದಿದ್ದರೆ ಮತ್ತಷ್ಟು ರೈತರ ಹೋರಾಟ ಜಟಿಲವಾಗುತ್ತದೆ. ಇದರಲ್ಲಿ ರೈತರು ಸರ್ಕಾರದ ಜೊತೆ ಮಾತುಕತೆ ನಡೆಸುವುದೇನಿದೆ ಎಂದು ಪ್ರಶ್ನಿಸಿದ ಅವರು, ಬೇಡಿಕೆ ಈಡೇರಿಸಿದರೆ ರೈತರ ಸಮಸ್ಯೆ ಇತ್ಯರ್ಥವಾಗೇ ಹೋಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ನಾನೂ ಕೂಡಾ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗಿಯಾಗಲು ಮದ್ಯಾಹ್ನ ಹೊರಟ್ಟಿದ್ದೇನೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version